ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕ್ ಮಂಗಳೂರಿನ ಉಲ್ಲಾಳದ ಸುದರ್ಶನ್ (85) ಅನಾರೋಗ್ಯ ಸಮಸ್ಯೆಯಿಂದ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ನಿಧನರಾದರು.
ವಯೋಸಹಜವಾದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಕೆಲವು ದಿನಗಳಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬುಧವಾರ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.
ಕಂದಾಯ ಇಲಾಖೆಯ ಅಧಿಕಾರಿಯಾಗಿ, ತಹಶೀಲ್ದಾರರಾಗಿ ಕೆಲವರ್ಷ ಸೇವೆ ಸಲ್ಲಿಸಿದ್ದ ಸುದರ್ಶನ್ ಅವರು, ವೃತ್ತಿ ಜೀವನಕ್ಕೆ ಸ್ವಯಂ ನಿವೃತ್ತಿ ಘೋಷಿಸಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕರಾಗಿ ಜೀವನವನ್ನು ದೇಶ ಸೇವೆಗೆ ಸಮರ್ಪಿಸಿಕೊಂಡಿದ್ದರು.
ಚಿಕ್ಕಮಗಳೂರು ಜಿಲ್ಲಾ ಪ್ರಚಾರಕರಾಗಿ ಸೇವೆ ಸಲ್ಲಿಸಿದ್ದ ಅವರು, ಹಿಂದೂ ಸೇವಾ ಪ್ರತಿಷ್ಠಾನದಲ್ಲಿ ಬಹು ವರ್ಷಗಳ ಸೇವೆ ಸಲ್ಲಿಸಿದ್ದರು. ಹಿಂದೂ ಜೀವನ ದೀಪಿಕಾ ದೂರಶಿಕ್ಷಣ ಕೋರ್ಸ್‌ನ ಪಠ್ಯಕ್ರಮ ಸಿದ್ಧಪಡಿಸಲು ಮತ್ತು ಅದನ್ನು ರೂಪಿಸಲು ಸಾಕಷ್ಟು ಶ್ರಮಿಸಿದ್ದರು.
ತಮ್ಮ ಸಾವಿನ ನಂತರ ಕಣ್ಣು ಮತ್ತು ಇಡೀ ಶರೀರವನ್ನು ದಾನ ಮಾಡುವಂತೆಯೂ ಆತ್ಮೀಯರಲ್ಲಿ ಹೇಳಿಕೊಂಡಿದ್ದರು. ಸುದರ್ಶನ್ ಅವರ ಶ್ರದ್ಧಾಂಜಲಿ ಸಭೆ ಗುರುವಾರ ಬೆಳಗ್ಗೆ 7.15ಕ್ಕೆ ಚಾಮರಾಜ ಪೇಟೆಯ ಕೇಶವಕೃಪಾದಲ್ಲಿ ನಡೆಯಲಿದೆ ಎಂದು ಆರ್‌ಎಸ್‌ಎಸ್ ಮೂಲಗಳು ತಿಳಿಸಿವೆ.