ನಾನು ಖಾಲಿ ಜೇಬಿನ ಫಕೀರ..ಇದೆಲ್ಲಾ ಗೊತ್ತಿದ್ರೂ ನೀನು ನನ್ನನ್ನು ಮೆಚ್ಚಿಕೊಂಡೆ, ತುಂಬಾ ಹಚ್ಚಿಕೊಂಡೆ ..ಯಾಕೆ? ಪ್ರಶ್ನೆ ಕೇಳಿದ್ದೀನಿ, ಉತ್ತರ ಹೇಳಬೇಕಾದವಳು ನೀನು..ನನಗೆ ಗೊತ್ತು, ನೀನು ಹೇಳ್ಳೋಲ್ಲ..ಮಿಸ್ ಯೂ ಅಂತ ಮೆಸ್ಸೇಜ್ ಕಳ್ಸೋದು ಬಿಟ್ರೆ ಮತ್ತೇನೂ ಗೊತ್ತಿಲ್ಲ ನಿಂಗೆ.
ಸತ್ಯ ಹೇಳಿಬಿಡ್ತೇನೆ. ನೀನು ಬಂಗಾರದ ಹುಡುಗಿ. ಬಣ್ಣ ಮಾತ್ರವಲ್ಲ, ಮನಸ್ಸೂ ಬಂಗಾರದ್ದೇ. ನಿನ್ನ ಮೇಲೆ ಪ್ರೀತಿ ಹುಟ್ಟಲಿಕ್ಕೆ ನಿನ್ನ ಮನಸ್ಸು ಕಾರಣವೋ ಅಥವಾ ನಿಂತಲ್ಲಿಯೇ ಮೈ ಮರೆಯುವಂತೆ ಮಾಡುವ ನಿನ್ನ ಮೈಬಣ್ಣ ಕಾರಣವೋ ಎಂದು ಯೋಚಿಸುತ್ತೇನೆ. ಖಚಿತ ಉತ್ತರ ಸಿಗದೇ ಗೊಂದಲಕ್ಕೆ ಬೀಳುತ್ತೇನೆ.
ಕಾದಂಬರೀ… ನಿನಗೆ ಒಂದು ಪತ್ರ ಬರೀಲಿಕ್ಕೆ ಕುಳಿತವನಿಗೆ ನೋಡು, ಏನೂ ತೋಚುತ್ತಿಲ್ಲ. ನೀನು ನನ್ನೆಡೆಗಿಟ್ಟಿರುವ ಪ್ರೀತಿಗೆ ಈ ಪತ್ರ ತುಂಬ ಚಿಕ್ಕದು ಮಾರಾಯ್ತಿ. ಮೊದಮೊದಲು ತುಂಬಾ ಗೋಳು ಹೊಯ್ದುಕೊಂಡೆ, ಕ್ಷಮೆಯಿರಲಿ. ನಾನಿರುವ ಕಲರ್‌ಗೆ ಅಷ್ಟೊಂದು ಸ್ಕೋಪ್ ತಗೋಬಾರದಿತ್ತು. ಅದಕ್ಕೊಂದು ಕ್ಷಮೆ ಬೇಕು. ನೀನಾಗಿ ಕರೆದಾಗಲೂ ನಾನು ಸಿನಿಮಾಕ್ಕೆ ಬರಲಿಲ್ಲ. ಅದಕ್ಕೂ ಕ್ಷಮೆ ಬೇಕು. ಗುಟ್ಟಾಗಿ ಕುಳಿತು ನಿಂಜೊತೆ ಬೈಟೂ ಟೀ ಕುಡಿಯಲಿಲ್ಲ, ಅದಕ್ಕೂ ಕ್ಷಮೆ ಇರಲಿ. ಇಲ್ಲಿಯವರೆಗೆ ಒಂದು ಪುಟಾಣಿ ಐಸ್ಕ್ರೀಮ್ ತಿನ್ಸಿಲ್ಲ, ನಿನ್ನ ಕೆಲವು ನೋವುಗಳಿಗೆ ನಗು ತುಂಬಲಿಲ್ಲ, ಅದಕ್ಕೂ ಕ್ಷಮೆಯಿರಲಿ. ಕೆಲವು ಸಲ ತುಂಬಾ ಕೆಟ್ಟದಾಗಿ ಬೈದಿದ್ದೀನಿ, ಅದಕ್ಕೊಂದು ದೊಡ್ಡ ಕ್ಷಮೆ ಇರಲಿ. ನಾನು ಹೀಗೆಲ್ಲಾ ಲೂಸ್ ಥರಾ ಆಡಿದ್ರೂ ನೀನು ಬೆಟ್ಟದಷ್ಟು ಪ್ರೀತಿಸುತ್ತಿದ್ದೀಯ ಅಲ್ಲವಾ? ಅದಕ್ಕೇ ನಿನ್ನನ್ನ ಬಂಗಾರದಂಥವಳು ಅಂತ ಕರೆದಿದ್ದು. ಎಷ್ಟೋ ಬಾರಿ, ನಾನೆಲ್ಲಿ ಅವಳೆಲ್ಲಿ? ಈ ಹುಡುಗಿಯ ಪ್ರೀತಿಗೆ ನಾನು ಅರ್ಹನಾ ಅಂತ ಯೋಚಿಸ್ತಿರೋವಾಗಲೇ, ಮಿಸ್ ಯೂ… ಅನ್ನುವ ನಿನ್ನ ಬಂಗಾರದಂಥ ಎಸ್ಸೆಮ್ಮೆಸ್ಸ್ ಬಂದುಬಿಡುತ್ತೆ. ಆ ಕ್ಷಣದಲ್ಲಿ ನಾನು ಎಲ್ಲವನ್ನೂ ಮರೆತು ಮಿಸ್ ಯು ಟೂ… ಅಂತ ಮೆಸೇಜ್ ಕಳಿಸಿಬಿಡುತ್ತೇನೆ.
