ಉರ್ವಸ್ಟೋರ್ : ಆಧ್ಯಾತ್ಮಿಕ ವಿಚಾರಗಳಿಗೆ ಸಾಹಿತ್ಯದ ಎಳೆ ನೀಡಿದ ಕನ್ನಡದ ಕೆಲವೇ ಕೆಲವು ಲೇಖಕಿಯರ ಪೈಕಿ ಪದ್ಮಾ ಶೆಣೈ ಒಬ್ಬರು. ಸರಳ ಭಾಷೆ, ವಾಸ್ತವ ಪ್ರಜ್ಞೆ ಮತ್ತು ಅಪಾರ ಸಂಯಮವನ್ನೊಳಗೊಂಡ ಅವರ ಬರವಣಿಗೆ ಇತರರಿಗೆ ಮಾದರಿ ಎಂದು ನಳಿನಾಕ್ಷಿ ಉದಯರಾಜ್
ಅಭಿಪ್ರಾಯಪಟ್ಟರು.
ಕರಾವಳಿ ಲೇಖಕಿಯರ-ವಾಚಕಿಯರ ಸಂಘದ ವತಿಯಿಂದ ಉರ್ವಸ್ಟೋರ್ ಸಾಹಿತ್ಯ ಸದನದಲ್ಲಿ ನಡೆದ ‘ಬಾಳು-ಬರಹದ ಪಯಣ: 2’ ಅವಿಭಜಿತ ದ.ಕ. ಹಾಗೂ ಕಾಸರಗೋಡು ಜಿಲ್ಲೆಯ ಹಿರಿಯ ಲೇಖಕಿಯರ ಕುರಿತು ವಿಚಾರಗೋಷ್ಠಿ ಕಾರ್ಯಕ್ರಮದಲ್ಲಿ ಸಂಘದ ಸ್ಥಾಪಕಾಧ್ಯಕ್ಷೆ ಪದ್ಮಾ ಶೆಣೈಯವರ ಸಾಹಿತ್ಯದ ಕುರಿತು ಅವರು ಶನಿವಾರ ಅವಲೋಕನ ಮಾಡಿದರು.
ಪದ್ಮಾ ಶೆಣೈ ಅವರು 30ಕ್ಕೂ ಹೆಚ್ಚು ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಪರಿಚಯಿಸಿದ್ದಾರೆ. 11 ಮಹತ್ವದ ಕಾದಂಬರಿಗಳನ್ನು ರಚಿಸಿದ್ದಾರೆ. ಸಾಹಿತಿಗಳ ಸಂಪರ್ಕದಿಂದಲೇ ಸಾಹಿತ್ಯ ಕೃಷಿ ಆರಂಭಿಸಿದ ಅವರ ಕೃತಿಗಳಲ್ಲಿ ಮನುಷ್ಯ ಸಂಬಂಧ, ಆಧ್ಯಾತ್ಮಿಕ ವಿಚಾರಗಳಿಗೆ ಹೆಚ್ಚು ಒತ್ತು ನೀಡಿರುವುದನ್ನು ಕಾಣಬಹುದು. ಸರಳ ಮತ್ತು ಸುಲಲಿತ ಭಾಷೆಯಲ್ಲಿ ಸಾಹಿತ್ಯ ರಚಿಸಿರುವ ಅವರ ಕೃತಿಗಳು ಮಾದರಿಯಾಗಿವೆ ಎಂದರು.
ಲೇಖಕಿಯರಾದ ಲಲಿತಾ ರೈ, ಡಾ| ಲಲಿತಾ ಎಸ್. ಎನ್. ಭಟ್, ಇಂದಿರಾ ಹಾಲಂಬಿ, ಎ.ಪಿ. ಮಾಲತಿ ಅವರ ಬಾಳು-ಬರಹದ ಕುರಿತು ಕ್ರಮವಾಗಿ ಡಾ| ರಾಜಶ್ರೀ, ಡಾ| ಮಹೇಶ್ವರಿ ಯು., ಸುಶೀಲಾ ಆರ್. ರಾವ್, ಡಾ| ಶೈಲಾ ಯು. ಅವರು ಅವಲೋಕನ ಮಾಡಿದರು. ಸಂಘದ ಅಧ್ಯಕ್ಷೆ ಶಶಿಲೇಖಾ ಬಿ. ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ರೂಪಕಲಾ ಆಳ್ವ ಉಪಸ್ಥಿತರಿದ್ದರು. ಜತೆ ಕಾರ್ಯದರ್ಶಿ ಅರುಣಾ ನಾಗರಾಜ್ ಸ್ವಾಗತಿಸಿದರು. ಅರುಂಧತಿ ಕಾರ್ಯಕ್ರಮ ನಿರೂಪಿಸಿದರು.