Advertisement
ಕಳೆದ ಐದು ದಶಕಗಳಿಂದ ಪತ್ರಿಕೋದ್ಯಮ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಾ ಬಂದಿರುವ ಶ್ರೀ ಲಕ್ಷ್ಮೀ ನಾರಾಯಣ ಶಂಭು ಶಾಸ್ತ್ರೀ ಅವರು ಬಹುಮುಖ ಪ್ರತಿಭೆ. ಹಿಂದೂಸ್ತಾನಿ ಸಂಗೀತವನ್ನು ಅಭ್ಯಸಿಸಿ, ಗಾಯಕರಾಗಿ ಜನಮನಸೂರೆಗೊಂಡಿದ್ದಾರೆ. ಅನೇಕ ಸಂಘಟನೆಗಳನ್ನು ಕಟ್ಟುವ ಮೂಲಕ ಸಭೆ, ಸಮಾರಂಭಗಳನ್ನು ಆಯೋಜಿಸಿದ ಚತುರ ಸಂಘಟನಕಾರರು. ಗಮಕವಾಚನ, ಆಕಾಶವಾಣಿ ಕಾರ್ಯಕ್ರಮ, ಯಕ್ಷಗಾನ ಪ್ರದರ್ಶನ, ನಾಟಕಗಳಲ್ಲಿ ಅಭಿನಯ, ಸಂಗೀತ ನೃತ್ಯ ತರಬೇತಿ ಶಾಲೆ ಸ್ಥಾಪನೆ ಇತ್ಯಾದಿ ಹಲವಾರು ಕ್ಷೇತ್ರಗಳಲ್ಲಿ ಹೆಸರಾದ ಶಾಸ್ತ್ರೀ ಅವರು ಸದಾ ಚಟುವಟಿಕೆಯಲ್ಲಿದ್ದಾರೆ.
Related Articles
Advertisement
15ಕ್ಕೂ ಹೆಚ್ಚು ಸಾಹಿತ್ಯಕ ಸಂಘ-ಸಂಸ್ಥೆಗಳನ್ನು ಸ್ಥಾಪಿಸಿದಲ್ಲದೆ ಇಲ್ಲಿಯವರೆಗೆ ಐದು ಸಾವಿರಕ್ಕೂ ಹೆಚ್ಚು ಸಾಹಿತ್ಯಕ ಕಾರ್ಯಕ್ರಮಗಳನ್ನು ಸಂಘಟಿಸಿ ತಮ್ಮ ಸಂಘಟನ ಚಾತುರ್ಯದಿಂದ ಅಸಾಧ್ಯವೆನಿಸುವ ಕೆಲಸಗಳನ್ನು ಮಾಡಿ ತೋರಿಸಿದ್ದಾರೆ. ಯಕ್ಷಗಾನ ಕಲಾವಿದರ ಕುರಿತು ಐದು ಕೃತಿಗಳನ್ನು, 50ಕ್ಕೂ ಅಧಿಕ ಲೇಖನಗಳನ್ನು ರಚಿಸಿದ್ದಾರೆ. ರಾಜ್ಯ ಹಾಗೂ ವಿಭಾಗೀಯ ಮಟ್ಟದ ನಾಟಕ ಸ್ಪರ್ಧೆಗಲ್ಲಿ ಭಾಗವಹಿಸಿ ಮೂರು ಬಾರಿ ಪ್ರಥಮ ಬಹುಮಾನ ಗಳಿಸಿದ್ದಾರೆ. 50ಕ್ಕೂ ಹೆಚ್ಚು ವೃತ್ತಿ ನಾಟಕ ಕಂಪೆನಿಗಳ ಕಲಾವಿದರ ಸಂದರ್ಶನ, ಪರಿಚಯ ಲೇಖನಗಳನ್ನು ರಚಿಸಿದ್ದಾರೆ.
ಸುಮಾರು 200ಕ್ಕೂ ಅಧಿಕ ಸುಗಮ ಸಂಗೀತ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದ ಹೆಗ್ಗಳಿಕೆ ಅವರಿಗಿದೆ. ಗೀತ ಗೋವಿಂದ, ಗೀತ ರಾಮಾಯಣ ಮೊದಲಾದವುಗಳಿಗೆ ರಾಗ ಸಂಯೋಜಿಸಿರುವುದಲ್ಲದೆ, ನಾಡಿನ ವಿವಿಧೆಡೆಗಳಲ್ಲಿ 80ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನೀಡಿ ಜನಪ್ರಿಯರಾಗಿದ್ದಾರೆ. ಸಂಗೀತ ಜ್ಞಾನವನ್ನು ಹೊಂದಿರುವ ಅವರು 100ಕ್ಕೂ ಅಧಿಕ ಕಾರ್ಯಕ್ರಮಗಳಲ್ಲಿ ಗಮಕ ವಾಚಿಸಿದ್ದಲ್ಲದೆ, ಗಮಕ ಕಲಾ ಸಮ್ಮೇಳನವನ್ನು ಸಂಯೋಜಿಸಿದ್ದಾರೆ. ಕರ್ನಾಟಕ ಗಮಕ ಕಲಾ ಪರಿಷತ್ತಿನ ಬೆಳಗಾವಿ ಜಿಲ್ಲಾ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಹೀಗೆ ಪತ್ರಿಕೋದ್ಯಮ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಮ್ಮನ್ನು ಸದಾ ತೊಡಗಿಸಿಕೊಂಡ ಶಾಸ್ತ್ರೀ ಅವರನ್ನು ಅರಸಿಕೊಂಡು ಬಂದ ಪ್ರಶಸ್ತಿಗಳು ಹಲವಾರು. ಕರ್ನಾಟಕ ಪತ್ರಿಕಾ ಅಕಾಡೆಮಿ ಪ್ರಶಸ್ತಿ, ಜಿ. ಆರ್. ಪಾಂಡೇಶ್ವರ ಪತ್ರಿಕಾ ಪ್ರಶಸ್ತಿ, ಕುಮಾರವ್ಯಾಸ ಪ್ರಶಸ್ತಿ, ದಿನಕರ ದೇಸಾಯಿ ಚುಟುಕು ಕಾವ್ಯ ಪ್ರಶಸ್ತಿ, ಸೇವಾರತ್ನ ಪ್ರಶಸ್ತಿ ನಾಗನೂರು ಮಠ, ಸಿರಿಗನ್ನಡ ಪ್ರಶಸ್ತಿ, ಕನ್ನಡ ಜ್ಯೋತಿ ಪ್ರಶಸ್ತಿಗಳು ಅವುಗಳಲ್ಲಿ ಮುಖ್ಯವಾಗಿವೆ. ಶಾಸ್ತ್ರೀ ಅವರದ್ದು ಶಿಸ್ತಿನ ನಡೆ, ಶ್ರಮಪೂರ್ಣ ದುಡಿಮೆ, ಜೀವನ ಶೋಧಕ್ಕೆ ಹೊರಟಂತಹ ಮನೋಭಾವ. ನಾಡು-ನುಡಿಗಳ ಅಭಿವೃದ್ಧಿಗೆ ಶ್ರಮಿಸಿದ ಹಿರಿಯ ಧೀಮಂತ ಪತ್ರಿಕೋದ್ಯಮಿಯಾದ ಲಕ್ಷ್ಮೀನಾರಾಯಣ ಶಾಸ್ತ್ರೀ ಅವರು ಈ ವರ್ಷದ ಕರ್ಕಿವೆಂಕಟರಮಣ ಶಾಸ್ತ್ರೀ ಸೂರಿ ಪ್ರಶಸ್ತಿಗೆ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿಯಾಗಿದೆ.