Advertisement

ಬಹುಕಲಾರಾಧಕ, ಕಲಾವಿಮರ್ಶಕ

12:30 AM Dec 31, 2018 | Team Udayavani |

ಉಡುಪಿ, 1972ರ ಸಮಯ. ಆಗ “ಉದಯವಾಣಿ’ ಜನಿಸಿ ಎರಡು ವರ್ಷವಾಗಿತ್ತಷ್ಟೆ. ಯುವ ಪ್ರತಿಭೆ ಅನಂತಪುರ ಈಶ್ವರಯ್ಯನವರು ಪತ್ರಿಕೆಯ ಲೆಕ್ಕಪತ್ರ ವಿಭಾಗಕ್ಕೆ ಸೇರಿದ ಕೆಲವೇ ದಿನಗಳಲ್ಲಿ ಸಂಪಾದಕೀಯ ವಿಭಾಗಕ್ಕೆ ಸೇರಿದರು. ಸೇರಿ ಮೂರೇ ತಿಂಗಳು ಕಳೆದಿತ್ತು. ಕರ್ನಾಟಕ ಸಂಗೀತದ ದಿಗ್ಗಜ ಚೆಂಬೈ ವೈದ್ಯನಾಥ ಭಾಗವತರು ಇಹಲೋಕ ತ್ಯಜಿಸಿದರು. ಪತ್ರಿಕೆಯಲ್ಲಿ ಸಂಪಾದಕೀಯ ವಿಭಾಗದ ಮುಖ್ಯಸ್ಥರಾಗಿದ್ದ ಬನ್ನಂಜೆ ರಾಮಾಚಾರ್ಯರು, ಈಶ್ವರಯ್ಯನವರನ್ನು ಕರೆದು, “ನೋಡಿ ಚೆಂಬೈ ತೀರಿ ಹೋಗಿದ್ದಾರೆ. ಅವರ ಬಗ್ಗೆ ಲೇಖನ ಬರೆದು ಕೊಡಿ’ ಎಂದಾಗ ಈಶ್ವರಯ್ಯನವರು ಕಕ್ಕಾಬಿಕ್ಕಿ.  ಹೆಚ್ಚು ಅನುಭವಸ್ಥರಲ್ಲದಿದ್ದರೂ ಈಶ್ವರಯ್ಯನವರು ಲೇಖನ ಬರೆದುಕೊಟ್ಟರು. ಮರುದಿನ ಪ್ರಕಟವಾದ ಲೇಖನ ಶ್ರೇಷ್ಠ ಮಟ್ಟದ್ದಾಗಿತ್ತು.

Advertisement

ಈಶ್ವರಯ್ಯನವರಿಗೆ ಪದವಿ ಓದುವಾಗಲೂ ಬರೆಯುವ ಹವ್ಯಾಸವಿತ್ತು. ಕವನ, ಕಥೆಗಳನ್ನು ಬರೆದು “ಕಸ್ತೂರಿ’ ಮಾಸ ಪತ್ರಿಕೆಗೆ ಕಳುಹಿಸುತ್ತಿದ್ದರು. ಅದರ ರೂವಾರಿ ಪಾ.ವೆಂ. ಆಚಾರ್ಯರು. ಬರಹದಲ್ಲಿರುವ  ದೋಷ ಗುರುತುಹಾಕಿ ಅದನ್ನು ಮರು ಟಪ್ಪಾಲಿಗೆ ಈಶ್ವರಯ್ಯನವರಿಗೆ ಕಳುಹಿಸುತ್ತಿದ್ದರು. ಅದನ್ನು ತಿದ್ದಿ ಸರಿಪಡಿಸಿ ಮತ್ತೆ ಟಪ್ಪಾಲು ಮಾಡುತ್ತಿದ್ದರು. ಹೀಗೆ ಈಶ್ವರಯ್ಯನವರು ಪಾವೆಂ ಹಾಕಿ ಕೊಟ್ಟ ದಾರಿಯಲ್ಲಿ ಮುನ್ನಡೆದರು.

