ಉಡುಪಿ: ಶಿರಿಯಾರ ಗ್ರಾಮದ ಹಿರಿಯ ಬಡಗು ತಿಟ್ಟಿನ ಯಕ್ಷಗಾನ ಕಲಾವಿದ ಜಂಬೂರು ರಾಮಚಂದ್ರ ಶಾನುಭಾಗ್ ಅವರು ಫೆ.5 ರಂದು ನಿಧನ ಹೊಂದಿದ್ದಾರೆ.ಅವರಿಗೆ 84ವರ್ಷ ವಯಸ್ಸಾಗಿತ್ತು.
ಮಂದಾರ್ತಿ, ಮಾರಣಕಟ್ಟೆ, ಅಮೃತೇಶ್ವರೀ, ಇಡಗುಂಜಿ, ಪೆರ್ಡೂರು, ಹಾಲಾಡಿ, ಗುಂಡುಬಾಳ, ಕಮಲಶಿಲೆ ಮೇಳ ಸೇರಿದಂತೆ
ಸುಮಾರು ಐದೂವರೆ ದಶಕಗಳ ಕಾಲ ಯಕ್ಷರಂಗದಲ್ಲಿ ದಿಗ್ಗಜ ಕಲಾವಿದರೊಂದಿಗೆ ಒಡನಾಡಿಯಾಗಿ ಕಲಾಸೇವೆಗೈದ ಇವರು ಯಕ್ಷಗಾನ ಕ್ಷೇತ್ರದಲ್ಲಿ ತಮ್ಮದೇ ಆದ ವೈಶಿಷ್ಟ್ಯ ಪೂರ್ಣ ಪಾತ್ರಗಳಿಂದ ತನ್ನದೇ ಆದ ಛಾಪು ಮೂಡಿಸಿದ್ದರು.ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಸಣ್ಣ ಪಾತ್ರಗಳ ಮೂಲಕ ಕಲಾ ಜೀವನ ಆರಂಭಿಸಿದ ಶಾನುಭಾಗರು ದಿಗ್ಗಜ ಕಲಾವಿದರಾದ ಹಾರಾಡಿ ರಾಮಗಾಣಿಗರು, ಕುಷ್ಠ ಗಾಣಿಗರು, ನಾರಾಯಣ ಗಾಣಿಗರು,ಕುಂಜಾಲು ಶೇಷಗಿರಿ ಕಿಣಿ, ಜಾನುವಾರುಕಟ್ಟೆ ಗೋಪಾಲಕೃಷ್ಣ ಕಾಮತ್, ಕೆರೆಮನೆ ಮಹಾಬಲ ಹೆಗಡೆ, ಶಂಭು ಹೆಗಡೆ, ಕುಂಜಾಲು ರಾಮಕೃಷ್ಣ ಮೊದಲಾದ ದಿಗ್ಗಜ ಕಲಾವಿದರೊಂದಿದೆ ಪಾತ್ರಗಳನ್ನು ನಿರ್ವಹಿಸಿ ದಶಕಗಳ ಹಿಂದೆ ಬಯಲಾಟ ಮತ್ತು ಡೇರೆ ಮೇಳಗಳಲ್ಲಿ ತನ್ನನ್ನು ತಾನು ಕಾಣಿಸಿಕೊಂಡು ಚಿರಪರಿಚಿತ ಕಲಾವಿದರಾಗಿದ್ದರು.