Advertisement
ಈ ಆಧುನಿಕ ಕಾಲದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಗುರುಗಳ ಬಗೆಗೆ ವಿದ್ಯಾರ್ಥಿಗಳು ಪೂಜನೀಯ ಭಾವಗಳನ್ನೇನೂ ಬೆಳೆಸಿಕೊಳ್ಳುವುದಿಲ್ಲ! ಇದಕ್ಕೆ ಬದಲಾದ ಪರಿಸರ, ಕೌಟುಂಬಿಕ ಮೌಲ್ಯಗಳ ಸ್ಥಿತ್ಯಂತರ, ಸಮಾಜದಲ್ಲಿ ಆದರ್ಶಗಳೇ ಇಲ್ಲದೆ ಹಣ ಸಂಪಾದಿಸುವ ದುರಾಸೆ… ಈ ಎಲ್ಲವೂ ಸೇರಿ ಇಡೀ ಮಾನವ ಸಮುದಾಯವೇ ಇತ್ತೀಚಿನ ದಿನಗಳಲ್ಲಿ ಸಂಸ್ಕೃತಿಯ ಶೈಥಿಲ್ಯಕ್ಕೆ ಕಾರಣವಾಗಿದೆ. ಆದರೆ, ನಾವು ಕಾಲೇಜು ಓದುವ ಕಾಲಕ್ಕೆ ಖಂಡಿತಾ ಹೀಗಿರಲಿಲ್ಲ ಎಂಬುದು ಸ್ಪಷ್ಟ !
Related Articles
Advertisement
ಶ್ರೀ ಜಿ. ಎಂ. ಸಿದ್ದರಾಮಣ್ಣ ಅವರು ಶ್ರೀಶ್ರೀಶ್ರೀ ಸಿದ್ದಗಂಗಾ ಶಿವಕುಮಾರ ಸ್ವಾಮಿಗಳ ಪರಮಭಕ್ತರು, ಗುರು ಹಾಕಿದ ಗೆರೆ ದಾಟಿದವರಲ್ಲ. ಹೇಳಿ ಕೇಳಿ ಲೋಕಸೇವಾನಿರತ ಜಿ.ಎಂ. ಸಿದ್ದಣ್ಣನವರಿಗೆ ದಾನ, ಧರ್ಮದ ಬುದ್ಧಿ… ಒಂದು ನೂರು, ನೂರಿಪತ್ತು ಜನಕ್ಕೆ ಪ್ರತಿ ವರ್ಷವೂ ಉಚಿತ ವಿದ್ಯಾರ್ಥಿನಿಲಯದಲ್ಲಿ, ಸಕಲ ಸೌಲಭ್ಯಗಳನ್ನು ನೀಡಿ ( ಶ್ರೀ ಗುರುವಿನ ಮಾರ್ಗದರ್ಶನದಂತೆ) ಬಡವಿದ್ಯಾರ್ಥಿಗಳಿಗೆ ಅನ್ನ, ಅಕ್ಷರ ದಾಸೋಹ ಮಾಡುತ್ತಾ ಅವರು ಆದರ್ಶ ವ್ಯಕ್ತಿಯಾಗಿದ್ದರು. ಅವರ ಅಭೀಪ್ಸೆಯಂತೆ ಸಿದ್ದಗಂಗೆಯ ನಮ್ಮ ನಲ್ಮೆಯ ಸ್ವಾಮೀಜಿ ಅವರನ್ನು ತಿಂಗಳಿಗೆ ಒಮ್ಮೆಯಾದರೂ (ಬಹುತೇಕ ಭಾನುವಾರಗಳಂದೇ) ಮುಖ್ಯ ಅತಿಥಿಯಾಗಿ ಕರೆದು ಅವರ ದಿವ್ಯ ಸಾನಿಧ್ಯದಲ್ಲಿ ತಾನೂ ಕುಟುಂಬದ ಸಮೇತ ಕುಳಿತು ಗುರುಗಳ ಬೋಧನೆಯನ್ನು ಅತ್ಯಂತ ಶ್ರದ್ಧಾ ಭಕ್ತಿಗಳಿಂದ ಆಲಿಸುತ್ತಿದ್ದರು. ಅವರನ್ನು ನೋಡಿ ನಾವು ಅದೇ ಹಾದಿಯಲ್ಲಿ ಸಾಗಿದ್ದೆವು. ಹೀಗಾಗಿ ತಮ್ಮಂಥಕ್ಕೆ ರಶ್ಮಿರಾಜನ ಬರುವಿನಂತೆ ನಮ್ಮ ಅಜ್ಞಾನಗಳ ಪರಿಧಿ ಹೋಗಲಾಡಿಸಿ ಹೊಂಬೆಳಕಿನ ಸುಜ್ಞಾನ ಬಡಿಸಲು ಶ್ರೀಗಳು ಅಕ್ಕರೆಯಿಂದ ಬರುತ್ತಿದ್ದರು. ಆ ದಿನಗಳಲ್ಲಿ ಶ್ರೀಗಳು ನಿಂತೇ ಉಪನ್ಯಾಸ ನೀಡುತ್ತಿದ್ದರು. ನಾವೆಲ್ಲ ಮಂತ್ರ ಮುಗ್ಧರಾಗಿ ಕೇಳುತ್ತಿದ್ದೆವು.
