Advertisement

ಕೈ ತೊಳೆಯುವಿಕೆಯ ಮಹತ್ವದ ಹರಿಕಾರ -ಸೆಮ್ಮಲ್ವೀಸ್

07:25 PM May 02, 2020 | Sriram |

ಕೋವಿಡ್-19 ಸೋಂಕು ಹರಡದಂತೆ ನಿಯಂತ್ರಿಸುವುದಕ್ಕೆ ವೈಯಕ್ತಿಕ ಸ್ವತ್ಛತೆಯ ಕ್ರಮಗಳಲ್ಲಿ ಒಂದಾಗಿರುವ ಆಗಾಗ ಕೈತೊಳೆಯುವಿಕೆ ಪ್ರಮುಖ ಅಸ್ತ್ರ ಎಂಬುದು ಸಾಬೀತಾಗಿದೆ. ಆದರೆ ಬ್ಯಾಕ್ಟೀರಿಯಾಗಳು, ಅದಕ್ಕಿಂತಲೂ ಸೂಕ್ಷ್ಮ ಜೀವಿಗಳಾದ ವೈರಾಣುಗಳ ಸಂಶೋಧನೆ ಆಗುವುದಕ್ಕೆ ನೂರು ವರ್ಷಗಳ ಮುನ್ನವೇ ಕೈತೊಳೆದುಕೊಳ್ಳುವುದು ರೋಗ ಪ್ರಸರಣ ನಡೆಯದಂತೆ ತಡೆಯುವ ಮಹತ್ವದ ಕ್ರಮ ಎಂಬುದನ್ನು ತನ್ನ ಸೂಕ್ಷ್ಮ ಗಮನಿಸುವಿಕೆಯಿಂದ ತಿಳಿದುಕೊಂಡು ಆಚರಣೆಗೆ ತಂದಾತ ಇಗ್ನಾಸ್‌ ಸೆಮ್ಮಲ್ವೀಸ್‌. ಆದರೆ ಆ ಕಾಲಕ್ಕೆ ಇದರ ಮಹತ್ವವನ್ನು ತಿಳಿದುಕೊಳ್ಳಲು ಅಸಮರ್ಥವಾದ ವೈದ್ಯಲೋಕ ಆತನನ್ನು ಹುಚ್ಚನೆಂದು ಕರೆಯಿತು!

Advertisement

ಕೋವಿಡ್-19 ವೈರಸ್‌ನ ದಾಂಧಲೆಯಿಂದ ಕಂಗೆಟ್ಟಿರುವ ಜಗತ್ತು ಇಂದು ದೈಹಿಕ ನೈರ್ಮಲ್ಯದ ಬಗ್ಗೆ ಅನಿವಾರ್ಯವಾಗಿ ಎಚ್ಚೆತ್ತುಕೊಂಡಿದೆ. ಅದರಲ್ಲೂ ಕೈ ತೊಳೆಯುವಿಕೆಯಂತೂ ಕೋವಿಡ್-19 ಮಹಾಮಾರಿಯ ವಿರುದ್ಧದ ಹೋರಾಟದಲ್ಲಿ ಅತ್ಯಂತ ಪ್ರಮುಖ ಅಸ್ತ್ರವೆಂದೇ ಪರಿಗಣಿತವಾಗಿದೆ. ಇಂದು ಕೈ ತೊಳೆಯುವುದರ ಮಹತ್ವವನ್ನು ಯಾರೂ ಅಲ್ಲಗಳೆಯಲಾರರು. ಆದರೆ ಇಂದಿಗೆ ಸುಮಾರು 175 ವರ್ಷಗಳ ಹಿಂದೆ, ತಾನು ಕೆಲಸ ಮಾಡುತ್ತಿದ್ದ ಆಸ್ಪತ್ರೆಯ ವೈದ್ಯ ಸಿಬಂದಿ ಬಾಣಂತಿಯರ ಶುಶ್ರೂಷೆ ಮಾಡುವ ಮೊದಲು ಕೈ ತೊಳೆಯಲೇಬೇಕೆಂದು ಕಟ್ಟುನಿಟ್ಟಿನ ನಿಯಮ ಜಾರಿಗೆ ತಂದ ಪ್ರಸೂತಿ ತಜ್ಞನಾದ ಇಗ್ನಾಸ್‌ ಸೆಮ್ಮಲ್ವೀಸ್ ‌ನನ್ನು ಕೊನೆಗೆ ಹುಚ್ಚನೆಂದು ಮೂಲೆಗುಂಪು ಮಾಡಲಾಯಿತೆಂದರೆ ನಂಬುವಿರಾ?

