Advertisement

ದೇಶದಲ್ಲಿ ಹೆಣ್ಣಿನ ಪ್ರಮಾಣ ಇಳಿಮುಖ ವಿಷಾದಕರ: ತಿಳಗುಂಜಿ

03:17 PM Feb 27, 2018 | |

ಸಿಂದಗಿ: ದೇಶದಲ್ಲಿ ಮಹಿಳೆಯರಿಗೆ ಪೂಜ್ಯನೀಯ ಸ್ಥಾನವಿದ್ದರೂ ದೇಶದಲ್ಲಿ ಹೆಣ್ಣಿನ ಜನನ ಪ್ರಮಾಣ ಇಳಿಮುಖವಾಗುತ್ತಿರುವುದು, ಹೆಣ್ಣು ಭ್ರೂಣ ಹತ್ಯೆಯಾಗುತ್ತಿರುವುದು ವಿಷಾದಕರ ಸಂಗತಿ ಎಂದು ಸಿಂದಗಿಯ ಕಿರಿಯ ಶ್ರೇಣಿ ನ್ಯಾಯಾಧೀಶ ರಾಜಶೇಖರ ತಿಳಗುಂಜಿ ವಿಷಾದಿಸಿದರು.

Advertisement

ಸೋಮವಾರ ಪಟ್ಟಣದ ಮಿನಿ ವಿಧಾನಸೌಧ ಆವರಣದಲ್ಲಿನ ಸ್ತ್ರೀ ಶಕ್ತಿ ಭವನದಲ್ಲಿ ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ವಿಜಯಪುರ ಶಿಶು ಅಭಿವೃದ್ಧಿ ಯೋಜನೆ ಇವರ ಸಹಯೋಗದಲ್ಲಿ ಹಮ್ಮಿಕೊಂಡ ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮ ಕುರಿತು ಗ್ರಾಮ ಪಂಚಾಯತ್‌
ಮಟ್ಟದಲ್ಲಿ ಅರಿವು ಮೂಡಿಸುವ ಸಂಚಾರಿ ಬಸ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು.

ತಾಯಿಯಾಗಿ, ಪತ್ನಿಯಾಗಿ, ಅತ್ತೆಯಾಗಿ, ಅಕ್ಕ-ತಂಗಿಯಾಗಿ ಹೆಣ್ಣು ಬೇಕು ಆದರೆ ಹೆಣ್ಣು ಮಗುವಿನ ಜನನ ಬೇಡ ಎನ್ನುವ ಸಮಾಜವನ್ನು ನಾವು ಧಿಕ್ಕರಿಸೋಣ. ಸಮಾಜದಲ್ಲಿ ಇಂದು ಲಿಂಗಾನುಪಾತ ಅಂತರವಾಗುತ್ತಿದೆ. ಇದರಿಂದ ಸಮಾಜದ ಸ್ಥಿತಿಗತಿಗಳು ಬದಲಾಗುವ ಸಾಧ್ಯತೆಗಳು ಹೆಚ್ಚು. ಆದ್ದರಿಂದ ಕೇಂದ್ರ ಸರಕಾರ ಬೇಟಿ ಬಚಾವೋ ಬೇಟಿ ಪಡಾವೋ ಆಂದೋಲನ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ ಎಂದರು.

ಮಕ್ಕಳಲ್ಲಿ ಹೆಣ್ಣು-ಗಂಡು ಎಂಬ ಭೇದ ಪಾಲಕರು ಮಾಡಬಾರದು. ಹೆಣ್ಣು ಕೂಡಾ ಗಂಡಿನಷ್ಟೇ ಸಮರ್ಥಳು ಎಂದು ಅನೇಕ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ತೋರಿಸಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿಯೂ ವೀರ ಮಹಿಳೆಯರು ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ಹೆಣ್ಣು ಎಂದು ಕಿಳರಿಮೆಯಿಂದ ನೋಡಬೇಡಿ. ಅವಳಿಗೂ ಶಿಕ್ಷಣ ನೀಡಿ, ಸ್ವಾತಂತ್ರ್ಯ ನೀಡಿ ಅವಳಲ್ಲಿರುವ ಪ್ರತಿಭೆಗೆ ಪ್ರೋತ್ಸಾಹಿಸಿ ಅವಳು ಸಾಧನೆ ಮಾಡುತ್ತಾಳೆ. ಹೆಣ್ಣು ಮಗು ಹೆತ್ತೇನೆಂದು ತಾಯಂದಿರು ಚಿಂತಿಸದೇ ಹೆಮ್ಮೆಪಡಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜಿ.ಎಸ್‌. ಗುಣಾರಿ ಮಾತನಾಡಿ, ಹೆಣ್ಣೆಂದು ಹಿಂಜರಿಯದೆ ಅವಳಿಗೆ ಉನ್ನತ ಶಿಕ್ಷಣ ನೀಡಿ ಅವಳು ಸಮಾಜಕ್ಕೆ ಉತ್ತಮ ಕೊಡುಗೆ ನೀಡುವ ಸಾಮರ್ಥ್ಯ ಹೊಂದುತ್ತಾಳೆ. ಇಂದಿನ ವೈಜ್ಞಾನಿಕ ಮತ್ತು ಆಧುನಿಕ ಜಗತ್ತಿನಲ್ಲಿ ಚಿಂತನೆ ಮಾಡಿದಲ್ಲಿ ಹೆಣ್ಣು ಮತ್ತು ಗಂಡು ಎಂಬ ಭೇದವಿಲ್ಲ. ಪ್ರತಿ ಕ್ಷೇತ್ರದಲ್ಲಿ ಹೆಣ್ಣು ಗಂಡಿನಷ್ಟೇ ಸಮರ್ಥ ಮತ್ತು ಉನ್ನತ ಸಾಧನೆ ಮಾಡಿದ್ದಾಳೆ ಎಂದರು.

