ಮುದ್ದೇಬಿಹಾಳ: ಸಂತ ಸೇವಾಲಾಲರು ಕಾಲಜ್ಞಾನಿಯಾಗಿದ್ದರು ಎಂದು ಇತಿಹಾಸದಲ್ಲಿ ಉಲ್ಲೇಖವಿದೆ. ಇಂತಹ ಮಹಾನ್ ಸಂತನನ್ನು ದೈವವಾಗಿ ಪೂಜಿಸುತ್ತಿರುವ ಬಂಜಾರ ಸಮಾಜದವರು ಎಲ್ಲ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಬೇಕು ಎಂದು ಸ್ಥಳೀಯ ಶಾಸಕ, ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಸಿ.ಎಸ್. ನಾಡಗೌಡ ಹೇಳಿದರು.
ಇಲ್ಲಿನ ಮಿನಿ ವಿಧಾನಸೌಧ ಆವರಣದಲ್ಲಿ ತಾಲೂಕು ಆಡಳಿತ ವತಿಯಿಂದ ಗುರುವಾರ ಏರ್ಪಡಿಸಿದ್ದ ಸಂತ ಶ್ರೀ ಸೇವಾಲಾಲರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಂಜಾರ ನಿಗಮ ಸ್ಥಾಪನೆಯಾದ ನಂತರ ತಾಲೂಕಿನ ಬಂಜಾರ ಸಮಾಜಕ್ಕೆ ಸರ್ಕಾರ ನೀಡಿದ ಅಭಿವೃದ್ಧಿ ಕೊಡುಗೆಗಳ ಕುರಿತು ಶಾಸಕರು ಮಾಹಿತಿ ನೀಡಿದರು.
ವಿಜಯಪುರದ ನಿವೃತ್ತ ಪ್ರಾಚಾರ್ಯ ಕೆ.ಎಲ್. ನಾಯಕ ಸೇವಾಲಾಲ್ ಮತ್ತು ಬಂಜಾರ ಸಮಾಜದ ಕುರಿತು ವಿಶೇಷ
ಉಪನ್ಯಾಸ ನೀಡಿದರು. ತಾಪಂ ಉಪಾಧ್ಯಕ್ಷ ಮಂಜುನಾಥಗೌಡ ಪಾಟೀಲ, ತಾಲೂಕು ಬಂಜಾರ ಸೇವಾ ಸಂಘದ ಅಧ್ಯಕ್ಷ ನಾನಪ್ಪ ಲಮಾಣಿ ಬಂಜಾರ ಸಮಾಜ ಕುರಿತು ಮಾತನಾಡಿದರು.
ಜಿಪಂ ಸದಸ್ಯೆ ಪ್ರೇಮಬಾಯಿ ಚವ್ಹಾಣ, ತಾಪಂ ಸದಸ್ಯ ಪ್ರೇಮಸಿಂಗ್ ಚವ್ಹಾಣ, ತಹಶೀಲ್ದಾರ್ ಎಂಎಎಸ್ ಬಾಗವಾನ, ತಾಪಂ ಇಒ ಡಾ| ಸುರೇಶ ಭಜಂತ್ರಿ, ತಾಲೂಕು ಆರೋಗ್ಯಾಧಿಕಾರಿ ಡಾ| ಸತೀಶ ತಿವಾರಿ, ಸಮಾಜ ಕಲ್ಯಾಣಾಧಿಕಾರಿ ಎನ್.ಆರ್. ಉಂಡಿಗೇರಿ, ಪುರಸಭೆ ಸದಸ್ಯ ಕೃಷ್ಣಾಜಿ ಪವಾರ, ಗೋವಾ ವಿಮೋಚನಾ ಹೋರಾಟಗಾರ ಬಿ.ಎಚ್. ಮಾಗಿ, ತಾಲೂಕು ಕಸಾಪ ಅಧ್ಯಕ್ಷ ಎಂ.ಬಿ. ನಾವದಗಿ, ಕರ್ನಾಟಕ ಕೋ ಆಪ್ ಬ್ಯಾಂಕ್ ನಿರ್ದೇಶಕ ವಕೀಲ ಶಶಿಕಾಂತ ಮಾಲಗತ್ತಿ, ದೈಹಿಕ ಶಿಕ್ಷಣಾಧಿಕಾರಿ ಎಸ್.ಬಿ. ಚಲವಾದಿ, ಲಕ್ಷ್ಮೀಬಾಯಿ ರಾಠೊಡ, ರಾಮಚಂದ್ರ ಲಮಾಣಿ, ಬಿ.ಎಸ್. ಜಾಧವ, ಬಿ.ಎಸ್. ಲಮಾಣಿ, ಲಕ್ಷ್ಮಣ ಲಮಾಣಿ ಮತ್ತಿತರರು ವೇದಿಕೆಯಲ್ಲಿದ್ದರು.
ಬಂಜಾರ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಪುಂಡಲಿಕ ನಾಯಕ ಸ್ವಾಗತಿಸಿದರು. ಟಿ.ಡಿ. ಲಮಾಣಿ ನಿರೂಪಿಸಿ, ವಂದಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಆಲಮಟ್ಟಿ ರಸ್ತೆಯಲ್ಲಿರುವ ಸಂತ ಸೇವಾಲಾಲರ ವೃತ್ತಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಲಂಬಾಣಿ ವೇಷಧಾರಿಗಳಾದ ಬಂಜಾರ ಮಹಿಳೆಯರ ನೃತ್ಯ, ಪೂರ್ಣಕುಂಭ ಸಮೇತ ಸೇವಾಲಾಲರ ಭಾವಚಿತ್ರ ಮೆರವಣಿಗೆ ಮಿನಿ ವಿಧಾನಸೌಧದವರೆಗೂ ಸಾಗಿತು. ಶಾಸಕ ನಾಡಗೌಡ ಸೇರಿದಂತೆ ನಾನಾ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು, ಬಂಜಾರ ಸಮಾಜದ ಮುಖಂಡರು, ಸದಸ್ಯರು ಭಾಗವಹಿಸಿದ್ದರು.