ವಾಷಿಂಗ್ಟನ್: ಅಮೆರಿಕದ ಕ್ಯಾಪಿಟಲ್ ಹಿಲ್‌ನಲ್ಲಿ ನಡೆದ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದಲ್ಲಿ ವಾಗ್ಧಂಡನೆಯ ಭೀತಿ ಎದುರಿಸುತ್ತಿದ್ದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರಾಳರಾಗಿದ್ದಾರೆ. ನಿರೀಕ್ಷೆಯಂತೆಯೇ ಟ್ರಂಪ್ ಮಹಾಭಿಯೋಗಕ್ಕೆ ಸೆನೆಟ್‌ನಲ್ಲಿ ಅಗತ್ಯವಿದ್ದ ಮೂರನೇ ಎರಡರಷ್ಟು ಬಹುಮತ ಸಿಗದ ಕಾರಣ, ಡೆಮಾಕ್ರಾಟ್ ಸಂಸದರ ಪ್ರಯತ್ನ ವಿಫಲವಾಗಿ ಟ್ರಂಪ್ ದೋಷಮುಕ್ತರಾಗಿದ್ದಾರೆ.
ವಿಶೇಷವೆಂದರೆ, ಅಮೆರಿಕದಲ್ಲಿ ಎರಡು ಬಾರಿ ವಾಗ್ಧಂಡನೆಯ ವಿಚಾರಣೆಗೆ ಒಳಗಾದ ಏಕೈಕ ಅಧ್ಯಕ್ಷ ಟ್ರಂಪ್ ಆಗಿದ್ದು, ಎರಡು ಬಾರಿಯೂ ಅವರು ಖುಲಾಸೆಗೊಂಡಿದ್ದಾರೆ. ದೋಷಮುಕ್ತರಾಗುತ್ತಿದ್ದಂತೆ ಪ್ರತಿಕ್ರಿಯಿಸಿರುವ ಟ್ರಂಪ್, “ಅಮೆರಿಕವನ್ನು ಮತ್ತೆ ಶ್ರೇಷ್ಠಗೊಳಿಸುವ ನಮ್ಮ ಐತಿಹಾಸಿಕ, ದೇಶಭಕ್ತಿಯ ಹಾಗೂ ಸುಂದರ ಚಳವಳಿಯು ಈಗ ತಾನೇ ಆರಂಭವಾಗಿದೆ’ ಎಂದಿದ್ದಾರೆ.
ಬಹುಮತಕ್ಕೆ 10 ಮತಗಳ ಕೊರತೆ:
ಇತಿಹಾಸದಲ್ಲೇ ಮೊದಲ ಬಾರಿಗೆ ಟ್ರಂಪ್ ಅವರ ರಿಪಬ್ಲಿಕನ್ ಪಕ್ಷದ 7 ಸಂಸದರು ಕೂಡ ಡೆಮಾಕ್ರಾಟ್‌ಗಳೊಂದಿಗೆ ಕೈಜೋಡಿಸಿ ಟ್ರಂಪ್ ವಿರುದ್ಧದ ವಾಗ್ಧಂಡನೆಗೆ ಬೆಂಬಲ ಸೂಚಿಸಿದ್ದರು. ಅದರಂತೆ, ಭಾನುವಾರ ನಡೆದ ಮತದಾನದಲ್ಲಿ ಟ್ರಂಪ್ ವಿರುದ್ಧ 57 ಮತಗಳು ಬಿದ್ದರೆ, ಅವರ ಪರ 43 ಮತಗಳು ಬಿದ್ದವು. ಆದರೆ, ಸೆನೆಟ್‌ನಲ್ಲಿ ರಿಪಬ್ಲಿಕನ್ ಸಂಸದರ ಸಂಖ್ಯೆ ಹೆಚ್ಚಿದ್ದ ಕಾರಣ ಡೆಮಾಕ್ರಾಟ್‌ಗಳು ಸೋಲಬೇಕಾಯಿತು. ಟ್ರಂಪ್‌ರನ್ನು ದೋಷಿ ಎಂದು ಘೋಷಿಸಬೇಕೆಂದರೆ, 67 ಮತಗಳು ಲಭ್ಯವಾಗಬೇಕಿತ್ತು. ಆದರೆ, ಮೂರನೇ ಎರಡರಷ್ಟು ಬಹುಮತಕ್ಕೆ ಕೇವಲ 10 ಮತಗಳ ಕೊರತೆ ಉಂಟಾದ ಕಾರಣ, ಮಹಾಭಿಯೋಗಕ್ಕೆ ಸೋಲಾಗಿ ಟ್ರಂಪ್ ಖುಲಾಸೆಗೊಂಡರು.
ಒಂದು ವೇಳೆ, ಟ್ರಂಪ್ ದೋಷಿ ಎಂದು ಸಾಬೀತಾಗಿದ್ದರೆ, ಮುಂದೆಂದೂ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸದಂತೆ ನಿಷೇಧ ಹೇರುವ ಅಧಿಕಾರ ಸೆನೆಟ್‌ಗೆ ಇರುತ್ತಿತ್ತು. ಆದರೆ, ಅವರು ಖುಲಾಸೆಗೊಂಡ ಕಾರಣ ಅಧ್ಯಕ್ಷ ಸ್ಥಾನಕ್ಕೇರುವ ಟ್ರಂಪ್ ಆಸೆ ಜೀವಂತವಾಗಿ ಉಳಿದಂತಾಗಿದೆ.
ಆಂದೋಲನ ಈಗಷ್ಟೇ ಶುರುವಾಗಿದೆ: ಟ್ರಂಪ್
ಅಮೆರಿಕವನ್ನು ಮತ್ತೆ ಶ್ರೇಷ್ಠಗೊಳಿಸುವ ಆಂದೋಲನ ಈಗ ಶುರುವಾಗಿದೆ. ಮುಂಬರುವ ದಿನಗಳಲ್ಲಿ ನನಗೆ ನಿಮ್ಮೊಂದಿಗೆ ಬಹಳಷ್ಟು ವಿಚಾರ ಹಂಚಿಕೊಳ್ಳಬೇಕಿದೆ. ಅಮೆರಿಕವನ್ನು ಮತ್ತಷ್ಟು ಉತ್ಕೃಷ್ಟಗೊಳಿಸುವ ಗುರಿ ಸಾಧಿಸಲು ನಮ್ಮ ವಿಶೇಷ ಪಯಣ ಮುಂದುವರಿಯಲಿ. ನಮ್ಮ ಮುಂದೆ ಸಾಕಷ್ಟು ಕೆಲಸಗಳಿವೆ. ಅಮೆರಿಕದ ಭವಿಷ್ಯವನ್ನು ಉಜ್ವಲಗೊಳಿಸುವಂತಹ ಹಲವು ಧ್ಯೇಯೋದ್ದೇಶಗಳೊಂದಿಗೆ ಸದ್ಯದಲ್ಲೇ ನಾನು ನಿಮ್ಮ ಮುಂದೆ ಬರುತ್ತೇನೆ ಎಂದು ಟ್ರಂಪ್ ಹೇಳಿದ್ದಾರೆ.