Advertisement

ಎಸ್‌ಎಸ್‌ಕೆ ಸಮಾಜದಿಂದ ಹಿರಿಯ ನಾಗರಿಕರಿಗೆ ಸನ್ಮಾನ

04:42 PM Apr 23, 2018 | Team Udayavani |

ಹುಬ್ಬಳ್ಳಿ: ಸ್ಥಳೀಯ ಕ್ಷತ್ರೀಯ ಸಮಾಜ ಭವಾನಿ ನಗರದ ಟ್ರಸ್ಟ್‌ ಕಮಿಟಿ ವತಿಯಿಂದ ಹು-ಧಾ ಎಸ್‌ಎಸ್‌ಕೆ ಸಮಾಜದ ಸಹಸ್ರಚಂದ್ರ ದರ್ಶನ ಪೂರೈಸಿದ ಹಿರಿಯ ನಾಗರಿಕರ ಸನ್ಮಾನ ಹಾಗೂ ಆಯುಷ್ಯ ವೃದ್ಧಿ ಮೃತ್ಯುಂಜಯ ಹೋಮ ಸಮಾರಂಭ ಗೋಕುಲ ರಸ್ತೆ ಗೋಕುಲ ಗಾರ್ಡನ್‌ನ ಕರ್ನಾಟಕ ದರ್ಬಾರ್‌ ಹಾಲ್‌ನಲ್ಲಿ ರವಿವಾರ ನಡೆಯಿತು. 80 ವರ್ಷ ಪೂರ್ಣಗೊಳಿಸಿದ ಸಮಾಜದ 100ಕ್ಕೂ ಅಧಿಕ ಹಿರಿಯರನ್ನು ಸತ್ಕರಿಸಲಾಯಿತು ಹಾಗೂ ಆಯುಷ್ಯ ವೃದ್ಧಿ ನಿಮಿತ್ತ ಮೃತ್ಯುಂಜಯ ಹೋಮ ಕೈಗೊಳ್ಳಲಾಯಿತು.

Advertisement

ಮೃತ್ಯುಂಜಯ ಹೋಮ ನಡೆಸಿಕೊಟ್ಟ ಸತ್ಯಾನಂದ ಸ್ವಾಮಿ ಮಾತನಾಡಿ, ಸಹಸ್ರಚಂದ್ರ ದರ್ಶನ ಮಾಡಿದ ಹಿರಿಯರನ್ನು ಸನ್ಮಾನಿಸುವುದು ಹಾಗೂ ಅವರ ದರ್ಶನ ಮಾಡುವುದರಿಂದ ಪಾಪಗಳ ನಿವಾರಣೆ ಆಗುತ್ತದೆ ಎಂಬ ಪ್ರತೀತಿ ಇದೆ. ಮೃತ್ಯುಂಜಯ ಆರಾಧನೆ ಮಾಡುವುದರಿಂದ ಜೀವನದಲ್ಲಿ
ಒಳಿತಾಗುತ್ತದೆ ಎಂದರು.

ಕಮಿಟಿಯ ಮುಖಂಡ ಬಾಳು ಮಗಜಿಕೊಂಡಿ ಮಾತನಾಡಿ, ಸಮಾಜದಲ್ಲಿನ ಹಿರಿಯರನ್ನು ಸನ್ಮಾನಿಸುವುದರಿಂದ ಸಮಾಜದ ಜೊತೆ ಹಿಂದೂ ಧರ್ಮದ ಜಾಗೃತಿ ಆಗುತ್ತದೆ. ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಇನ್ನಿತರೆ ಸಮಾಜಕ್ಕೂ ಮಾದರಿಯಾಗುತ್ತದೆ. ಸಮಾಜದಲ್ಲಿ ಏಕತೆ ಮೂಡುತ್ತದೆ ಎಂದು ಹೇಳಿದರು.

ಮಾಜಿ ಶಾಸಕ ಅಶೋಕ ಕಾಟವೆ, ಭಾಸ್ಕರ ಜಿತೂರಿ, ಡಿ.ಕೆ. ಚವ್ಹಾಣ, ನಾಗೇಶ ಕಲಬುರ್ಗಿ, ರಂಗಾ ಬದ್ದಿ, ವಿನಾಯಕ ದಲಭಂಜನ, ಗೋಪಾಲ ಬದ್ದಿ ಮೊದಲಾದವರು ಪಾಲ್ಗೊಂಡಿದ್ದರು. ಸಮಾರಂಭದಲ್ಲಿ ಬಹುತೇಕವಾಗಿ ಬಿಜೆಪಿಯಲ್ಲಿ ಗುರುತಿಸಿಕೊಂಡವರೆ ಹೆಚ್ಚಿನ ಸಂಖ್ಯೆಯಲ್ಲಿ ಇದ್ದುದ್ದರಿಂದ ಬಿಜೆಪಿಯ ಸಮಾರಂಭವೆಂಬಂತೆ ಕಂಡುಬಂತು.

ಪೊಲೀಸರ ಹದ್ದಿನ ಕಣ್ಣು
ಸಮಾರಂಭಕ್ಕೆ ಯಾವುದೇ ಪಕ್ಷದ ರಾಜಕೀಯ ಗಣ್ಯರನ್ನು ಆಹ್ವಾನಿಸಕೂಡದೆಂದು ಸಂಘಟಕರಿಗೆ ಗೋಕುಲ ರಸ್ತೆ ಪೊಲೀಸರು ಕಟ್ಟಪ್ಪಣೆ ವಿಧಿಸಿ ಪರವಾನಗಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಮೌಖಿಕ ಆಹ್ವಾನವಿದ್ದರೂ ಜಗದೀಶ ಶೆಟ್ಟರ ಮತ್ತು ಪ್ರಹ್ಲಾದ ಜೋಶಿ ಕಾರ್ಯಕ್ರಮದತ್ತ ಮುಖ ಮಾಡಲಿಲ್ಲ ಎನ್ನಲಾಗಿದೆ. ಸಮಾರಂಭದಲ್ಲಿ ಎಸ್‌ಎಸ್‌ಕೆ ಸಮಾಜದವರನ್ನು ಹೊರತುಪಡಿಸಿ ಇನ್ನಿತರೆ ಪಕ್ಷದ ಯಾವ ಮುಖಂಡರು ಪಾಲ್ಗೊಳ್ಳಲಿಲ್ಲ. ಸಮಾರಂಭಕ್ಕೆ ರಾಜಕೀಯ ಪಕ್ಷದ ಗಣ್ಯರು ಪಾಲ್ಗೊಳ್ಳಬಹುದೆಂಬ ಶಂಕೆಯ ಮೇರೆಗೆ ಚುನಾವಣಾಧಿಕಾರಿಗಳು ಸ್ಥಳದಲ್ಲಿ ಮುಕ್ಕಾಂ ಹೂಡಿ ರಾಜಕೀಯ ಧುರೀಣರ ಆಗಮನದ ಮೇಲೆ ಹದ್ದಿನ ಕಣ್ಣು ಇಟ್ಟಿದ್ದರು. ಅಲ್ಲದೆ ಸಮಾರಂಭದಲ್ಲಿ ಪಾಲ್ಗೊಂಡವರಿಗಾಗಿ ಎಷ್ಟು ಪ್ರಮಾಣದಲ್ಲಿ ಆಹಾರ ಸಿದ್ಧಪಡಿಸಲಾಗಿದೆ ಎಂಬುದನ್ನು ಪರಿಶೀಲಿಸಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next