Advertisement

ಹಿರಿಯ ನಟಿ ಜಯಂತಿ ಆರೋಗ್ಯ ವಿಚಾರಿಸಿದ ಸಿಎಂ

04:38 PM Mar 29, 2018 | |

ಕನ್ನಡ ಚಿತ್ರರಂಗದ ಹಿರಿಯ ನಟಿ ಜಯಂತಿ ಅವರ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದ್ದು, ಕನ್ನಡ ಚಿತ್ರರಂಗ ಸೇರಿದಂತೆ ವಿವಿಧ ಕ್ಷೇತ್ರಗಳ ಮಂದಿ ಆಸ್ಪತ್ರೆಗೆ ಭೇಟಿ ನೀಡಿ ಜಯಂತಿಯವರ ಆರೋಗ್ಯ ವಿಚಾರಿಸುತ್ತಿದ್ದಾರೆ. 

Advertisement

ಗುರುವಾರ ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಕ್ರಮ್‌ ಆಸ್ಪತ್ರೆಗೆ ತೆರಳಿ ಜಯಂತಿಯವರ ಆರೋಗ್ಯ ವಿಚಾರಿಸಿದ್ದಾರೆ. ಚಿಕಿತ್ಸೆಯ ಕುರಿತು ಜಯಂತಿ ಪುತ್ರ ಕೃಷ್ಣ ಕುಮಾರ್‌ ಹಾಗೂ ವೈದ್ಯರಿಂದ ಮಾಹಿತಿ ಪಡೆದ ಅವರು ಶೀಘ್ರ ಗುಣಮುಖರಾಗುವಂತೆ ಹಾರೈಸಿದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಹಾಗೂ ಮಂಡಳಿಯ ಕೆಲವು ಪದಾಧಿಕಾರಿಗಳು ಕೂಡಾ ಗುರುವಾರ ಆಸ್ಪತ್ರೆಗೆ ಭೇಟಿ ನೀಡಿ ಜಯಂತಿಯವರ ಆರೋಗ್ಯ ವಿಚಾರಿಸಿದ್ದಾರೆ. ಕನ್ನಡ ಚಿತ್ರರಂಗದ ಅನೇಕ ಕಲಾವಿದರು ಜಯಂತಿಯವರ ಆರೋಗ್ಯ ವಿಚಾರಿಸುತ್ತಿದ್ದು, ಬುಧವಾರ ನಟರಾದ ಶಿವರಾಜಕುಮಾರ್‌, ಶ್ರೀನಿವಾಸ ಮೂರ್ತಿ, ಶ್ರೀನಾಥ್‌ ಸೇರಿದಂತೆ ಅನೇಕರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು. 

ಅಸ್ತಮಾದಿಂದ ಬಳಲುತ್ತಿದ್ದ ಜಯಂತಿ ಅವರು ಭಾನುವಾರ ರಾತ್ರಿ ತೀವ್ರ ಅಸ್ವಸ್ಥಗೊಂಡಿದ್ದರು. ಆ ಹಿನ್ನೆಲೆಯಲ್ಲಿ ಅವರನ್ನು ಸೋಮವಾರ ನಗರದ ವಿಕ್ರಮ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಗಳವಾರ ಸಂಜೆಯ ಹೊತ್ತಿಗೆ ಅವರ ಆರೋಗ್ಯದ ಕುರಿತು ಊಹಾಪೋಹಗಳು ಹರಡಿದ್ದವು. ಅವರಿಗೆ ತೀವ್ರ ಚಿಕಿತ್ಸಾ ಘಟಕದಲ್ಲಿರಿಸಿ ಕೃತಕ ಉಸಿರಾಟ ವ್ಯವಸ್ಥೆ ಮೂಲಕ ಚಿಕಿತ್ಸೆ ನೀಡಲಾಗುತ್ತಿತ್ತು. ಈಗ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡಿದ್ದು, ಅವರನ್ನು ಜನರಲ್‌ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next