ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಂ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅವರಿಗೆ ವಿದ್ಯಾಪೀಠ ಬಳಿ ಇರುವ ಪ್ರಶಾಂತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ.
84 ರ ಹರೆಯದ ಶಿವರಾಂ ಅವರು ಮೂರು ದಿನಗಳ ಹಿಂದೆ ಮನೆಯಲ್ಲಿ ಅಯ್ಯಪ್ಪ ಸ್ವಾಮಿಯ ಪೂಜೆ ಮಾಡುವ ವೇಳೆ ಆಯತಪ್ಪಿ ಬಿದ್ದು ತಲೆಯ ಭಾಗಕ್ಕೆ ಗಂಭೀರವಾದ ಗಾಯವಾಗಿದೆ ಎಂದು ತಿಳಿದು ಬಂದಿದೆ.
ಮೆದುಳಿನಲ್ಲಿ ರಕ್ತಸ್ರಾವವಾಗಿದ್ದು,ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಲು ಸೂಚಿಸಿದರಾದರೂ ವಯಸ್ಸಾದ ಕಾರಣ ಸರ್ಜರಿ ಮಾಡಲಾಗಿಲ್ಲ ಎಂದು ಅವರ ಪುತ್ರ ರವಿಶಂಕರ್ ತಿಳಿಸಿದ್ದಾರೆ.
ಶಿವರಾಂ ಅವರು ಭಾರತೀಯ ನಟ ಮಾತ್ರವಲ್ಲದೆ ನಿರ್ಮಾಪಕ ಮತ್ತು ನಿರ್ದೇಶಕರಾಗಿ ಕನ್ನಡ ಚಿತ್ರರಂಗದಲ್ಲಿ ಆರು ದಶಕಗಳ ಸೇವೆ ಸಲ್ಲಿಸಿದ್ದಾರೆ. ಅವರು ನಾಯಕನ ಪಾತ್ರಗಳು, ಹಾಸ್ಯ ಪಾತ್ರಗಳು ಮತ್ತು ಪೋಷಕ ಪಾತ್ರಗಳನ್ನು ನಿರ್ವಹಿಸಿದ್ದಾರೆ.
ತಮ್ಮ ಹಿರಿಯ ಸಹೋದರ, ಎಸ್. ರಾಮನಾಥನ್ ಅವರೊಂದಿಗೆ ಸೇರಿಕೊಂಡು 1972 ರಲ್ಲಿ ‘ಹೃದಯ ಸಂಗಮ’ವನ್ನು ನಿರ್ದೇಶಿಸುವುದರ ಜೊತೆಗೆ ರಾಶಿ ಬ್ರದರ್ಸ್ ಹೆಸರಿನಲ್ಲಿ ಹಲವಾರು ಚಲನಚಿತ್ರಗಳನ್ನು ನಿರ್ಮಿಸಿದರು.
ಸಹೋದರರು ಕನ್ನಡ ಮಾತ್ರವಲ್ಲದೆ ಬಾಲಿವುಡ್ ಚಲನಚಿತ್ರಗಳನ್ನೂ ನಿರ್ಮಿಸಿದ್ದರು.ನಟನಾಗಿ, ಶಿವರಾಮ್ ಅವರು ಅನೇಕ ಧೀಮಂತ ನಿರ್ದೇಶಕರೊಂದಿಗೆ ಕೆಲಸ ಮಾಡಿದ ಹೆಗ್ಗಳಿಕೆಯನ್ನು ಹೊಂದಿದ್ದು, ಪುಟ್ಟಣ್ಣ ಕಣಗಾಲ್ ಅವರೊಂದಿಗಿನ ಅವರ ಒಡನಾಟವು ಹೆಚ್ಚು ನೆನಪಿನಲ್ಲಿ ಉಳಿಯುತ್ತದೆ. ರಾಜಕುಮಾರ್ ಅಭಿನಯದ ಸಂಗೀತಂ ಶ್ರೀನಿವಾಸ ರಾವ್ ನಿರ್ದೇಶನದ ಎಲ್ಲಾ ಏಳು ಕನ್ನಡ ಚಲನಚಿತ್ರಗಳಲ್ಲಿ ಅವರು ಮುಖ್ಯ ಭಾಗವಾಗಿದ್ದಾರೆ.