Advertisement

ಸೀನಿಯಾರಿಟಿ ಎಂಬುದು ಒಂದು ಹೊಣೆಗಾರಿಕೆ

07:19 PM Jun 27, 2019 | Team Udayavani |

ಸೀನಿಯರ್! ಸೀನಿಯರ್! ಕಾಲೇಜು ಬದುಕಿನಲ್ಲಿ ಪ್ರತಿಯೊಬ್ಬರೂ ಕೇಳ ಬಯಸುವ ಶಬ್ದ ಇದು. “ಈ ಬಾರಿ ನಾವು ಸೀನಿಯರ್’ ಎನ್ನುತ್ತ ರಜೆಯಲ್ಲಿ ವಾಟ್ಸಾಪ್‌ ಸ್ಟೇಟಸ್‌ಗಳಲ್ಲಿ ರಾರಾಜಿಸಿದ್ದೇ ಬಂತು, ಕಾಲೇಜು ಶುರುವಾಗಿದ್ದೇ ತಡ, ಗೊತ್ತಾಯಿತು! ಸೀನಿಯರ್ ಎಂದರೆ ಒಂದು ಸ್ಥಾನ ಎನ್ನುವುದಕ್ಕಿಂತ ಹೆಚ್ಚಾಗಿ, “ಜವಾಬ್ದಾರಿ’. ಕಾಲೇಜಿನಲ್ಲಿ ಒಂದು ಹವಾ ಸೃಷ್ಟಿಸುವ ಕನಸುಗಳೇನೋ ಕಂಡಿದ್ದೆವು, ಆದರೆ, ವಾಸ್ತವದಲ್ಲಿ ನಾವು ನಮ್ಮ ತಂಗಿ-ತಮ್ಮಂದಿರಿಗೆ ಮಾರ್ಗದರ್ಶಕರು ಎನ್ನುವ ಅನ್ನುವ ಆಸನದ ಪಟ್ಟಾಭಿಷೇಕ ಮೊದಲ ದಿನವೇ ಆಯಿತು. ಒಂದೆಡೆ ಕಾಲೇಜಿನಲ್ಲಿ ಎರಡು ವರ್ಷ ಇದ್ದ ಅನುಭವ ತುಂಬಿದ ಕೊಡ, ಇನ್ನೊಂದೆಡೆ ಇನ್ನೂ ಬೆಳವಣಿಗೆ ಕಾಣದ ಹುಚ್ಚು ಮನಸ್ಸು.

Advertisement

ಕಾಲೇಜಿನ ಮೊದಲ ದಿನಕ್ಕೂ ಫೈನಲ್‌ ಇಯರ್‌ನ ಮೊದಲ ದಿನಕ್ಕೂ ವ್ಯತ್ಯಾಸವಿತ್ತು. ಎರಡು ವರುಷ ಕಾಲೇಜು ತುಂಬಾ ಓಡಾಡಿದ ಅವಿಸ್ಮರಣೀಯ ದಿನಗಳು ನಮ್ಮೊಂದಿಗಿದ್ದವು. ನಿಜ. ಆದರೆ, ಹೊಸ ಮುಖಗಳನ್ನು ನೋಡುವ-ಪರಿಚಯವಾಗುವ ತವಕ ನಮ್ಮಲ್ಲಿತ್ತು. ಕಾರಿಡಾರ್‌ನಲ್ಲಿ ನಿಂತು ಜೂನಿಯರ್‌ಗಳನ್ನು ಹುಡುಕುವ ಕಣ್ಣುಗಳು ಇದ್ದವು. ಆದರೆ, ಈ ತಮಾಷೆಗಳ ನಡುವೆ ಜವಾಬ್ದಾರಿಗಳನ್ನು ನಿಭಾಯಿಸಬೇಕಾಗಿದೆ. ನಮ್ಮ ವಿಭಾಗದಿಂದ ಯೋಜಿಸುವ ಎಲ್ಲ ಕಾರ್ಯಕ್ರಮವನ್ನು ಶಿಸ್ತುಬದ್ಧವಾಗಿ ನಡೆಸಿಕೊಡುವ ಹೊಣೆಗಾರಿಕೆ ನಮಗಿದೆ. ಶೈಕ್ಷಣಿಕ ವರ್ಷದಲ್ಲಿ ಮಾಡಿ ಮುಗಿಸುವ ಸೆಮಿನಾರ್‌-ಪ್ರಾಜೆಕ್ಟ್ಗಳ ಸಂಖ್ಯೆ ಹೆಚ್ಚಾಗಿಯೇ ಇತ್ತು. ಎಲ್ಲ ವಿಷಯಗಳಿಗೆ ಎರಡೆರಡು ಪೇಪರ್! ಎಲ್ಲವನ್ನೂ ಕೇಳುತ್ತ ತಲೆ ಗಿರ್‌ ಎನ್ನದೇ ಇರುತ್ತ ! ಇವೆಲ್ಲದರ ನಡುವೆ ಫ್ರೆಂಡ್ಸ್‌ಗಳೊಂದಿಗೆ ಕಾಲಕಳೆಯುವುದು ಯಾವಾಗ ಎನ್ನುವ ಚಿಂತೆ ಬೇರೆ !

