ಗುವಾಹಟಿ/ಮುಂಬಯಿ: ಶಿವಸೇನಾ ಶಾಸಕರ ಬಂಡಾಯದಿಂದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ರಾಜಕೀಯ ಬಿಕ್ಕಟ್ಟು ಎದುರಿಸುವಂತಾಗಿದ್ದು, ಠಾಕ್ರೆ ರಾಜೀನಾಮೆ ನೀಡುವ ಮೂಲಕ ವಿಧಾನಸಭೆಯನ್ನು ವಿಸರ್ಜಿಸುವ ಬಗ್ಗೆ ಪಕ್ಷದ ಮುಖಂಡ ಸಂಜಯ್ ರಾವತ್ ಟ್ವೀಟ್ ಮಾಡುವ ಮೂಲಕ ಸುಳಿವು ನೀಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ವಾದ್ಯದವರಿಗೆ ಹಣ ಕೊಡುವ ವಿಚಾರದಲ್ಲಿ ವಿವಾದ…ವಿವಾಹ ಮಂಟಪದಿಂದ ಹೊರ ನಡೆದ ವರ!
ರಾಜಕೀಯ ಬಿಕ್ಕಟ್ಟಿನ ಕೇಂದ್ರ ಬಿಂದುವಾಗಿರುವ ಶಿವಸೇನಾದ ಏಕನಾಥ ಶಿಂಧೆ ತಮಗೆ 46 ಶಾಸಕರ ಬೆಂಬಲ ಇರುವುದಾಗಿ ಹೇಳಿಕೆ ನೀಡಿರುವ ನಂತರ ಈ ಬೆಳವಣಿಗೆ ನಡೆದಿದೆ. ಸದ್ಯದ ರಾಜಕೀಯ ಬಿಕ್ಕಟ್ಟಿನಲ್ಲಿ ಮಹಾರಾಷ್ಟ್ರ ವಿಧಾನಸಭೆ ವಿಸರ್ಜನೆಯತ್ತ ಸಾಗುತ್ತಿದೆ ಎಂದು ರಾವತ್ ಮರಾಠಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಇಂದು ಬೆಳಗ್ಗೆ ಎನ್ ಡಿಟಿವಿಗೆ ನೀಡಿರುವ ಸಂದರ್ಶನದಲ್ಲಿ ಶಿಂಧೆ, ಶಿವಸೇನಾದ 40 ಹಾಗೂ ಪಕ್ಷೇತರ ಆರು ಮಂದಿ ಸೇರಿ ಒಟ್ಟು 46 ಶಾಸಕರ ಬೆಂಬಲ ಇದ್ದಿರುವುದಾಗಿ ತಿಳಿಸಿದ್ದರು. ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹತೆಯನ್ನು ಎದುರಿಸದೇ ಪಕ್ಷವನ್ನು ತೊರೆಯಲು ಏಕನಾಥ ಶಿಂಧೆಗೆ 37 ಶಾಸಕರ ಬೆಂಬಲದ ಅಗತ್ಯವಿದೆ.
ಮಂಗಳವಾರ ಸಂಜೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಬಂಡಾಯ ಶಾಸಕರ ಜೊತೆ ಹತ್ತು ನಿಮಿಷಗಳ ಕಾಲ ಮಾತುಕತೆ ನಡೆಸಿದ್ದರು. ಮಧ್ಯರಾತ್ರಿ ನಂತರ ಬಂಡಾಯ ಶಾಸಕರು ಗುಜರಾತ್ ನ ಸೂರತ್ ನಿಂದ ವಿಮಾನದಲ್ಲಿ ಹೊರಟು ಅಸ್ಸಾಂಗೆ ಆಗಮಿಸಿದ್ದರು.
ಅಸ್ಸಾಂಗೆ ಆಗಮಿಸಿದ್ದ ಶಿವಸೇನಾದ ಬಂಡಾಯ ಶಾಸಕರನ್ನು ಬಿಜೆಪಿ ಮುಖಂಡರು ಸ್ವಾಗತಿಸಿದ್ದು, ಪಂಚತಾರಾ ಹೋಟೆಲ್ ನಲ್ಲಿ ವಾಸ್ತವ್ಯದ ವ್ಯವಸ್ಥೆ ಮಾಡಿದ್ದರು. ಅಸ್ಸಾಂನ ಐಶಾರಾಮಿ ಹೋಟೆಲ್ ನಲ್ಲಿ 50ಕ್ಕೂ ಹೆಚ್ಚು ಕೋಣೆಗಳನ್ನು ಕಾಯ್ದಿರಿಸಲಾಗಿದ್ದು, ಇಂದು ಇನ್ನಷ್ಟು ಶಿವಸೇನಾ ಶಾಸಕರು ಆಗಮಿಸುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.