Advertisement
ಇವರಿಬ್ಬರೂ ಇಂಗ್ಲೆಂಡ್‌ನಲ್ಲಿ ಆಂಗ್ಲಭಾಷೆಯ ಉನ್ನತ ಅಧ್ಯಯನ ನಡೆಸಿದವರು. ವಿನತಾ ರಾವ್ ಮಂಗಳೂರಿನ ಕೆನರಾ ಹೈಸ್ಕೂಲ್, ಸುರತ್ಕಲ್ ವಿದ್ಯಾದಾಯಿನಿ, ಉಡುಪಿ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಕಟಪಾಡಿ ಎಸ್‌ವಿಎಸ್ ಪ.ಪೂ. ಕಾಲೇಜು, ಮಂಗಳೂರು ಬೆಸೆಂಟ್ ಪದವಿ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದರು.
Related Articles
Advertisement
“ವಿನತಾ ಅವರು ಗಾಂಧಿಯವರಿಗೆ ಚಿನ್ನ ಕೊಟ್ಟದ್ದನ್ನು ನನ್ನಲ್ಲಿ ಹೇಳಿದ್ದರು. ಯಾವಾಗ ಎನ್ನುವುದನ್ನು ನಾನು ಆಸಕ್ತಿಯಿಂದ ಕೇಳಿಕೊಂಡಿರಲಿಲ್ಲ. ಡಾ|ನಾರಾಯಣ ರಾವ್ ಮತ್ತು ವಿನತಾ ಅವರ ದಾಂಪತ್ಯದ ಅನ್ಯೋನ್ಯತೆ ವಿಶಿಷ್ಟವಾದುದು. ಪತ್ನಿಯ ಅನಾರೋಗ್ಯವಿರುವಾಗ ಪತ್ನಿಯನ್ನು ಆ ತೆರನಾಗಿ ಕಂಡುಕೊಂಡ ಪತಿಯನ್ನು ನಾನು ಬೇರೆಲ್ಲೂ ಕಂಡಿಲ್ಲ’ ಎನ್ನುತ್ತಾರೆ ಕಟಪಾಡಿ ಪ.ಪೂ. ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದ ಅವಧಿಯಿಂದ ಕೊನೆಯವರೆಗೂ ವಿನತಾ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ, ಸಂಸ್ಥೆಯಲ್ಲಿ ಸಿಬಂದಿಯಾಗಿದ್ದ ಕೆ.ಪಾಂಡುರಂಗ ಕಿಣಿಯವರು.
“ವಿನತಾ ಅವರು ವಿದೇಶದಲ್ಲಿ ಕಲಿತು, ಉತ್ತಮ ಉದ್ಯೋಗದಲ್ಲಿದ್ದರೂ ಚಿನ್ನವನ್ನು ಧರಿಸಿರಲಿಲ್ಲ. ಇದಕ್ಕೆ ಗಾಂಧೀಜಿಯವರ ಪ್ರೇರಣೆ ಕಾರಣ’ ಎನ್ನುವುದನ್ನು ಅವರ ಸಮೀಪದ ಬಂಧು ಕಾಂಞಂಗಾಡ್‌ನಲ್ಲಿರುವ ಸುಮನ್ ಜಿ. ಪೈ ಅವರು ಬೆಟ್ಟು ಮಾಡುತ್ತಾರೆ.
“ನಾನು 1964-65ರ ಸಮಯದಲ್ಲಿ ಕೆನರಾ ಪ್ರೌಢಶಾಲೆಯಲ್ಲಿ ಕಲಿಯುತ್ತಿದ್ದಾಗ ವಿನತಾ ಶಿಕ್ಷಕಿಯಾಗಿದ್ದರು. ಅವರು ಚಿನ್ನವನ್ನು ಧರಿಸದೆ ಬಿಳಿ ವಸ್ತ್ರದ ಸೀರೆ ಧರಿಸಿ ಬರುತ್ತಿದ್ದರು. ಅವರು ಚಿನ್ನವನ್ನು ಗಾಂಧೀಜಿಯವರಿಗೆ ಕೊಟ್ಟಿದ್ದರು ಎಂದು ಮಕ್ಕಳು ಆಡಿಕೊಳ್ಳುತ್ತಿದ್ದರು’ ಎಂದು ಕಟಪಾಡಿ ಎಸ್‌ವಿಎಸ್ ಪ.ಪೂ. ಕಾಲೇಜಿನಲ್ಲಿ ವಿನತಾ ಅವರ ಸಹೋದ್ಯೋಗಿಯಾಗಿದ್ದ ಜಯಮಾಲಾ ನೆನಪಿಸಿಕೊಳ್ಳುತ್ತಾರೆ.