ಮೊದಲ ದಿನ ತರಗತಿಗಳು ಮುಗಿದಾಗ ಗ್ರಂಥಾಲಯದತ್ತ ಹೆಜ್ಜೆ ಹಾಕುವ ಅನಿವಾರ್ಯತೆ ಇದೆ ಎನ್ನುವುದು ಸ್ಪಷ್ಟವಾಯಿತು. ಅಂತೂ ಇಂತೂ ಫೈನಲ್‌ ಇಯರ್‌, ಕಾಲೇಜಿನ ಎಲ್ಲ ಕಾರ್ಯಕ್ರಮಗಳಿಗೆ ತಪ್ಪದೇ ಹಾಜರಾಗಬೇಕು ಎನ್ನುವುದು ಮೊದಲ ಪ್ರತಿಜ್ಞೆಯಾಗಿತ್ತು. ಕಾಲೇಜಿನಲ್ಲಿರುವ ಪ್ರತಿಕ್ಷಣವನ್ನು ಆಸ್ವಾದಿಸುತ್ತ ನೆನಪಿನ ಪುಟಗಳಿಗೆ ಮತ್ತಷ್ಟು ಘಟನೆಗಳನ್ನು ಸೇರಿಸಬೇಕು ಎನ್ನುವ ಆಸೆ. ಇದೆಲ್ಲದರ ಜೊತೆ ಮುಂದೇನು?ಎನ್ನುವ ಚಿಂತೆ. ಇನ್ನೇನು ಕಣ್ಮುಚ್ಚಿ ತೆಗೆಯುವುದರೊಳಗೆ ಪರೀಕ್ಷೆಗಳು ಬರುತ್ತವೆ, ಅದಾದ ನಂತರ ಪ್ರತಿಯೊಬ್ಬರು ಕೇಳುವ ಪ್ರಶ್ನೆ ಡಿಗ್ರಿ ಆಯಿತು, ಮುಂದೇನು? ನಮಗೂ ಅದು ಗೊಂದಲದಿಂದ ಕೂಡಿದ ಪ್ರಶ್ನೆ. ಡಿಗ್ರಿಗೆ ಬರುವಾಗ ಇದ್ದ ಕನಸುಗಳಲ್ಲಿ ಹೆಚ್ಚು ಕಡಿಮೆ ಅರ್ಧಕ್ಕರ್ಧ ಮರೆತು ಹೋಗಿರುತ್ತವೆ, ಇಲ್ಲವೇ ನಮಗೆ ಆ ದಾರಿ ಸರಿಯಿಲ್ಲ ಎಂದು ಅನ್ನಿಸಿ ಬಿಡುತ್ತದೆ. ಆದರೆ, ಪ್ರತಿಯೊಬ್ಬನಿಗೂ ಇರುವ ಆಸೆ ಸ್ವಂತ ಕಾಲಿನಲ್ಲಿ ನಿಲ್ಲಬೇಕು ಎಂದು.

ಈ ಕೊನೆ ಹಂತದಲ್ಲಿ ಒಂದೆಡೆ ಇನ್ನೇನು ಡಿಗ್ರಿ ಮುಗಿಯುತ್ತದೆ ಎನ್ನುವ ಖುಷಿ, ಇನ್ನೊಂದೆಡೆ ಗೆಳೆಯರನ್ನು ಬಿಟ್ಟು ಅಗಲುವ ಬೇಸರ. ಕಾಲೇಜು-ಉಪನ್ಯಾಸಕರು ಎಲ್ಲರನ್ನೂ ಬಿಟ್ಟು ಹೋಗಬೇಕೆಂಬ ದುಃಖ ಮನಸ್ಸಿನ ಮೂಲೆಯಲ್ಲಿ ಒಡೆಯಲಾರಂಭಿಸಿದೆ ಎಂದರೆ ತಪ್ಪಾಗುವುದಿಲ್ಲ. ಈ ಡಿಗ್ರಿ ಲೈಫ್ನ ಕೊನೆಯ ಹಂತದಲ್ಲಿ ನಿಂತು ಒಂದು ಬಾರಿ ಹಿಂದಕ್ಕೆ ತಿರುಗಿ ಬಂದ ಹಾದಿಯನ್ನು ನೋಡಿದಾಗ ಪ್ರತಿ ಹೆಜ್ಜೆಗೂ ಹೇಳಲು ಒಂದೊಂದು ಕಥೆ ಇದ್ದವು, ಪ್ರತಿ ಹಂತದಲ್ಲೂ ಸಿಕ್ಕ ಆತ್ಮೀಯ ಸ್ನೇಹಿತರಿದ್ದರು. ಜೀವನಕ್ಕೆ ಬೇಕಾಗುವ ಅನುಭವಗಳಿದ್ದವು ಎನ್ನುವುದು ವಾಸ್ತವ.

ಅನಘಾ ಶಿವರಾಮ್‌
ತೃತೀಯ ಪತ್ರಿಕೋದ್ಯಮ ವಿಭಾಗ,  ವಿವೇಕಾನಂದ ಕಾಲೇಜು, ಪುತ್ತೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next