Advertisement

ನೆಟ್ಲ ಶಾಲೆ ಉಳಿಸಲು ಹಿರಿಯ ವಿದ್ಯಾರ್ಥಿಗಳ ಅಭಿಯಾನ

05:45 AM Feb 07, 2019 | |

ಬಂಟ್ವಾಳ: ರಟ್ಟಿನ ಮಾದರಿಯ ಶಾಲೆಯೊಂ ದನ್ನು ನಿರ್ಮಿಸಿ ‘ನೀವು ಕನ್ನಡ ಅಭಿಮಾನಿಯೇ, ನಮ್ಮೂರು ಸರಕಾರಿ ಕನ್ನಡ ಶಾಲೆ ಉಳಿಸಲು ಕನಿಷ್ಠ 10 ರೂ. ದಾನ ಮಾಡುವಿರಾ’ ಎಂಬ ಮನವಿಯ ಪೋಸ್ಟರ್‌ ಹಿಡಿದು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸಂದರ್ಭ ನಗರದ ಪುರಭವನದ ಮುಂಭಾಗದ ಮೆಟ್ಟಲುಗಳ ಮಧ್ಯೆ ಜ. 31ರಂದು ಇಬ್ಬರು ಯುವಕರು ಗಮನ ಸೆಳೆದಿದ್ದರು. ತಾವು ಕಲಿತ ನೆಟ್ಲ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯನ್ನು ಉಳಿಸ ಬೇಕು ಎಂಬ ನಿಟ್ಟಿನಲ್ಲಿ ಇಲ್ಲಿನ ಹಿರಿಯ ವಿದ್ಯಾರ್ಥಿಗಳ ಪ್ರಯತ್ನ ಜನತೆಯ ಮೆಚ್ಚುಗೆ ಪಡೆದಿದೆ.

Advertisement

ಗೋಳ್ತಮಜಲು ಗ್ರಾಮ ಕೇಂದ್ರ ಕಲ್ಲಡ್ಕದಿಂದ ಸುಮಾರು 3 ಕಿ.ಮೀ. ದೂರ, ನಿಟಿಲಾಪುರ ದೇವ ಸ್ಥಾನಕ್ಕೆ ಸುಮಾರು ಅರ್ಧ ಕಿ.ಮೀ. ಅಂತರದಲ್ಲಿ ಈ ನೆಟ್ಲ ಹಿ.ಪ್ರಾ. ಶಾಲೆ ಇದೆ. ಸುಮಾರು 55 ವರ್ಷಗಳ ಇತಿಹಾಸವಿರುವ ಈ ಶಾಲೆಯಲ್ಲಿ ಇದೀಗ 1ರಿಂದ 7ನೇ ತರಗತಿ ತನಕ 64 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಶಾಲೆಯನ್ನು ಉಳಿಸಿ ಅಭಿವೃದ್ಧಿ ಪಡಿಸಬೇಕು ಎಂಬ ನಿಟ್ಟಿನಲ್ಲಿ ಹಳೆ ವಿದ್ಯಾರ್ಥಿಗಳು ಹಿರಿಯ ವಿದ್ಯಾರ್ಥಿ ಸಂಘದ ಹಾಗೂ ಶಾಲಾಭಿವೃದ್ಧಿ ಸಮಿತಿಯ ಸಹಕಾರದೊಂದಿಗೆ ವಿನೂತನ ರೀತಿಯಲ್ಲಿ ಅಭಿಯಾನ ಆರಂಭಿಸಿದ್ದಾರೆ.

ತಿಂಗಳ ಹಿಂದೆ ಬೆಂಗಳೂರಿನಲ್ಲಿ ರಟ್ಟಿನ ಮಾದರಿಯ ಶಾಲೆಯನ್ನು ನಿರ್ಮಿಸಿ ಧನ ಸಂಗ್ರಹ ನಡೆಸಿದ್ದ ಕಲಾವಿದ ಜಯರಾಮ್‌ ನಾವಡ ಮತ್ತು ಮೆಡಿಕಲ್‌ ಪ್ರತಿನಿಧಿ ವಿನಯ್‌ ಎನ್‌. ಇದೀಗ ಮಂಗಳೂರಿನಲ್ಲಿಯೂ ಈ ಅಭಿಯಾನ ಮುಂದುವರಿಸಿದ್ದಾರೆ. ಇವರೊಂದಿಗೆ ಇತರ ವಿದ್ಯಾರ್ಥಿಗಳು ಸಾಥ್‌ ನೀಡುತ್ತಿದ್ದಾರೆ.

