Advertisement

Mangaluru; ಅಧ್ಯಯನಶೀಲತೆಯಿಂದ ಸಂಪನ್ಮೂಲವಾದ “ಎಂಪಿ’

01:11 AM Mar 02, 2024 | Team Udayavani |

ಮಂಗಳೂರು: ಪತ್ರಿಕೋದ್ಯಮದಲ್ಲಿ ಮನೋಹರ ಪ್ರಸಾದ್‌ ಅನನ್ಯವಾದ ಹೆಸರು. ಜತೆಗೆ ಸಂಸ್ಕೃತಿ, ಕ್ರೀಡೆ, ಸಾಹಿತ್ಯ, ಲಲಿತಕಲೆ, ರಂಗಭೂಮಿ, ಚಲನಚಿತ್ರ, ಸಾಮಾಜಿಕ ಜಾಗೃತಿ, ಸಂಘಟನೆ, ಶಿಕ್ಷಣ ಹೀಗೆ ಎಲ್ಲ ಕ್ಷೇತ್ರದಲ್ಲಿಯೂ ಸಾಧನೆ ಮಾಡಿದ್ದಾರೆ. ತನ್ನ ಅಧ್ಯಯನಶೀಲತೆಯಿಂದ ಸಂಪನ್ಮೂಲ ಶಕ್ತಿಯಾಗಿ ಬೆಳೆದ ಅವರು ಎಲ್ಲ ವಿಚಾರಗಳ ಬಗ್ಗೆಯೂ ಪರಿಪಕ್ವತೆಯಿಂದ ಮಾತನಾಡುವ ಹಾಗೂ ಅನೂಹ್ಯ ನೆನಪಿನ ಶಕ್ತಿಯನ್ನು ಹೊಂದಿದ್ದರು. ಯಕ್ಷಗಾನ, ಕಂಬಳ, ತುಳುನಾಡಿನ ಇತಿಹಾಸ, ಜಾನಪದ ಆಚರಣೆ, ಪರಂಪರೆ, ಸಾಹಿತ್ಯ ಎಲ್ಲ ವಿಷಯಗಳ ಬಗ್ಗೆ ಚೆನ್ನಾಗಿ ಬರೆಯಬಲ್ಲವರಾಗಿದ್ದರು, ಅಷ್ಟೇ ಚೆನ್ನಾಗಿ ಮಾತನಾಡಬಲ್ಲವರಾಗಿದ್ದರು.

Advertisement

ಉದಯವಾಣಿಯಲ್ಲಿ 3 ಸಾವಿರಕ್ಕೂ ಅಧಿಕ ವಿಶೇಷ ವರದಿ, ಸಂದರ್ಶನ, ತನಿಖಾ ವರದಿ, ನುಡಿಚಿತ್ರಗಳನ್ನು ಬರೆದಿದ್ದಾರೆ. ಉದಯವಾಣಿ ಬಳಗದ ತರಂಗ, ರೂಪತಾರಾ, ತುಷಾರ ಪತ್ರಿಕೆಗಳಲ್ಲಿ ನಿರಂತರ ಲೇಖನಗಳು ಪ್ರಕಟವಾಗಿವೆ. ಮದರ್‌ ಥೆರೆಸಾ, ಅಮಿತಾಬ್‌ ಬಚ್ಚನ್‌, ಜೇಸುದಾಸ್‌, ಅಬ್ದುಲ್‌ ಕಲಾಂ, ವಾಜಪೇಯಿ, ಸಚಿನ್‌ ತೆಂಡುಲ್ಕರ್‌, ಐಶ್ವರ್ಯ ರೈ ಸಹಿತ ದೇಶದ ಬಹುತೇಕ ಗಣ್ಯರನ್ನು ಅವರು ಸಂದರ್ಶನ ನಡೆಸಿದ್ದಾರೆ.

