ನವದೆಹಲಿ: ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಕಾನೂನು ಸಚಿವ ಹಂಸರಾಜ್ ಭಾರಧ್ವಜ್ ಅವರು ಇಂದು ನಿಧನ ಹೊಂದಿದ್ದಾರೆ. ಭಾರಧ್ವಜ್ ಅವರು 2009 ರಿಂದ 2014ರವರೆಗೆ ಕರ್ನಾಟಕದ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದರು.
ಭಾರಧ್ವಜ್ ಅವರಿಗೆ 82 ವರ್ಷ ವಯಸ್ಸಾಗಿತ್ತು. ಕರ್ನಾಟಕ ರಾಜ್ಯಪಾಲರಾಗಿದ್ದ ಸಂದರ್ಭದಲ್ಲಿ ಹಂಸರಾಜ್ ಭಾರಧ್ವಜ್ ಅವರು ಹೆಚ್ಚುವರಿಯಾಗಿ ಕೇರಳ ರಾಜ್ಯದ ರಾಜ್ಯಪಾಲ ಜವಾಬ್ದಾರಿಯನ್ನೂ ಸಹ ನಿರ್ವಹಿಸುತ್ತಿದ್ದರು.
1937ರಲ್ಲಿ ಅಂದಿನ ಬ್ರಿಟಿಷ್ ಆಡಳಿತದಲ್ಲಿ ಪಂಜಾಬ್ ನ ಭಾಗವಾಗಿದ್ದ ಮತ್ತು ಇದೀಗ ಹರ್ಯಾಣ ರಾಜ್ಯದಲ್ಲಿರುವ ರೋಹ್ಟಕ್ ನ ಗಹ್ರಿ ಸಂಪ್ಲಾದಲ್ಲಿ ಜನಿಸಿದ್ದರು. ಭಾರಧ್ವಜ್ ಅವರು 1982ರಲ್ಲಿ ರಾಜ್ಯ ಸಭೆಗೆ ಆಯ್ಕೆಯಾಗಿದ್ದರು. 1984ರಿಂದ 1989ರವರೆಗೆ ಅವರು ಕಾನೂನು ಮತ್ತು ನ್ಯಾಯಿಕ ಸಚಿವಾಲಯದಲ್ಲಿ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು. 1988ರಲ್ಲಿ ಭಾರಧ್ವಜ್ ಅವರು ರಾಜ್ಯಸಭೆಗೆ ಪುನರಾಯ್ಕೆಗೊಂಡಿದ್ದರು.
2004 ರಿಂದ 2009ರವರೆಗೆ ಮನಮೋಹನ್ ಸಿಂಗ್ ಸಚಿವ ಸಂಪುಟದಲ್ಲಿ ಕಾನೂನು ಮತ್ತು ನ್ಯಾಯ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಈ ಸಂದರ್ಭದಲ್ಲಿ ಅವರು ಗ್ರಾಮ ನ್ಯಾಯಾಲಯ ಎಂಬ ಹೊಸ ಪರಿಕಲ್ಪನೆಯನ್ನು ಪರಿಚಯಿಸಿದ್ದರು.