ಶೈಕ್ಷಣಿಕ ಕಾಳಜಿ
ಊರ ಶಾಲೆಯನ್ನು ಉಳಿಸಲು ಹೆಸರು, ಯಾವುದೇ ಪ್ರಚಾರ ಬಯಸದೆ ಮಾಡುತ್ತಿರುವ ಪ್ರಯತ್ನ ನಿಜವಾದ ಶೈಕ್ಷಣಿಕ ಕಾಳಜಿ. ಇಲ್ಲಿನ ಗ್ರಾಮ ಪಂಚಾಯತ್‌ ಸದಸ್ಯ, ಹಿರಿಯ ವಿದ್ಯಾರ್ಥಿ ಗಿರೀಶ್‌ ಕುಲಾಲ್‌, ಮೆಡಿಕಲ್‌ ರೆಪ್‌ ವಿನಯ್‌ ಎನ್‌. ಸಹಿತ 25 ಮಂದಿಯ ತಂಡ ಕೆಲಸ ಮಾಡುತ್ತಿದ್ದು, ಬಡಮಕ್ಕಳ ಶಿಕ್ಷಣಕ್ಕೆ ಪ್ರೇರಣೆಯಾಗಲು ಈ ಅಭಿಯಾನಕ್ಕೆ ಕೈಜೋಡಿಸುವಂತೆ ಮನವಿ ಮಾಡಿದೆ.

ಅನುದಾನ ದೊರಕುತ್ತಿಲ್ಲ
ಇಲ್ಲಿನ ಮುಖ್ಯ ಸಮಸ್ಯೆ ಎಂದರೆ ಶಾಲಾ ಕಟ್ಟಡ ಖಾಸಗಿ ವ್ಯಕ್ತಿಯೊಬ್ಬರ ಪಟ್ಟಾ ಜಮೀನಿನಲ್ಲಿದೆ. ಹಾಗಾಗಿ ಸರಕಾರದಿಂದ ಯಾವುದೇ ಅನುದಾನ ಶಾಲೆಗೆ ದೊರಕುತ್ತಿಲ್ಲ. ಇದರಿಂದ ಕಟ್ಟಡ ದುರಸ್ತಿ ಸಾಧ್ಯವಾಗಿಲ್ಲ. ಪರಿಹಾರ ಕ್ರಮವಾಗಿ ಪಟ್ಟಾ ಜಮೀನುದಾರರಿಗೆ ಅದರ ಮೌಲ್ಯ ನೀಡಿ ಜಾಗ ಪಡೆಯಲು ಹಳೆ ವಿದ್ಯಾರ್ಥಿ ಸಂಘ ಮುಂದಾಗಿದ್ದು, ಅದಕ್ಕಾಗಿ 10 ರೂ. ಅಭಿಯಾನಕ್ಕೆ ಚಾಲನೆ ನೀಡಿದೆ.

Advertisement

ಶಾಲೆಯ ಹೆಸರಿಗೆ ಜಮೀನು
ನಾವು ಕಲಿತ ಈ ಶಾಲೆ ಉಳಿಯಬೇಕು ಎಂಬುದು ನಮ್ಮ ಅಭಿಲಾಷೆ. ಊರವರ ಮತ್ತು ಹೆತ್ತವರ ಅಪೇಕ್ಷೆಯಂತೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಲು ಸಾಧ್ಯವಾಗಿದೆ. ಮುಂದೆಯೂ ಮಕ್ಕಳ ಸಂಖ್ಯೆ ಹೆಚ್ಚಿಸಲು ಪ್ರಯತ್ನಿಸುತ್ತೇವೆ. ಶಾಲೆಗೆ ಸುಸಜ್ಜಿತ ಕಟ್ಟಡ ನಿರ್ಮಿಸಲು ಖಾಸಗಿ ವ್ಯಕ್ತಿಯ ಹೆಸರಿನಲ್ಲಿರುವ ಜಮೀನನ್ನು ಶಾಲೆಯ ಹೆಸರಿನಲ್ಲಿ ಮಾಡಬೇಕಾಗಿದೆ. 
-ಜಯರಾಮ ನಾವಡ
ಅಭಿಯಾನದ ರೂವಾರಿ

ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳಲಿ
ಶಾಲೆಯು ಖಾಸಗಿ ವ್ಯಕ್ತಿಯ 49 ಸೆಂಟ್ಸ್‌ ಪಟ್ಟಾ ಜಮೀನಿನಲ್ಲಿದೆ. ಅದನ್ನು ಶಾಲೆಯ ಹೆಸರಿಗೆ ಮಾಡಿಸಿಕೊಳ್ಳಲು ಧನ ಸಂಗ್ರಹಕ್ಕೆ ಇಳಿದಿದ್ದೇವೆ. ಒಬ್ಬೊಬ್ಬರು ಕನಿಷ್ಠ 10 ರೂ. ನೀಡಿದರೆ ಒಂದಷ್ಟು ಹಣ ಸಂಗ್ರಹವಾದೀತು ಎಂಬ ವಿಶ್ವಾಸ ನಮ್ಮದು. ಈಗಾಗಲೇ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೆ ಪ್ರಯೋಜನವಾಗಲಿಲ್ಲ. ವಿಶಿಷ್ಟ ಅಭಿಯಾನದ ಮೂಲಕ ಅವರು ಎಚ್ಚೆತ್ತುಕೊಂಡಾರು ಎಂಬ ಆಸೆ ನಮ್ಮದು. 
-ಅನಿಲ್‌ ಕಮಾರ್‌
ಅಧ್ಯಕ್ಷರು, ಹಿರಿಯ ವಿದ್ಯಾರ್ಥಿ ಸಂಘ

Advertisement

Udayavani is now on Telegram. Click here to join our channel and stay updated with the latest news.

Next