ಗಾಂಧೀಜಿಯವರಲ್ಲಿ ನನ್ನನ್ನೇ ಚಿನ್ನವೆಂದು ಒಪ್ಪುವ ಗಂಡನ್ನೇ ಮದುವೆಯಾಗುತ್ತೇನೆಂದು ದಶಕಗಳ ಹಿಂದೆ ಹೇಳಿಸಿದ್ದ ಆ ಶಕ್ತಿ, ಪತ್ನಿಯ ಕೊನೆ ಕಾಲದಲ್ಲಿ ಕಂಡುಕೊಂಡ ಗಂಡನ ಆದರ್ಶವನ್ನು ತಾಳೆ ಹಾಕುವಂತೆ ಮಾಡಿತೆ ಎಂಬ ಜಿಜ್ಞಾಸೆ ಮೂಡಿಸುತ್ತದೆ. ಮನೆಯಲ್ಲಿ ಹಿರಿಯರು “ಯಾವಾಗಲೂ ಒಳ್ಳೆಯ ಮಾತುಗಳನ್ನೇ ಹೇಳಬೇಕು. ದೇವತೆಗಳು ಅಸ್ತು ಎನ್ನುತ್ತಾರೆ’ ಎಂದು ಬುದ್ಧಿಮಾತು ಹೇಳುವ ಹಿಂದಿರುವ ತರ್ಕವನ್ನು ಜಾಲಾಡಿಸಿದರೆ ಹೊಸ ಚಿಂತನೆ ಮೂಡುತ್ತದೆ.
ಗಾಂಧೀಜಿ ತಣ್ತೀ ಆಚರಣೆಯಲ್ಲಿ…1927ರಲ್ಲಿ ಮಂಗಳೂರಿಗೆ ಬಂದಾಗ ಗಾಂಧೀಜಿಯವರು “ನೀವೆಲ್ಲರೂ ಸೇರಿ ಖದ್ದರ್ ಬಟ್ಟೆಯನ್ನು ಧರಿಸಿದರೆ ಮಾತ್ರ ಇದು ಯಶಸ್ವಿಯಾಗುತ್ತದೆ. ನಿಮ್ಮಲ್ಲಿ ಬಹುತೇಕರು ವಿದೇಶೀ ಬಟ್ಟೆಯನ್ನು ಧರಿಸಿದ್ದನ್ನು ಕಾಣುತ್ತಿದ್ದೇನೆ. ನಮ್ಮ ದೇಶ ಬೇಕಾದಷ್ಟು ಹತ್ತಿ ಮತ್ತು ಆಹಾರ ಉತ್ಪನ್ನವನ್ನು ಉತ್ಪಾದಿಸುತ್ತದೆ. ನಾವೆಲ್ಲ ದೇಶವಾಸಿಗಳು ಆಮದಿತ ಆಹಾರ ಸಾಮಗ್ರಿಗಳನ್ನೇ ಉಂಡರೆ ನಮ್ಮ ದೇಶದ ಸ್ಥಿತಿ ಏನಾಗಬಹುದು? ಇದೇ ಸ್ಥಿತಿ ವಿದೇಶಿ ಬಟ್ಟೆ ಧರಿಸಿದರೂ ಆಗುತ್ತದೆ’ ಎಂದು ಎಚ್ಚರಿಸಿದ್ದರು. “ನಮ್ಮೆಲ್ಲ ಸೋದರಿಯರು ಸೀತಾಮಾತೆಯ ಮಾದರಿಯಂತೆ. ನಮ್ಮ ಸೋದರಿಯರಿಗೆ ಸಹಜವಾದ ಸೌಂದರ್ಯ ಮುಖ್ಯವೇ ವಿನಾ ಆಭರಣದಿಂದ ಸೌಂದರ್ಯ ವೃದ್ಧಿ ಅಲ್ಲ. ನಮ್ಮ ಬಹುಮಂದಿ ಸೋದರ ಸೋದರಿಯರು ಹಸಿವಿನಿಂದ ಬಳಲುತ್ತಿರುವಾಗ ನಾವು ಚಿನ್ನಾಭರಣಭೂಷಿತರಾಗಿರುವುದು ಸರಿಯಲ್ಲ. 100 ರೂ. ಬೆಲೆ ಬಾಳುವ ಆಭರಣವನ್ನು ಕೊಟ್ಟರೆ ಅದರಿಂದ ಒಂದು ದಿನಕ್ಕೆ 1,600 ಮಂದಿಯ ಹಸಿವನ್ನು ಇಂಗಿಸಬಹುದು. ನನಗೆ ಅಪಾರ ಸಂಖ್ಯೆಯ ಜನರು ಇದಕ್ಕಾಗಿಯೇ ಚಿನ್ನವನ್ನು ಕೊಡುತ್ತಿದ್ದು ನನ್ನ ಕೆಲಸವನ್ನು ಹಗುರ ಮಾಡುತ್ತಿದ್ದಾರೆ’ ಎಂಬ ಅಭಿಪ್ರಾಯವನ್ನು ಗಾಂಧೀಜಿ ವ್ಯಕ್ತಪಡಿಸಿದ್ದರು. ಈ ಎರಡೂ ಆಚರಣೆಗಳನ್ನು ವಿನತಾ ರಾವ್ ಜೀವನದಲ್ಲಿ ಅಳವಡಿಸಿಕೊಂಡರು. ಜೀವಿತವನ್ನೇ ಮಾದರಿಯಾಗಿ ರೂಪಿಸಿದ ಡಾ|ನಾರಾಯಣ ರಾವ್- ವಿನತಾ ದಂಪತಿ 1996ರಲ್ಲಿ ನಿಧನ ಹೊಂದಿದರು. ಮಟಪಾಡಿ ಕುಮಾರಸ್ವಾಮಿ