ಬನ್ನಂಜೆ ರಾಮಾಚಾರ್ಯ, ಬನ್ನಂಜೆ ಗೋವಿಂದಾಚಾರ್ಯರು ನನ್ನ ಗುರುಗಳು, ಪಾವೆಂ ಆಚಾರ್ಯರು ನನ್ನನ್ನು ಪತ್ರಿಕಾರಂಗದಲ್ಲಿ ಬೆಳೆಸಿದವರು- ಇದು ಈಶ್ವರಯ್ಯ ತನ್ನ ಅಭಿನಂದನ ಸಭೆಗಳಲ್ಲಿ ಹೇಳಿದ ಮಾತು. ಮನೆ ಸಮೀಪದ ಸೂರಂಬೈಲಿನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ನಡೆಸಿದ ಈಶ್ವರಯ್ಯನವರಿಗೆ ಪೆರಡಾಲದ ನವಜೀವನ ಪ್ರೌಢಶಾಲೆಯಲ್ಲಿ ಕವಿದಿಗ್ಗಜ ಡಾ|ಕಯ್ನಾರ ಕಿಂಞಣ್ಣ ರೈಯವರು ಶಿಕ್ಷಕರಾಗಿದ್ದು ಸಾಹಿತ್ಯದಲ್ಲಿ ತೊಡಗಿಸಿಕೊಳ್ಳಲು ಸಹಕಾರಿಯಾಯಿತು. ಅನಂತಪುರದ ಶಾನುಭೋಗ ಮನೆತನದ ನಾರಾಯಣಯ್ಯ, ವೆಂಕಟಲಕ್ಷ್ಮಮ್ಮ ದಂಪತಿಯ ಜ್ಯೇಷ್ಠ ಪುತ್ರ ಈಶ್ವರಯ್ಯ. ತಂಗಿಯಂದಿರಿಗೆ ಸಂಗೀತ ಕಲಿಸಿಕೊಡಲು ಮಧೂರಿನ ಸಂಗೀತ ಗುರು ಕೃಷ್ಣ ಕಲ್ಲೂರಾಯರು ಬರುತ್ತಿದ್ದಾಗ ಅಲ್ಲಿಯೇ ಕುಳಿತು ಸಂಗೀತಜ್ಞಾನವನ್ನು ಸಂಪಾದಿಸಿದ ಅವರು, ಮುಂದೆ ಸಂಗೀತ, ಸಾಹಿತ್ಯ, ಪತ್ರಿಕಾರಂಗ, ಫೋಟೋಗ್ರಫಿ, ವಿವಿಧ ಕಲಾ ಪ್ರಕಾರಗಳ “ಸಂಪಾದಕ’ರಾದರು.  ತಂದೆ ನಿಧನ ಹೊಂದಿದಾಗ ಗುಮಾಸ್ತ ಕೆಲಸಕ್ಕೆ ರಾಜೀನಾಮೆ ಕೊಟ್ಟು ಅನಂತಪುರಕ್ಕೆ ತೆರಳಿದ ಈಶ್ವರಯ್ಯ ಮೂರ್‍ನಾಲ್ಕು ವರ್ಷಗಳ ಬಳಿಕ ಪ್ರೊ| ಕು.ಶಿ. ಹರಿದಾಸ ಭಟ್ಟರ ಶಿಫಾರಸಿನ ಮೇರೆಗೆ “ಉದಯವಾಣಿ’ಗೆ ಸೇರಿದರು. ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಇಷ್ಟೆಲ್ಲವನ್ನು ಹೇಗೆ ಕಲಿತರು ಎಂದರೆ ಅಚ್ಚರಿಯಾಗುತ್ತದೆ. ಅವರಿಗೆ ಕೃಷ್ಣ ಕಲ್ಲೂರಾಯರ ಪ್ರಾಥಮಿಕ ಪಾಠ ಬಿಟ್ಟರೆ ಉಳಿದ ಯಾವುದಕ್ಕೂ ಗುರುಗಳಿಲ್ಲ. ಏಕಲವ್ಯನಂತೆ ಸ್ವತಃ ಅಧ್ಯಯನ ಮಾಡಿದ್ದರು. ಪತ್ರಿಕಾರಂಗಕ್ಕೆ ಬಂದ ಬಳಿಕ ಕಲಾ
ವಿಮರ್ಶಕರಾದರು. 