ಗುರುಗಳು ಮಹಾನ್ ಜ್ಞಾನಿಗಳು. ಉಪನ್ಯಾಸ ಮುಗಿದ ಮೇಲೆ “ನಿಮ್ಮ ಅನುಮಾನಗಳನ್ನು ಪರಿಹರಿಸಿಕೊಳ್ಳಿ’ ಎಂದು ಹೇಳುತ್ತಿದ್ದರು. ನಾವು ಎಷ್ಟೋ ಸಾರಿ, ಬಾಲಿಷವಾದ ಪ್ರಶ್ನೆಗಳನ್ನು ಕೇಳಿದಾಗ್ಯೂ ಉತ್ತರಿಸಲು ಬೇಸರಿಸಿದ್ದಿಲ್ಲ. ಅವರು ಕೋಪಿಸಿಕೊಂಡಿದ್ದನ್ನು ನಾವ್ಯಾರು ನೋಡಿದ್ದಿಲ್ಲ. ಸಿಡುಕಿದ್ದನ್ನೂ ಕಾಣಲಿಲ್ಲ.
ಅವರಲ್ಲಿ ನಾನು “ಅನುಭವ ಬಸವಣ್ಣ’ನನ್ನು ಕಂಡೆ. ವಚನ ವಾಜ್ಮಯದ ಪುಂಖಾನುಪುಂಖ ಉಲ್ಲೇಖಗಳಿಂದ, ವ್ಯಾಖ್ಯಾನಗಳಿಂದ ತಿಳಿವಿನ ಲೋಕವೇ ಹೊಳೆಯುತ್ತಿತ್ತು. ಎಷ್ಟೋ ವಿಚಾರ! ಏನೆಲ್ಲಾ ತರ್ಕ! ಎಷ್ಟೊಂದು ಸಾಹಿತ್ಯದ ಪರಿಚಾರಿಕೆ! ಅಗಣಿತ ಧಾರ್ಮಿಕ ವಿಷಯಗಳ ಮಂಡನೆ! ಎಲ್ಲವೂ ತಿಳಿಯಾದ ಕನ್ನಡದಲ್ಲಿ! ಪ್ರೌಢ ಸಂಸ್ಕೃತದಲ್ಲಿ… ಕಬ್ಬಿಣದ ಕಡಲೆಯಂಥ ಆಂಗ್ಲಭಾಷೆಯಲ್ಲಿ…
ಉಪನ್ಯಾಸ ಆದಮೇಲೆ ನಾವು ಅವರ ಪಾದ ಕಮಲಗಳಿಗೆ ಎರಗಿ ಆಶೀರ್ವಾದ ಬೇಡುತ್ತಿದ್ದೆವು. ಅವರು ಸಾಮಾನ್ಯವಾಗಿ ಪ್ರತಿಯೊಬ್ಬ ವಿದ್ಯಾರ್ಥಿಗೂ ಹಣೆಗೆ ವಿಭೂತಿ ಇರಿಸಿ, ಯಾವುದಾದರೂ ಒಂದು ಹಣ್ಣನ್ನು ಕೊಡುತ್ತಿದ್ದರು. ನಾವು ಎಂಥದೋ ಒಂದು ಬಗೆಯ ಅಕ್ಕರೆಯ, ಅಮ್ಮನಲ್ಲಿ ಕಾಣಬಹುದಾದ ವಾತ್ಸಲ್ಯ ಭಾವವನ್ನೇ ಕಾಣುತ್ತಿದ್ದೆವು.
ಒಂದು ನಾಲ್ಕೈದು ವಾರಗಳಾದ ಮೇಲೆ ಭಾನುವಾರ ಹೇಗೂ ನಿಮಗೆ ಬಿಡುವು ತಾನೆ? ಸಿದ್ದಗಂಗಾ ಕ್ಷೇತ್ರಕ್ಕೆ ಬನ್ನಿ. ಉದ್ದಾನೇಶ್ವರನನ್ನು ಭಕ್ತಿಯಿಂದ ಪೂಜಿಸಿ. ಎಲ್ಲರ ಜೊತೆ ಕುಳಿತು ಪ್ರಸಾದ ಸ್ವೀಕರಿಸಿ. ಬೆಟ್ಟ ಹತ್ತಿ, ಸುತ್ತ ಓಡಾಡಿ, ಕೆಲಸ ಮಾಡಬೇಕೆಂದರೆ, ಸೇವೆ ಮಾಡಬೇಕೆಂದರೆ ನಮ್ಮ ಹೊಲಗಳಿವೆ. ಒಂದೆರಡು ತಾಸು ಶ್ರಮದಾನ ಮಾಡಿ ಎಂದು ಬುದ್ಧಿ ಹೇಳುತ್ತಿದ್ದರು.
