Advertisement

15 ದಿನಗಳೊಳಗೆ ಮನೆಗೆ ತಲುಪಿಸಿ ; ಕಾರ್ಮಿಕರ ಕುರಿತಂತೆ ಸುಪ್ರೀಂ ಆದೇಶ

01:44 AM Jun 10, 2020 | Hari Prasad |

ಲಾಕ್‌ಡೌನ್‌ನಿಂದ ಅತಂತ್ರರಾಗಿರುವ ವಲಸೆ ಕಾರ್ಮಿಕರನ್ನು 15 ದಿನಗಳೊಳಗೆ ಅವರವರ ರಾಜ್ಯಗಳಿಗೆ ಮುಟ್ಟಿಸಬೇಕು ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ಎಲ್ಲಾ ರಾಜ್ಯ ಸರಕಾರಗಳಿಗೆ ಸೂಚಿಸಿದೆ.

Advertisement

ಅಲ್ಲದೆ, ಲಾಕ್‌ಡೌನ್‌ನ ಪ್ರತಿ ಭಟನೆ ವೇಳೆ ಕಾರ್ಮಿಕರ ಮೇಲೆ ಹೂಡಲಾಗಿರುವ ಮೊಕದ್ದಮೆಗಳನ್ನು ಹಿಂಪಡೆಯಬೇಕು ಎಂದೂ ಕೋರ್ಟ್‌ ಆದೇಶಿಸಿದೆ.

ನ್ಯಾ| ಅಶೋಕ್‌ ಭೂಷಣ್‌, ನ್ಯಾ| ಸಂಜಯ್‌ ಕಿಶನ್‌, ನ್ಯಾ| ಎಂ.ಆರ್‌. ಷಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಅತಂತ್ರರಾಗಿದ್ದ ವಲಸೆ ಕಾರ್ಮಿಕರ ಸಂಬಂಧ ಅರ್ಜಿಯ ವಿಚಾರಣೆ ನಡೆಸಿತ್ತು.

‘ಇನ್ನೂ ಸಾಕಷ್ಟು ವಲಸೆ ಕಾರ್ಮಿಕರು ವಿವಿಧೆಡೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆಯಾ ರಾಜ್ಯ ಸರಕಾರಗಳು ಅವರನ್ನು ತಕ್ಷಣವೇ ಪತ್ತೆ ಹಚ್ಚಿ, ತವರಿಗೆ ಕಳುಹಿಸಲು ಕ್ರಮ ಕೈಗೊಳ್ಳಬೇಕು. ಪ್ರಯಾಣದ ವೇಳೆ ಉಚಿತ ನೀರು, ಆಹಾರಗಳನ್ನು ಪೂರೈಸಬೇಕು’ ಎಂದು ಹೇಳಿದೆ. ವಲಸೆ ಕಾರ್ಮಿಕರಿಗಾಗಿ 24 ಗಂಟೆಯೊಳಗೆ ಹೆಚ್ಚುವರಿ ರೈಲುಗಳನ್ನು ನಿಯೋಜಿಸಬೇಕು’ ಎಂದು ರೈಲ್ವೆ ಇಲಾಖೆಗೆ ನ್ಯಾಯಾಲಯ ಸೂಚಿಸಿದೆ.

ಕೌಶಲ್ಯ ವಿವರ ಪಟ್ಟಿಮಾಡಿ: ‘ರಾಜ್ಯ ಸರಕಾರಗಳು ತಮ್ಮಲ್ಲಿನ ವಲಸೆ ಕಾರ್ಮಿಕರಿಗೆ ಕೇಂದ್ರ ಸರಕಾರದ ಸೌಲಭ್ಯಗಳನ್ನು ತಲುಪಿಸಬೇಕು. ಕಾರ್ಮಿಕರ ಕೌಶಲಗಳನ್ನು ಪಟ್ಟಿ ಮಾಡಿ, ಕೇಂದ್ರ ಸರಕಾರಕ್ಕೆ ಕಳುಹಿಸಬೇಕು. ಕೌಶಲ್ಯ ಆಧರಿಸಿ ಅವರಿಗೆ ಉದ್ಯೋಗ ನೀಡಲು ಕೇಂದ್ರ ಸರಕಾರಕ್ಕೆ ಇದರಿಂದ ಅನುಕೂಲವಾಗುತ್ತದೆ ಎಂದು ನ್ಯಾಯ ಪೀಠ ಹೇಳಿದೆ.