“ನಮ್ಮೂರು’ ಲೇಖನ ಗುಚ್ಛ
ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸುವ ವರದಿಗಾರಿಕೆಯಿಂದ ಜನಪ್ರಿಯತೆ ಪಡೆದಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಸ್ವಾತಂತ್ರ್ಯ ಹೋರಾಟದ ಬಗ್ಗೆ ಸತತ 25 ಸಂಶೋಧನ ಲೇಖನ ಪ್ರಕಟಿಸಿದ್ದಾರೆ. ಕರ್ನಾಟಕ ಕರಾವಳಿಯ ಇತಿಹಾಸ ಕುರಿತಾಗಿ 608 ಸಂಶೋಧನ ಲೇಖನಗಳು “ನಮ್ಮೂರು’ ಎಂಬ ಹೆಸರಿನಲ್ಲಿ ಉದಯವಾಣಿಯಲ್ಲಿ ಪ್ರಕಟವಾಗಿದೆ. “ನೇರ ನೋಟ’ ಎಂಬ ಸಾಪ್ತಾಹಿಕ ಅಂಕಣ ಹಾಗೂ ಇತ್ತೀಚೆಗೆ “ತೀರ ಯಾನ’ ಅಂಕಣ ಬರೆಯುತ್ತಿದ್ದರು.

1986ರಲ್ಲಿ ಸಕಲೇಶಪುರ ಬಳಿ ಪಶ್ಚಿಮ ಘಟ್ಟದಲ್ಲಿ ಬಿಎಸ್‌ಎಫ್‌ ಹೆಲಿಕಾಪ್ಟರ್‌ ಪತನಗೊಂಡು ಇಬ್ಬರು ಪೈಲಟ್‌ಗಳು ಮೃತರಾದಾಗ ಸ್ಥಳಕ್ಕೆ ತೆರಳಿ ವರದಿ ಮಾಡಿದ್ದರು.

ಸಾಹಿತ್ಯ ಕ್ಷೇತ್ರದ ಸಾಧಕ
ಮನೋಹರ ಪ್ರಸಾದ್‌ ಅವರ 30 ಸಣ್ಣ ಕತೆಗಳು ಪ್ರಕಟವಾಗಿವೆ. “ಬಂಡಿ’ ಎಂಬ ಕಾದಂಬರಿಗೆ ಪಣಿಯಾಡಿ ಪುರಸ್ಕಾರ ದೊರೆತಿದೆ. “ಬದ್‌ಕ್‌ದ ಬಂಡಿ’ ಎಂಬ ತುಳು ಕಥಾ ಸಂಕಲನ ಪ್ರಕಟವಾಗಿದೆ.

Advertisement

ಪ್ರಶಸ್ತಿಗಳ ಗೌರವ
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಗೌರವ ಪ್ರಶಸ್ತಿ ಸಹಿತ 100ಕ್ಕೂ ಅಧಿಕ ಪ್ರಶಸ್ತಿಗಳು, ರಾಜ್ಯ, ಜಿಲ್ಲಾ ಮಟ್ಟದ ಪ್ರಶಸ್ತಿ-ಪುರಸ್ಕಾರ, ಸಮ್ಮಾನ ಸಂದಿದೆ.

