Advertisement

ಹಿರಿಯ ಪತ್ರಕರ್ತ ರವಿರಾಜ್ ವಳಲಂಬೆ ವಿಧಿವಶ

10:33 AM Jan 09, 2020 | Hari Prasad |

ಉಡುಪಿ: ಹಿರಿಯ ಪತ್ರಕರ್ತ ರವಿರಾಜ ವಳಲಂಬೆ ಅವರು ಮಂಗಳವಾರ ತಡರಾತ್ರಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಉಡುಪಿಯ‌ ಕಿನ್ನಿಮುಲ್ಕಿಯಲ್ಲಿರುವ ನಿವಾಸದಲ್ಲಿ ಅವರಿಗೆ ಇದ್ದಕ್ಕಿದ್ದಂತೆ ಎದೆ‌ನೋವು‌ ಕಾಣಿಸಿಕೊಂಡ‌ ಹಿನ್ನಲೆಯಲ್ಲಿ ಕೂಡಲೇ ಅವರನ್ನು ನಗರದಲ್ಲಿರುವ ಅಸ್ಪತ್ರೆಗೆ ಕರೆದುಕೊಂಡು‌ ಹೋಗುತ್ತಿದ್ದಾಗ ದಾರಿ ಮಧ್ಯದಲ್ಲೇ ಅಸುನೀಗಿದ್ದಾರೆ.

Advertisement

ಉಡುಪಿಯಲ್ಲಿ ಈ‌-ಟಿವಿ ವರದಿಗಾರನಾಗಿ ಹಲವು ವರುಷಗಳ‌ ಕಾಲ ಸೇವೆ ಸಲ್ಲಿಸಿದ ರವಿರಾಜ್ ನಂತರ ಸುವರ್ಣ ವಾಹಿನಿಯಲ್ಲಿ ರಾಜಕೀಯ ವರದಿಗಾರನಾಗಿ‌ ಕಾರ್ಯ ನಿರ್ವಹಿಸಿದ್ದರು. ಆ ಬಳಿಕ‌ ಉಡುಪಿಯಲ್ಲಿ ಪ್ರೈಮ್ ಟಿವಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು.

ಪ್ರಗತಿಪರ ಚಿಂತನೆಯನ್ನು ತಮ್ಮ ಜೀವನದಲ್ಲಿ ಮತ್ತು ವೃತ್ತಿ ಬದುಕಿನಲ್ಲಿ ಅಳವಡಿಸಿಕೊಂಡಿದ್ದ ಇವರು ಮಿತಭಾಷಿಯಾಗಿದ್ದರು. ರಾಜಕೀಯ ವಿಚಾರಗಳ ಕುರಿತಾಗಿ ಆಳವಾದ ಜ್ಞಾನವನ್ನು ಹೊಂದಿದ್ದ ರವಿರಾಜ್ ಅವರು ಹಲವು ಸ್ಥಳೀಯ ಸಮಸ್ಯೆಗಳಿಗೂ ಧ್ವನಿಯಾಗುತ್ತಿದ್ದರು.

ಇತ್ತೀಚಿನ ದಿನಗಳಲ್ಲಿ ಉಡುಪಿ ನಗರವನ್ನು ಬಾಧಿಸುತ್ತಿರುವ ನೀರಿನ ಸಮಸ್ಯೆಯ ಕುರಿತಾಗಿ ಸಮಾನಮನಸ್ಕರೊಂದಿಗೆ ಸೇರಿಕೊಂಡು ಪರಿಣಾಮಕಾರಿ ಪರಿಹಾರವನ್ನು ರೂಪಿಸುವ ನಿಟ್ಟಿನಲ್ಲಿ ಅವರು ಪ್ರಯತ್ನಶೀಲರಾಗಿದ್ದರು.

ಇಬ್ಬರು ಪುತ್ರಿಯರನ್ನು ಹೊಂದಿರುವ ರವಿರಾಜ್ ವಳಲಂಬೆ ಅವರು ಅಪಾರ ಬಂಧು‌ಮಿತ್ರರನ್ನು ಅಗಲಿದ್ದಾರೆ. ಅವರ ಅನಿರೀಕ್ಷಿತ ನಿಧನ ಅವರ ಒಡನಾಡಿಗಳಿಗೆ ತೀವ್ರ ಆಘಾತವನ್ನು ಉಂಟುಮಾಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next