Advertisement

ಹಿರಿಯ ರಾಜಕಾರಣಿ ಎ.ಕೆ.ಸುಬ್ಬಯ್ಯ ನಿಧನ

11:21 PM Aug 27, 2019 | Team Udayavani |

ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ರಾಜಕಾರಣಿ, ವಕೀಲ ಎ.ಕೆ.ಸುಬ್ಬಯ್ಯ (85) ಅವರು ನಗರದ ಮಣಿಪಾಲ್‌ ಆಸ್ಪತ್ರೆಯಲ್ಲಿ ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಕೊನೆಯುಸಿರೆಳೆದರು. ಕಳೆದ ಒಂದು ವರ್ಷದಿಂದ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದ ಅವರು, ವಾರಕ್ಕೆ ಮೂರರಿಂದ ನಾಲ್ಕು ಬಾರಿ ಡಯಾಲಿಸಿಸ್‌ಗೆ ಒಳಗಾಗುತ್ತಿದ್ದರು. ಕಳೆದ ವಾರ ಹೃದ್ರೋಗ ಹಾಗೂ ಮೂತ್ರಪಿಂಡ ಸಮಸ್ಯೆ ಗಂಭೀರವಾದ ಹಿನ್ನೆಲೆ ಮಣಿಪಾಲ್‌ ಆಸ್ಪತ್ರೆಗೆ ದಾಖಲಾಗಿದ್ದರು.

Advertisement

ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ನಿರಂತರ ಚಿಕಿತ್ಸೆ ನೀಡಲಾಗುತ್ತಿತ್ತು. ಒಂದಿಷ್ಟು ಚೇತರಿಕೆ ಕಂಡರೂ ಸೋಮವಾರ ಪ್ರಜ್ಞೆ ಕಳೆದುಕೊಂಡಿದ್ದರು. ಮಂಗಳವಾರ ಇಹಲೋಕ ತ್ಯಜಿಸಿದರು ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಸುಬ್ಬಯ್ಯ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನ ಆರ್‌.ಟಿ.ನಗರ ನಿವಾಸಕ್ಕೆ ಒಯ್ಯಲಾಗಿದ್ದು, ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬುಧವಾರ ಹುಟ್ಟೂರು ಕೊಡಗಿನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಮಾತಿಗೆ ನಿಂತರೆ ಸಿಡಿಗುಂಡು: ರಾಜ್ಯ ರಾಜಕಾರಣದಲ್ಲಿ “ನಿಷ್ಠುರವಾದಿ’ ರಾಜಕಾರಣಿ ಎಂದೇ ಖ್ಯಾತಿ ಪಡೆದಿದ್ದ ಅಜ್ಜಿಕುಟ್ಟಿರ ಕಾರ್ಯಪ್ಪ ಸುಬ್ಬಯ್ಯನವರು ಮಾತಿಗೆ ನಿಂತರೆ “ಗುಂಡು’ ಹೊಡೆದಂತೆಯೇ. ವಿಧಾನಪರಿಷತ್‌ ಇರಲಿ ಇಲ್ಲವೇ ರಾಜಕೀಯ ವೇದಿಕೆ ಇರಲಿ ಎ.ಕೆ.ಸುಬ್ಬಯ್ಯ ಎದ್ದು ನಿಂತರೆ ಅಂಕಿ-ಅಂಶಗಳ ಸಹಿತ ಎದುರಾಳಿಯಲ್ಲಿ ನಡುಕ ಹುಟ್ಟಿಸುತ್ತಿದ್ದರು. ಅದಕ್ಕೆ 1981ರಲ್ಲಿ ರೊಲೆಕ್ಸ್‌ ವಾಚ್‌ ಹಗರಣದಲ್ಲಿ ಮುಖ್ಯಮಂತ್ರಿ ಆರ್‌.ಗುಂಡೂರಾವ್‌ ಸಂಪುಟದಲ್ಲಿ ಸಚಿವರಾಗಿದ್ದ ಸಿ.ಎಂ.ಇಬ್ರಾಹಿಂ ರಾಜೀನಾಮೆ ನೀಡಿದ ಉದಾಹರಣೆಯೇ ಸಾಕ್ಷಿ. ಅಲ್ಲದೆ ರೇವಜಿತು, ಬಾಟ್ಲಿಂಗ್‌ ಸೇರಿದಂತೆ ಹಲವಾರು ಹಗರಣಗಳ ಬಗ್ಗೆಯೂ ಎ.ಕೆ.ಸುಬ್ಬಯ್ಯ ಹೋರಾಟ ಮಾಡಿದ್ದರು.