ಕೇಳಬೇಕು ಅಂದುಕೊಂಡಿದ್ದ ಇಂಪಾರ್ಟೆಂಟ್ ವಿಷಯ ಇದು: ಹುಡುಗಿಯರಿಗೆ ಒಂದಿಷ್ಟು ಆಸೆಗಳು ಇರ್ತಾವಂತೆ, ನಿಜಾನ? ಹುಡುಗ ಸುಂದರವಾಗಿರಬೇಕು, ಎತ್ತರವಾಗಿರಬೇಕು, ಒಳ್ಳೆಯ ಕೆಲ್ಸ ಕೈ ತುಂಬ ಸಂಬಳ… ಇಷ್ಟೆಲ್ಲಾ ಇದ್ರೇನೆ ಲೈಫ್ ಈಸ್ ಬ್ಯೂಟಿಫುಲ್ ಆಗೋಕೆ ಸಾಧ್ಯ ಅಂತೆಲ್ಲಾ ಯೋಚಿಸ್ತಾರಂತೆ, ಹೌದಾ?ಆದರೆ, ನನಗೆ ಏನಂದ್ರೆ ಏನೂ ಅರ್ಹತೆ ಇಲ್ವಲ್ಲ? ಸದ್ಯಕ್ಕೆ ನಾನು ಖಾಲಿ ಜೇಬಿನ ಫಕೀರ..ಇದೆಲ್ಲಾ ಗೊತ್ತಿದ್ರೂ ನೀನು ನನ್ನನ್ನು ಮೆಚ್ಚಿಕೊಂಡೆ, ತುಂಬಾ ಹಚ್ಚಿಕೊಂಡೆ ..ಯಾಕೆ? ಪ್ರಶ್ನೆ ಕೇಳಿದ್ದೀನಿ,
ಉತ್ತರ ಹೇಳಬೇಕಾದವಳು ನೀನು..ನನಗೆ ಗೊತ್ತು, ನೀನು ಹೇಳ್ಳೋಲ್ಲ..ಮಿಸ್ ಯೂ ಅಂತ ಮೆಸ್ಸೇಜ್ ಕಳ್ಸೋದು ಬಿಟ್ರೆ ಮತ್ತೇನೂ ಗೊತ್ತಿಲ್ಲ ನಿಂಗೆ. ಅಲ್ಲ, ನೀನು ಇನ್ನೂ ಎಷ್ಟು ವರ್ಷ ಓದಬೇಕು? ಈ ವರ್ಷ ಲಾಸ್ಟ್ ಸೆಮಿಸ್ಟರ್ ಅಲ್ವ? ಸಾಕು ಮಾರಾಯ್ತಿ, ಸದ್ಯಕ್ಕೆ ನೀನು ಓದಿದ್ದು ಸಾಕು. ಒಂದೆರಡು ದಿನ ಫ್ರೀ ಮಾಡ್ಕೊ. ಅಲ್ಲೆಲ್ಲೋ ಮಲೆನಾಡಲ್ಲಿ ಮಳೆಹಬ್ಬ ಹೆಸರಿನ ಪ್ರೋಗ್ರಾಂ ನಡೆಯುತ್ತಂತೆ. ಹಾಡು, ಕಾಡು, ಮೋಜು, ಮಸ್ತಿ, ಟ್ರೆಕ್ಕಿಂಗ್, ಫೈಟಿಂಗ್, ಸಿಂಗಿಂಗ್, ಡ್ಯಾನ್ಸಿಂಗ್… ಎಲ್ಲಾ ಇದೆಯಂತೆ. ಅಲ್ಲಿಗೆ ಡಿಯರೆಸ್ಟ್ ಫ್ರೆಂಡ್ಸ್ ಥರಾ ಹೋಗಿಬರೋಣ. ಗುರುತು ಪರಿಚಯವಿಲ್ಲದ ಆ ಕಾಡ ಮಧ್ಯೆ ನಿಂತು ನೀನು ನಿನ್ನನ್ನೇ ಮರೆತು- ಈ ಹಸಿರು ಸಿರಿಯಲಿ ಮನಸು ಮರೆಯಲಿ … ಅಂತ ಹಾಡುವಾಗಲೇ ಮಾಯದಂಥ ಮಳೆಗೆ ಸಿಕ್ಕಿ ನವಿಲಂತೆ ಕುಣಿಯುವ ಖುಷಿ ನಮ್ಮದಾಗಲಿ. ಮತ್ತೇನೂ ಇಲ್ಲಪ್ಪ..ಯಾಕೋ ಪತ್ರ ಬರಿಬೇಕು ಅನ್ನಿಸ್ತು, ಅದ್ಕೆà ಮನಸ್ಸಿಗೆ ಏನು ತೋಚಿತೋ ಅದನ್ನ ಒಂದೆರೆಡು ಸಾಲು ಬರೆದೆ. ಓದಿ ನಿನಗಿಷ್ಟ ಆಗಿ ಮಿಸ್ ಯೂ ಅಂತ ಒಂದು ಎಸ್ಸೆಮ್ಮೆಸ್ ಬಂದ್ರು ನನಗಷ್ಟೇ ಸಾಕು.
ಸೋಮಣ್ಣ