ಗುರುಗಳು ಅಷ್ಟು ಹೇಳಿದ್ದೇ ಸಾಕು; ನಾವು ಭಾನುವಾರ ಬೆಳಗ್ಗೇನೇ ಬಾಡಿಗೆ ಸೈಕಲ್ಲುಗಳನ್ನು ಪಡೆದು ಐದು ಐದು ಜನ, ಹತ್ತು ಹತ್ತು ಜನ ಮಠದ ಕಡೆಗೆ ಗುಳೇ ಹೊರಡುತ್ತಿದ್ದೆವು!
ಅದು ಒಂದು ಬಗೆಯ, ಹೊರಸಂಚಾರ! ಮಿನಿ ಪ್ರವಾಸ! ಆಗ ಈಗಿನ ಹಾಗೆ ತುಮಕೂರು- ಸಿದ್ದಗಂಗೆ- ಕ್ಯಾತ್ಸಂದ್ರ ಕೂಡಿಕೊಂಡಿರಲಿಲ್ಲ. ಸಿದ್ದಗಂಗಾ ಹೈಸ್ಕೂಲ್ ಎಲ್ಲೆ ದಾಟಿದ ಮೇಲೆ… ಹೊಲಗಳು; ಹೊಲಗಳು, ರಾಗಿ- ಜೋಳದ ಹೊಲಗಳು. ಮಧ್ಯೆ ನಾವು ಕನ್ನಡದ ಹಾಡುಗಳನ್ನು ಹೇಳುತ್ತಾ ಅತ್ಯಂತ ಖುಷಿಯಲ್ಲಿ ಸಿದ್ದಗಂಗೆ ತಲುಪುತ್ತಿದ್ದೆವು. ಅಲ್ಲಿ ಗುರುವಿನ ದರ್ಶನ; ಜ್ಞಾನದ ಹೂರಣದ ಔತಣ. ಹೀಗಾಯಿತು ಹೊಸತಿನ ಅನಾವರಣ. ಶ್ರೀ ಗುರು ಸನ್ನಿದಾನ ಎಂದರೆ “ಜ್ಯೋತಿ ಬೆಳಗುತಿದೆ.. ಪರಂಜ್ಯೋತಿ ಬೆಳಗುತಿದೆ ‘!
ಅಲ್ಲಿಂದ ಇಂದಿನ ತನಕ ನಾನು ಶ್ರೀ ಗುರುವಿನ ಸಂಸರ್ಗದಲ್ಲಿದ್ದೇನೆ. ಲಕ್ಷ ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ನೀಡಿ ಅವರೆಲ್ಲರ ಬದುಕಿನ ರೂಪಣಕ್ಕೆ ಮೂಲ ಕಾರಣ ಆದವರು. ನಾವೆಲ್ಲ ಈ ಹೊತ್ತು ನೀತಿ ಮಾರ್ಗದಲ್ಲಿ ಧರ್ಮ ಮಾರ್ಗದಲ್ಲಿ ಬಾಳಿ ಬದುಕುತ್ತಿದ್ದರೆ ಅದಕ್ಕೆ ಕಾರಣ- ತಾರುಣ್ಯದಲ್ಲಿ ವಿದ್ಯಾರ್ಥಿಗಳಾಗಿದ್ದಾಗ ನನಗೆ ದೊರೆತ ಶ್ರೀ ಗುರುವಿನ ಮಾರ್ಗದರ್ಶನ.
ಗುರುವೇ ನಿಮ್ಮ ಪರಿಸರದಿಂದ-ರೂಕ್ಷ ಶಿಲೆಯಾದ ನಾನು ಮೆದುವಾದೆ!
ಮೆದುವಾದ ನಾನು ಸನ್ನಡತೆಯಿಂದ-
ಪ್ರೀತಿ ಸ್ನೇಹ ವಿಶ್ವಾಸದರಿವು ಪಡೆದೆ
ನಿಮ್ಮ ಬೋಧೆ ಬೆಳಕಿಂದ ಆದರ್ಶ ಪ್ರಭೆಯಿಂದ
ನಾನು ನಿಜಕೂನು ಮನುಜನಾದೆ
ಬದುಕಿನಲ್ಲಿ ಎಂದೂ ಸಹಜವಾದೆ!