1980ರಲ್ಲಿ ಜನಸಂಘದಲ್ಲಿ ಗುರುತಿಸಿಕೊಂಡು ಅಟಲ್‌ ಬಿಹಾರಿ ವಾಜಪೇಯಿ ಅವರಿಗೆ ಹತ್ತಿರವಾಗಿದ್ದ ಸುಬ್ಬಯ್ಯ, ಬಿಜೆಪಿ ಸ್ಥಾಪನೆ ನಂತರ ರಾಜ್ಯದಲ್ಲಿ ಬಿಜೆಪಿಯ ಮೊದಲ ರಾಜ್ಯಾಧ್ಯಕ್ಷರಾಗಿದ್ದರು. ಜನತಾಪಕ್ಷ, ಕ್ರಾಂತಿರಂಗ, ಬಿಜೆಪಿ ಜತೆಗೂಡಿ ರಾಮಕೃಷ್ಣ ಹೆಗಡೆ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ ಪ್ರಥಮ ಕಾಂಗ್ರೆಸ್ಸೇತರ ಸರ್ಕಾರ ರಚನೆಯಲ್ಲೂ ಎ.ಕೆ.ಸುಬ್ಬಯ್ಯ ಪ್ರಮುಖ ಪಾತ್ರ ವಹಿಸಿದ್ದರು.

1966ರಲ್ಲಿ ಜನಸಂಘದ ಮೂಲಕ ವಿಧಾನಪರಿಷತ್‌ಗೆ ಪ್ರವೇಶಿಸಿ, ಬಿಜೆಪಿ ಹಾಗೂ ಕಾಂಗ್ರೆಸ್‌ ಸೇರಿ ನಾಲ್ಕು ಬಾರಿ ಪರಿಷತ್‌ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದರು. 1984ರಲ್ಲಿ ಬಿಜೆಪಿಯಿಂದ ಉಚ್ಚಾಟನೆಗೊಂಡ ನಂತರ ಕನ್ನಡನಾಡು ಪಕ್ಷ ಸ್ಥಾಪನೆ ಮಾಡಿ ವಿಫ‌ಲರಾದರು. ವೃತ್ತಿಯಲ್ಲಿ ವಕೀಲರಾಗಿದ್ದ ಅವರು, ಸಕ್ರಿಯ ರಾಜಕಾರಣದಿಂದ ದೂರವಾದರೂ ಪ್ರಗತಿಪರ ಹೋರಾಟಗಳಲ್ಲಿ ಭಾಗಿಯಾಗುತ್ತಿದ್ದರು.

Advertisement

ನಳಿನ್‌ ಕುಮಾರ್‌ ಸಂತಾಪ: ಎ.ಕೆ.ಸುಬ್ಬಯ್ಯ ಅವರ ನಿಧನಕ್ಕೆ ರಾಜ್ಯ ಬಿಜೆಪಿ ಅಧ್ಯಕ್ಷರಾದ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಸಂತಾಪ ಸಲ್ಲಿಸಿದ್ದಾರೆ. ಅವರ ನಿಧನ ತೀವ್ರ ನೋವು ತಂದಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ನೋವು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಅವರು ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.