ಹುಣಸೂರು: ನೆದರ್‌ಲ್ಯಾಂಡ್ ನಲ್ಲಿ ಹಿರಿಯ ನಾಗರೀಕರಿಗಾಗಿ ಎಲ್ಲ ದುಡಿಯುವ ವರ್ಗದವರು ಕಾಣಿಕೆ ನೀಡುತ್ತಿರುವ ಮಾದರಿಯಲ್ಲೇ ಭಾರತದಲ್ಲೂ ಜಾರಿಗೆ ತಂದಲ್ಲಿ ಅವರ ಮುಪ್ಪಿನ ಕಾಲದ ಬದುಕು ಹಸನಾಗಲಿದೆ ಎಂದು ತಾಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಕೃಷ್ಣಕುಮಾರ್ ಅಭಿಪ್ರಾಯಪಟ್ಟರು.
ನಗರದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ಪಂಚಾಯ್ತಿಯು ವಿವಿಧ ಇಲಾಖೆಯಗ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಹಿರಿಯ ನಾಗರೀಕ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರನ್ನು ಸನ್ಮಾನಿಸಿ ಮಾತನಾಡಿದರು.
ಪ್ರವೃತ್ತಿ ಸಲ್ಲದು: ದೇಶಕ್ಕೆ ಹಿರಿಯರ ಕೊಡುಗೆ ಅಪಾರವಾಗಿದ್ದು, ಅವರಿಂದಾಗಿ ಇಂದು ನಮ್ಮ ಸಂಸ್ಕೃತಿ, ಆಚಾರ-ವಿಚಾರ ವಿಶ್ವದಲ್ಲೇ ಮಾನ್ಯತೆ ಪಡೆದಿದೆ, ತಂದೆ-ತಾಯಿಯರಿಗೆ ಗೌರವ ಕೊಡುವುದು, ವೃದ್ದಾಪ್ಯದಲ್ಲಿ ಪ್ರೀತಿಯಿಂದ ಕಾಣುವುದು ಅವರ ಆರೋಗ್ಯ ನೋಡಿಕೊಳ್ಳುವುದು ಅವರ ಕರ್ತವ್ಯ, ಆದರೆ ಇಂದಿನ ಬಹುತೇಕ ಯುವ ಸಮುದಾಯ ಆ ರೀತಿ ನಡೆದುಕೊಳ್ಳದೆ ದೂರವಿಟ್ಟು ವೃದ್ಧಾಶ್ರಮಕ್ಕೆ ಸೇರಿಸುವ ಪ್ರವೃತ್ತಿ ಹೆಚ್ಚುತ್ತಿದೆ ಇದು ಸಲ್ಲದು ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿವಿಲ್ ನ್ಯಾಯಾಧೀಶ ಗಿರೀಶ್‌ಚಟ್ನಿ ತಂದೆ-ತಾಯಂದಿರು ಕಣ್ಣಿದ್ದಂತೆ, ಅವರ ಮುಪ್ಪಿನ ಕಾಲದಲ್ಲಿ ಆರೈಕೆ ಮಾಡುವುದು ಮಕ್ಕಳ ಕರ್ತವ್ಯವಾಗಿದ್ದು, ಅವರನ್ನು ಪೂಜ್ಯ ಭಾವನೆಯಿಂದ ನೋಡಿಕೊಳ್ಳಬೇಕೆಂದು ಸೂಚಿಸಿದರು.
