Advertisement

ಅನರ್ಹರನ್ನು ಮನೆಗೆ ಕಳಿಸಿ: ಸಿದ್ದರಾಮಯ್ಯ

09:27 PM Nov 16, 2019 | Team Udayavani |

ಹೊಸಕೋಟೆ: ಉಪಚುನಾವಣೆಗೆ ಕಾರಣರಾಗಿರುವ ಅನರ್ಹ ಶಾಸಕರುಗಳನ್ನು ಮತದಾರರು ಸೋಲಿಸುವ ಮೂಲಕ ಶಾಶ್ವತವಾಗಿ ಮನೆಗೆ ಕಳುಹಿಸಬೇಕೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು. ಅವರು ನಗರದ ಹಳೆ ಬಸ್‌ ಸ್ಟಾಂಡಿನಲ್ಲಿ ಏರ್ಪಡಿಸಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.

Advertisement

ಕಾಂಗ್ರೆಸ್‌ ಪಕ್ಷದಿಂದ ಎಲ್ಲಾ ಸವಲತ್ತು, ಅಧಿಕಾರಗಳನ್ನು ಅನುಭವಿಸಿದರೂ ಸಹ ತಮ್ಮ ಸ್ವಾರ್ಥ ಸಾಧನೆಗಾಗಿ ಸಮ್ಮಿಶ್ರ ಸರಕಾರದ ಪತನಕ್ಕೆ ಕಾರಣರಾದ ವಿಶ್ವಾಸ ದ್ರೋಹಿ ಅನರ್ಹ ಶಾಸಕರಿಗೆ ಮತದಾರರು ತಕ್ಕ ಪಾಠ ಕಲಿಸಬೇಕು. ಸ್ಥಳೀಯ ಅನರ್ಹ ಶಾಸಕ ಎಂಟಿಬಿ ನಾಗರಾಜ್‌ ಸಚಿವ ಸ್ಥಾನದೊಂದಿಗೆ ಪಕ್ಷದಿಂದ ಎಲ್ಲಾ ಸೌಲಭ್ಯಗಳನ್ನು ಪಡೆದಿದ್ದಾಗ್ಯೂ ದ್ರೋಹ ಬಗೆದು ಕೋಮುವಾದಿ ಬಿಜೆಪಿ ಪಕ್ಷಕ್ಕೆ ಸೇರಿದ್ದಾರೆ.

ತಮ್ಮ ಅಧಿಕಾರವಧಿಯಲ್ಲಿ ತಾಲೂಕಿಗಾಗಿ ಪ್ರಸ್ತಾಪಿಸಿದ್ದ ಎಲ್ಲಾ ಬೇಡಿಕೆಗಳನ್ನು ಈಡೇರಿಸಿ ಯೋಜನೆಗಳನ್ನು ಮಂಜೂರು ಮಾಡಿದ್ದೇ ಅಲ್ಲದೆ ಅನುದಾನವನ್ನು ಸಹ ನೀಡಲಾಗಿತ್ತು. ಕ್ಷೇತ್ರವು ಕಾಂಗ್ರೆಸ್‌ನ ಭದ್ರಕೋಟಿಗೆಯಾಗಿದ್ದು ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಕಾರ್ಯಕರ್ತರು ಶ್ರಮಿಸಬೇಕು. ಎಂಟಿಬಿ ನಾಗರಾಜ್‌ ಸೋಲಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಆಪರೇಷನ್‌ ಕಮಲಕ್ಕೆ ಪ್ರೋತ್ಸಾಹಿಸಿದ ಕೇಂದ್ರ ಸಚಿವ ಅಮಿತ್‌ ಶಾರೇ ಕಾರಣರಾಗಲಿದ್ದಾರೆ ಎಂದರು.

ಮಾಜಿ ಸಚಿವ ಕೃಷ್ಣಬೈರೇಗೌಡ ಮಾತನಾಡಿ ಕೇವಲ ಹಣಬಲದಿಂದ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂಬುದನ್ನು ಮತದಾರರು ಎಂಟಿಬಿ ನಾಗರಾಜ್‌ಗೆ ಮನವರಿಕೆ ಮಾಡಿಕೊಡಬೇಕು. ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಕಾರ್ಯಕರ್ತರಿಗೆ ಬೆದರಿಕೆ ಹಾಕುವುದರೊಂದಿಗೆ ಕೆಲವು ಮುಖಂಡರಿಗೆ ಹಣದ ಆಮಿಷಗಳನ್ನು ಸಹ ಒಡ್ಡಲಾಗುತ್ತಿದೆ ಎಂದರು.

ಕಾಂಗ್ರೆಸ್‌ ಅಭ್ಯರ್ಥಿ ಪದ್ಮಾವತಿ ಸುರೇಶ್‌ ಮಾತನಾಡಿ ಕ್ಷೇತ್ರದ ಮತದಾರರ ಹಿತ ಕಾಪಾಡಲು ಹಾಗೂ ಪಕ್ಷದ ಪ್ರತಿಷ್ಠೆಯನ್ನು ಉಳಿಸಲು ಚುನಾವಣೆಗೆ ಸ್ಪರ್ಧಿಸಲಾಗುತ್ತಿದೆಯೇ ಹೊರತು ಯಾವುದೇ ಸ್ಥಾರ್ಥ ಉದ್ದೇಶಗಳಿಗಲ್ಲ ಎಂದರು. ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಶಾಸಕರುಗಳಾದ ಶಿವಣ್ಣ, ಬೈರತಿ ಸುರೇಶ್‌, ನಂಜೇಗೌಡ, ರಾಜ್ಯಸಭಾ ಸದಸ್ಯ ರವಿ, ಎಐಸಿಸಿ ಸದಸ್ಯೆ ಕಮಲಾಕ್ಷಿ ರಾಜಣ್ಣ, ಮುಖಂಡ ಪಿಳ್ಳಪ್ಪ ಮುಂತಾದವರು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next