Advertisement

ಕಾರ್ಯಕ್ರಮದ ಕುರಿತು ಗ್ರಾಮೀಣ ಜನತೆಯಲ್ಲಿ ಅರಿವು ಮೂಡಿಸಲು ಫೆ. 26ರಂದು ತಾಲೂಕಿನ ರಾಂಪುರ, ರಾಮನಳ್ಳಿ ಮತ್ತು ಫೆ. 27ರಂದು ಕೊಕಟನೂರ, ಮಣ್ಣೂರ ಗ್ರಾಪಂ ವ್ಯಾಪ್ತಿಯಲ್ಲಿ ಅರಿವು ಮೂಡಿಸಲಾಗುವದು. ನಂತರ ಈ ಸಂಚಾರಿ ಬಸ್‌ ಇಂಡಿ ತಾಲೂಕಿಗೆ ಹೊರಡಲಿದೆ ಎಂದರು.

ವಕೀಲರ ಸಂಘದ ಅಧ್ಯಕ್ಷ ಬಿ.ಸಿ. ಕೊಣ್ಣೂರ ಮಾತನಾಡಿ, ಯಾವುದೋ ಮೌಡ್ಯಕ್ಕೆ ಬಲಿಯಾಗಿ ಹೆಣ್ಣು ನಮ್ಮ ಬಾಳಿಗೆ ಹುಣ್ಣು ಎಂದು ತಿಳಿದಿದ್ದೇವೆ. ಅದರಿಂದ ನಾವು ಹೊರ ಬರಬೇಕು. ಹೆಣ್ಣು ಮಗು ಜನಿಸಿದರು ನಾವು ಸಂಭ್ರಮಿಸಬೇಕು. ಕೇಂದ್ರ ಸರಕಾರ ಪ್ರಾರಂಭಿಸಿದ ಬೇಟಿ ಬಚಾವೋ, ಬೇಟಿ ಪಡಾವೋದಂತಹ ಜನಪ್ರೀಯ ಕಾರ್ಯಕ್ರಮಗಳು ಹೆಣ್ಣು ಮಗುವಿನ ಭವಿಷತ್ತಿನ ಉಜ್ವಲತೆಯ
ಪ್ರತೀಕವಾಗಿವೆ ಎಂದರು. 

ವಕೀಲರ ಬಿ.ಎಸ್‌. ಮಠ, ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮದ ಜಿಲ್ಲಾ ಉಸ್ತುವಾರಿ ಕೃಷ್ಣಮೂರ್ತಿ, ಸಾಂತ್ವಾನ ಕೇಂದ್ರದ ಸುಜಾತಾ ಕಲಬುರ್ಗಿ, ಮಹಿಳಾ ವಸತಿ ನಿಲಯದ ಮೇಲ್ವಿಚಾರಕಿ ಜಯಶ್ರೀ ಬಿರಾದಾರ, ಮಹಿಳಾ ಜಾಗೃತಿ ವೇದಿಕೆ ಅಧ್ಯಕ್ಷೆ ಶೈಲಜಾ ಸ್ಥಾವರಮಠ, ಗ್ರಾಪಂ ಸದಸ್ಯೆ ಅನಸೂಯಾ ಪರಗೊಂಡ, ಅಕ್ಕಮ್ಮ ಪಡೆಕನೂರ ಹಾಗೂ ಅಂಗನವಾಡಿ ಮೇಲ್ವಿಚಾರಕಿಯರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next