ಉಡುಪಿ: ಸಸ್ಯ ವರ್ಗೀಕರಣ ಶಾಸ್ತ್ರದಲ್ಲಿ ಅದ್ಭುತ ಕೊಡುಗೆಯನ್ನು ದಾಖಲಿಸಿದ್ದ ಹಿರಿಯ ಸಸ್ಯ ವಿಜ್ಞಾನಿ, ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಸಸ್ಯ ಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ವಿಭಾಗ ಮುಖ್ಯಸ್ಥರೂ ಆಗಿದ್ದ ಡಾ.ಕೆ. ಗೋಪಾಲಕೃಷ್ಣ ಭಟ್ ಅವರು ಗುರುವಾರ ನಿಧನ ಹೊಂದಿದರು. ಅಲ್ಪಕಾಲದಿಂದ ಅಸೌಖ್ಯದಿಂದ ಬಳಲುತ್ತಿದ್ದ ಅವರು ಗುರುವಾರ ಮುಂಜಾನೆ ಉಡುಪಿ ಚಿಟ್ಪಾಡಿಯಲ್ಲಿರುವ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ.
ಫ್ಲೋರಾ ಆಫ್ ಉಡುಪಿ, ಫ್ರೋರಾ ಆಫ್ ದಕ್ಷಿಣ ಕನ್ನಡ ಎಂಬ ಬೃಹತ್ ಸಸ್ಯಶಾಸ್ತ್ರೀಯ ನಿಘಂಟು ಸಂಶೋಧನಾ ಗ್ರಂಥಗಳನ್ನು ರಚಿಸಿ ಎರಡು ಜಿಲ್ಲೆಗಳಲ್ಲಿರುವ ಸಮಗ್ರ ಸಸ್ಯಪ್ರಬೇಧಗಳ ಬಗ್ಗೆ ಅಮೂಲ್ಯ ಮಾಹಿತಿ ನೀಡಿದ್ದರು. ಅವರು ಉಡುಪಿಯಲ್ಲಿ ಕಂಡು ಹಿಡಿದ ಅಪೂರ್ವ ಸಸ್ಯಪ್ರಭೇದವೊಂದಕ್ಕೆ ಲಂಡನ್ ನ ಪ್ರತಿಷ್ಠಿತ ಬಯೋಲಜಿಕಲ್ ಸೊಸೈಟಿಯು ಅವರ ಹೆಸರನ್ನೇ ಇಟ್ಟು ಗೌರವಿಸಿದ್ದು ಡಾ.ಕೆ. ಗೋಪಾಲಕೃಷ್ಣ ಭಟ್ಟರ ಅನನ್ಯ ಸಾಧನೆಗೆ ಸಾಕ್ಷಿ.
ಮೂಲತಃ ಕಾಸರಗೋಡಿನ ಕಾಕುಂಜೆಯವರಾಗಿದ್ದ ಅವರು ಬಹುಪಾಲು ಜೀವನ ಉಡುಪಿಯಲ್ಲೇ ನಡೆಸಿದ್ದರು. ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಡಾ.ಕೆ. ಗೋಪಾಲಕೃಷ್ಣ ಭಟ್ ಅವರನ್ನು ಗೌರವಿಸಿದ್ದವು. ಉಡುಪಿಯ ಹಿಂದು ಯುವಸೇನೆಯು ಸ್ವಾತಂತ್ರ್ಯ ಸುವರ್ಣ ಮಹೋತ್ಸವ ವರ್ಷದಲ್ಲಿ ‘ಜೈ ವಿಜ್ಞಾನ್’ ಪುರಸ್ಕಾರದೊಂದಿಗೆ ಸನ್ಮಾನಿಸಿತ್ತು.
ಇದನ್ನೂ ಓದಿ:ಹಿರಿಯ ಅರ್ಥಧಾರಿ ಎಸ್. ಎಂ. ಹೆಗಡೆ ನಿಧನ
ಡಾ ಭಟ್ಟರ ಬಗ್ಗೆ ವಿಶೇಷ ಅಭಿಮಾನ ಹೊಂದಿದ್ದ ಪೇಜಾವರ ಶ್ರೀಗಳು, ಗೋಪಾಲಕೃಷ್ಣ ಭಟ್ಟರ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿ ಸದ್ಗತಿಯನ್ನು ಪ್ರಾರ್ಥಿಸಿ ಸಂದೇಶ ನೀಡಿದ್ದಾರೆ .