ಕಾನೂನಿನ ಮೊರೆ: ವಕೀಲರ ಸಂಘದ ಅಧ್ಯಕ್ಷ ಎಸ್.ಬಿ.ಮೂರ್ತಿ ಮಾತನಾಡಿ ಹಿರಿಯರ ಅನುಭವ ಸಮಾಜಕ್ಕೆ ದಾರಿ ದೀಪವಾಗಿದೆ, ಸಾಕಿ ಸಲುಹಿದ ಪೋàಷಕರನ್ನು ಸಲಹುವುದು ಮಕ್ಕಳ ಜವಾಬ್ದಾರಿ, ಇದಕ್ಕೆ ಕಾನೂನಿನಲ್ಲಿ ಮಾನ್ಯತೆ ನೀಡಿದ್ದು, ತಂದೆ-ತಾಯಿಯನ್ನು ಮಕ್ಕಳು ಸರಿಯಾಗಿ ನೋಡಿಕೊಳ್ಳದಿದ್ದಲ್ಲಿ ಕಾನೂನಿನಲ್ಲಿ ದೊಡ್ಡ ಅವಕಾಶ ಕಲ್ಪಿಸಿದ್ದು, ಮಕ್ಕಳಿಂದ ಶೋಷಣೆಗೊಳಗಾದವರು ಕಾನೂನಿನ ಮೊರೆ ಹೋಗಬಹುದೆಂದರು.
ವಕೀಲ ವೆಂಕಟೇಶ್, ವಿಕಲಚೇತನ ಸಬಲೀಕರಣ ಇಲಾಖೆಯ ದೇವರಾಜ್ ಹಾಗೂ ವಿಕಲ ಚೇತನರ ಆರ್ಥಿಕಾಭಿವೃದ್ಧಿ ಸಂಯೋಜಕ ವೀರಕುಮಾರ್ ಮಾಹಿತಿ ನೀಡಿದರು. ವೇದಿಕೆಯಲ್ಲಿ ಸಹಾಯಕ ಸರಕಾರಿ ಅಭಿಯೋಜಕ ನಾರಾಯಣ್, ಅಪರ ಸರಕಾರಿ ವಕೀಲ ವೆಂಕಟೇಶ್, ಎಸಿಡಿಪಿಒ ವೆಂಕಟಪ್ಪ, ಕಾನೂನು ಸೇವಾ ಸಮಿತಿಯ ಸಂಯೋಜಕಿ ಪ್ರಮಿಳಾ ಉಪಸ್ಥಿತರಿದ್ದರು. ನೂರಕ್ಕೂ ಹೆಚ್ಚು ಮಂದಿ ಹಿರಿಯ ನಾಗರಿಕರು ಹಾಗೂ ವಿಕಲಚೇತನರು ಭಾಗವಹಿಸಿದ್ದರು.
ಹಿರಿಯರಿಗೆ ಗೌರವ: ಜಿಲ್ಲಾಪರಿಷತ್ ಮಾಜಿ ಸದಸ್ಯೆ, ಸಮಾಜ ಸೇವಕಿ ಗಾವಡಗೆರೆ ಕೃಷ್ಣಾಬಾಯಿ, ಮಾಜಿ ಸೈನಿಕ ಚೌಡಿಕಟ್ಟೆಯ ಅರ್ಜುನ್‌ರಾವ್ ಕಾಳಿಂಗೆ ಹಾಗೂ ಮಂಗಳಮುಖೀ ಕೃಷ್ಣಕುಮಾರಿ ಯವರಿಗೆ ಗಣ್ಯರು ಸನ್ಮಾನಿಸಿದರು.
ನೆರವು: ನೆದರ್‌ಲ್ಯಾಂಡ್‌ನಂತಹ ದೇಶದಲ್ಲಿ ಹಿರಿಯರಿಗೆ ಮಾಸಿಕ 400-500 ಡಾಲರ್ ನೆರವು ನೀಡುತ್ತದೆ, ಅದೇ ಮಾದರಿ ಇಲ್ಲಿಯೂ ಆದಲ್ಲಿ ಒಳಿತು, ಅವರು ತಾಲೂಕು ಪಂಚಾಯ್ತಿವತಿಯಿಂದ ಹಿರಿಯರಿಗೆ ಯೋಜನೆಗಳ ಸೌಲಭ್ಯ ಕಲ್ಪಿಸುವುದಾಗಿ ತಾಪಂ ಕಾರ್ಯ ನಿರ್ವಹಣಾಧಿಕಾರಿ ಕೃಷ್ಣಕುಮಾರ್ ಪ್ರಕಟಿಸಿದರು.