ಡಾ| ಹೆಗ್ಗಡೆ ಸಹಿತ ಗಣ್ಯರ ಸಂತಾಪ
ಮಂಗಳೂರು: ಮನೋಹರ ಪ್ರಸಾದ್‌ ನಿಧನಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ, ಪೇಜಾವರ ಮಠದ ಶ್ರೀಗಳ ಸಹಿತ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ಹಲವು ಗಣ್ಯರು ಅವರ ಅಂತಿಮ ದರ್ಶನ ಪಡೆದರು.ಎಂಎಂಎನ್‌ಎಲ್‌ ಕಾರ್ಯನಿರ್ವಾಹಕ ಅಧ್ಯಕ್ಷ ಸತೀಶ್‌ ಯು ಪೈ, ತರಂಗದ ವ್ಯವಸ್ಥಾಪಕ ಸಂಪಾದಕಿ ಸಂಧ್ಯಾ ಎಸ್‌. ಪೈ. ಎಂಟಿಎಲ್‌ ಕಾರ್ಯನಿರ್ವಾಹಕ ಅಧ್ಯಕ್ಷ ಗೌತಮ್‌ ಎಸ್‌. ಪೈ. ಉದಯವಾಣಿ ಎಂಡಿ ಮತ್ತು ಸಿಇಒ ವಿನೋದ್‌ ಕುಮಾರ್‌, ಉದಯವಾಣಿ ವಿಶ್ರಾಂತ ಸಂಪಾದಕ ಎನ್‌. ಗುರುರಾಜ್‌, ಮಾಜಿ ಕೇಂದ್ರ ಸಚಿವರಾದ ಜನಾರ್ದನ ಪೂಜಾರಿ, ಡಾ| ವೀರಪ್ಪ ಮೊಯ್ಲಿ, ಸಚಿವ ದಿನೇಶ್‌ ಗುಂಡೂ ರಾವ್‌, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್‌, ಸಂಸದ ನಳಿನ್‌, ಮಾಜಿ ಸಚಿವರಾದ ರಮಾನಾಥ ರೈ, ವಿನಯ ಕುಮಾರ್‌ ಸೊರಕೆ, ಶಾಸಕರಾದ ಡಾ| ಸಿ.ಎನ್‌. ಅಶ್ವತ್ಥ ನಾರಾಯಣ್‌, ವೇದವ್ಯಾಸ ಕಾಮತ್‌, ಡಾ| ಭರತ್‌ ಶೆಟ್ಟಿ, ಸುನಿಲ್‌ ಕುಮಾರ್‌, ಉಮಾನಾಥ ಕೋಟ್ಯಾನ್‌, ಹರೀಶ್‌ ಪೂಂಜ, ರಾಜೇಶ್‌ ನಾೖಕ್‌ ಉಳಿಪಾಡಿ, ಭಾಗೀರಥಿ ಮುರುಳ್ಯ, ಗುರ್ಮೆ ಸುರೇಶ್‌ ಶೆಟ್ಟಿ, ಯಶ್‌ಪಾಲ್‌ ಎ.ಸುವರ್ಣ, ವಿಧಾನ ಪರಿಷತ್‌ ಸದಸ್ಯರಾದ ಡಾ| ಮಂಜುನಾಥ್‌ ಭಂಡಾರಿ, ಹರೀಶ್‌ ಕುಮಾರ್‌, ಪ್ರತಾಪ್‌ ಸಿಂಹ ನಾಯಕ್‌, ಕೋಟ ಶ್ರೀನಿವಾಸ ಪೂಜಾರಿ, ಗಣ್ಯರಾದ ಡಾ| ಎಂ.ಎನ್‌.ರಾಜೇಂದ್ರ ಕುಮಾರ್‌, ಸುಧೀರ್‌ ಶೆಟ್ಟಿ ಕಣ್ಣೂರು, ಡಾ| ಮೋಹನ ಆಳ್ವ, ಪ್ರೊ| ನರೇಂದ್ರ ಎಲ್‌.ನಾಯಕ್‌, ಅಂಕುಶ್‌ ನಾಯಕ್‌, ಡಾ| ಎಂ.ಪಿ.ಶ್ರೀನಾಥ್‌, ಶ್ರೀನಿವಾಸ ನಾಯಕ್‌ ಇಂದಾಜೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಮನೋಹರ ಪ್ರಸಾದ್‌ ಅವರ ಕುಟುಂಬಸ್ಥರಾದ ಉದ್ಯಮಿ ಶ್ರೀನಾಥ್‌ ಹೆಬ್ಬಾರ್‌, ಡಾ| ಶ್ರೀಕಾಂತ್‌ ರಾವ್‌, ಇನ್ನಾ ಶ್ರೀಕಾಂತ್‌ ರಾವ್‌, ಪ್ರಶಾಂತ್‌ ಹೆಬ್ಬಾರ್‌, ಸಂದೀಪ್‌ ಗಾಢ ಶೋಕ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next