ಉದಯವಾಣಿ ಬಳಗಕ್ಕೆ ಸೇರಿದ ಕೆಲವೇ ದಿನಗಳಲ್ಲಿ ಟಿ. ಮೋಹನದಾಸ್‌ ಪೈ ಮತ್ತು ಟಿ. ಸತೀಶ್‌ ಯು. ಪೈಯವರು ಸಾಹಿತ್ಯಾಧಾರಿತ
“ತುಷಾರ’ ಮಾಸಪತ್ರಿಕೆಯನ್ನು ಆರಂಭಿಸಿದಾಗ ಅದರ ಸಂಪಾದಕತ್ವವನ್ನು ವಹಿಸಿಕೊಂಡ ಈಶ್ವರಯ್ಯನವರು ವಿಶಿಷ್ಟ ಛಾಪು ಒತ್ತಿದರು.  “ತರಂಗ’ ವಾರ ಪತ್ರಿಕೆಯಲ್ಲಿ “ಸರಸ’ ಅಂಕಣದಲ್ಲಿ ಮೂಡಿಬರುತ್ತಿದ್ದ ಹಾಸ್ಯ, ವಯ್ನಾರದ ನುಡಿಗಳನ್ನು ಓದಿದಾಗ ಗಂಭೀರವದನ ಈಶ್ವರಯ್ಯನವರಿಗೆ ಇಂತಹ ಬರಹ ಸಾಮರ್ಥ್ಯವಿದೆಯೇ ಎಂದು ಪ್ರಶ್ನಿಸಿ ದವರು ಹಲವರು. “ಉದಯವಾಣಿ’ಯಲ್ಲಿ “ಈಶ’ ಕಾವ್ಯನಾಮದಲ್ಲಿ ಬರೆಯುತ್ತಿದ್ದ ಬರಹ ಓದಿದಾಗ ಅವರ ರಾಜಕೀಯ, ಜಾಗತಿಕ ಜ್ಞಾನ ಬೆರಗು ಮೂಡಿಸುತ್ತಿತ್ತು. ಇಷ್ಟೆಲ್ಲ ಬರೆದಾಗಲೂ ಅವರು ಯಾವುದೇ ಪಂಥಕ್ಕೆ ಅಂಟಿಕೊಳ್ಳಲಿಲ್ಲ, ಯಾವ “ಇಸಂ’ ಇಲ್ಲದೆ ವಸ್ತುನಿಷ್ಠವಾಗಿ ಬರೆಯುವುದು ಅವರ ಜನ್ಮಜಾತ ಗುಣವಾಗಿತ್ತು.

ಈಶ್ವರಯ್ಯನವರು ಕಾಣುತ್ತಿದ್ದುದು ಕೇವಲ ಕಲಾರಾಧಕರಾಗಿ, ಪತ್ರಕರ್ತರಾಗಿ. ಅವರ ಆಂಗ್ಲ ಭಾಷಾ ಸಾಮರ್ಥ್ಯ ಅದ್ಭುತವಾಗಿತ್ತು. ಅವರೊಬ್ಬ ಶ್ರೇಷ್ಠ ಅನುವಾದಕರೂ ಹೌದು. ವಿಶ್ವಕಥಾ ಕೋಶದ 16ನೆಯ ಸಂಪುಟವನ್ನು ಇವರು ಭಾಷಾಂತರಿಸಿದ್ದರು.  ಲೇಖನಗಳಿಗೆ ಅಗತ್ಯವಾದ ಚಿತ್ರಗಳನ್ನು ನೀವೇ ಸಂಪಾದಿಸಿಕೊಳ್ಳಿ ಎಂಬ ಟಿ. ಮೋಹನದಾಸ ಪೈಯವರ ಸಲಹೆ ಮೇರೆಗೆ ಕೆಮರಾಕ್ಕೂ ಒಗ್ಗಿಕೊಂಡ ಈಶ್ವರಯ್ಯ ಕೊನೆಗೆ ಛಾಯಾಚಿತ್ರಗ್ರಹಣ ವಿಷಯಕ್ಕೆ ಸಂಪನ್ಮೂಲ ವ್ಯಕ್ತಿಯೂ ಆದರು. “ರಾಗಧನ’ ಸಂಸ್ಥೆಯನ್ನು ಸ್ಥಾಪಿಸಿ ಸಮರ್ಥ ಕಲಾ ಸಂಘಟಕರಾದರು ಈಶ್ವರಯ್ಯನವರ ಭಾಷಾ ಹಿಡಿತಕ್ಕೆ ದೊಡ್ಡ ಆಫ‌ರ್‌ಗಳು ಬಂದಿದ್ದವು. ಆದರೆ ಅವರು ನಿರಾಕರಿಸಿದ ವಿಚಾರ  ಸಮ್ಮಾನ ಕಾರ್ಯಕ್ರಮದಲ್ಲಿ ಹೀಗೆ ಹೇಳಿದ್ದರು. “ಕೆಲಸದಲ್ಲಿ ತೃಪ್ತಿ ಮತ್ತು ಉತ್ತಮ ವಾತಾವರಣ ಬೇಕು. ಅದು ಉಡುಪಿಯಲ್ಲಿ ಸಿಕ್ಕಿದವು. ಸಾಹಿತ್ಯ, ಸಂಗೀತ, ಕಲಾರಾಧನೆಗಳು ನಿತ್ಯ ನಡೆಯುವ ಸ್ಥಳ ಉಡುಪಿ. ಹೆಚ್ಚು ದುಡ್ಡು ಸಿಗುತ್ತದೆಂದು ಎಲ್ಲಿಗೋ ಹೋದರೆ ಇದು ಸಿಗುತ್ತದೋ? ಎಂದಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next