Advertisement

ಜೊತೆಗೆ, ಲಾಕ್‌ಡೌನ್‌ನ ಈ ಸುದೀರ್ಘ‌ ಅವಧಿಯಲ್ಲಿ ವಲಸೆ ಕಾರ್ಮಿಕರು ಮಾನಸಿಕವಾಗಿ ಸಾಕಷ್ಟು ಕುಗ್ಗಿದ್ದಾರೆ. ತವರು ರಾಜ್ಯಗಳಿಗೆ ತಲುಪಿದ ಕೂಡಲೇ ಅವರಿಗೆ ಕೌನ್ಸೆಲಿಂಗ್‌ ವ್ಯವಸ್ಥೆ ಮಾಡಬೇಕು. ಜು. 8ರೊಳಗೆ ವಲಸೆ ಕಾರ್ಮಿಕ ಯೋಜನೆಗಳು ಮತ್ತು ಉದ್ಯೋಗ ಸೃಷ್ಟಿಯ ಕುರಿತು ಅಫಿಡವಿಟ್‌ ಸಲ್ಲಿಸಬೇಕು’ ಎಂದು ಎಲ್ಲ ರಾಜ್ಯಗಳಿಗೆ ನಿರ್ದೇಶನ ನೀಡಿದೆ.

ರಾಜ್ಯಗಳಿಂದ ಮಾಹಿತಿ ಕೋರಿದ ರೈಲ್ವೆ ಇಲಾಖೆ
ವಲಸೆ ಕಾರ್ಮಿಕರನ್ನು ಊರುಗಳಿಗೆ ತಲುಪಿಸಲು ಎಷ್ಟು ಶ್ರಮಿಕ್‌ ರೈಲುಗಳ ಅಗತ್ಯವಿದೆ ಎಂಬ ವಿವರವನ್ನು ಬುಧವಾರದೊಳಗೆ ಕಳುಹಿಸಿಕೊಡುವಂತೆ ಎಲ್ಲಾ ರಾಜ್ಯಗಳಿಗೂ ರೈಲ್ವೆ ಇಲಾಖೆ ಪತ್ರ ಬರೆದಿದೆ. 15 ದಿನಗಳ ಒಳಗಾಗಿ ಕಾರ್ಮಿಕರನ್ನು ಊರು ತಲುಪಿಸಬೇಕು ಎಂದು ಸುಪ್ರೀಂ ಕೋರ್ಟ್‌ ಆದೇಶ ನೀಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ರೈಲ್ವೆ ಮಂಡಳಿ ಮುಖ್ಯಸ್ಥ ವಿ.ಕೆ. ಯಾದವ್‌ ಅವರು ಈ ಪತ್ರ ಬರೆದಿದ್ದು, ‘ಈಗಾಗಲೇ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಕೋರಿಕೆ ಸಲ್ಲಿಸಿರುವ 171 ರೈಲುಗಳ ಹೊರ ತಾಗಿ, ಹೆಚ್ಚುವರಿ ಎಷ್ಟು ರೈಲುಗಳು ಬೇಕು, ಪ್ರಯಾಣಿಕರ ಸಂಖ್ಯೆ ಎಷ್ಟಿದೆ, ಎಲ್ಲಿಂದ ಎಲ್ಲಿಗೆ ತಲುಪಿಸ ಬೇಕು, ಯಾವ ದಿನಾಂಕದೊಳಗೆ ಈ ಪ್ರಕ್ರಿಯೆ ಪೂರ್ಣಗೊಳ್ಳಬೇಕು ಎಂಬಿತ್ಯಾದಿ ವಿವರಗಳನ್ನು ಬುಧವಾರದೊಳಗೆ ಸಲ್ಲಿಸಿ’ ಎಂದು ಮನವಿ ಮಾಡಿದ್ದಾರೆ. ಮೇ 1ರಿಂದ ಈವರೆಗೆ ರೈಲ್ವೆ ಇಲಾಖೆಯು 4,347 ಶ್ರಮಿಕ್‌ ರೈಲುಗಳ ಮೂಲಕ 60 ಲಕ್ಷ ಕಾರ್ಮಿಕರನ್ನು ಊರುಗಳಿಗೆ ತಲುಪಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next