ಇಗ್ನಾಸ್‌ ಸೆಮ್ಮಲ್ವೀಸ್‌ 1818ರಲ್ಲಿ ಈಗಿನ ಹಂಗೇರಿ ದೇಶದ ಬುಡಾಪೆಸ್ಟ್‌ನಲ್ಲಿ ಜನ್ಮ ತಾಳಿದ. ಲಾಯರ್‌ ಆಗಬೇಕೆಂದು ಹಂಬಲಿಸಿದ್ದ ಸೆಮ್ಮಲ್ವೀಸ್‌ ವೈದ್ಯರಂಗಕ್ಕೆ ಬರುವಂತಾಗಿ ಮುಂದಕ್ಕೆ ಪ್ರಸೂತಿ ಶಾಸ್ತ್ರದಲ್ಲಿ ತರಬೇತಿ ಪಡೆದ. ಅನಂತರ ವಿಯೆನ್ನಾ ನಗರದ (ಇಂದಿನ ಆಸ್ಟ್ರಿಯಾ ದೇಶದಲ್ಲಿದೆ) ಪ್ರತಿಷ್ಠಿತ ಆಸ್ಪತ್ರೆಯ ಪ್ರಸೂತಿಶಾಸ್ತ್ರ ವಿಭಾಗಕ್ಕೆ ಸೇರಿದ. ಅದು 19ನೇ ಶತಮಾನದ ಆದಿಕಾಲ. ಸೋಂಕು ಉಂಟುಮಾಡುವ ಬ್ಯಾಕ್ಟೀರಿಯಾ, ವೈರಸ್‌ ಇತ್ಯಾದಿಗಳ ಬಗ್ಗೆ ಆಗಿನ್ನೂ ಯಾರಿಗೂ ತಿಳಿದಿರಲಿಲ್ಲ . ಆ್ಯಂಟಿಬಯಾಟಿಕ್‌ ಔಷಧಗಳ ಆವಿಷ್ಕಾರವಾಗಲು ಇನ್ನೂ 100 ವರ್ಷ ಕಾಯಬೇಕಿತ್ತು. ರೋಗಿಗಳಿಗೆ ಉಂಟಾಗುವ ಕಾಯಿಲೆ, ಜ್ವರ ಇತ್ಯಾದಿ ಅವರದೇ ದೇಹದಲ್ಲಿ ಉತ್ಪನ್ನವಾಗುವಂಥವು ಎಂದು “ತಜ್ಞ’ ವೈದ್ಯರೂ ನಂಬಿದ್ದ ಕಾಲವದು.

ಗಮನ ಸೆಳೆಯಿತು
ಕುತೂಹಲಕಾರಿ ವಿದ್ಯಮಾನ
ಆಸ್ಪತ್ರೆಯಲ್ಲಿ ಕೆಲಸ ಮಾಡಲಾರಂಭಿಸಿದ ತರುಣ ಸೆಮ್ಮಲ್ವೀಸ್‌ ಬಾಣಂತಿಯರ ಶುಶ್ರೂಷ ವಿಭಾಗದಲ್ಲಿ ಕುತೂಹಲಕಾರಿ ವಿದ್ಯಮಾನವೊಂದನ್ನು ಗಮನಿಸಿದ. ಅಲ್ಲಿಯ ಆಸ್ಪತ್ರೆಯಲ್ಲಿ ಬಾಣಂತಿಯರ ಆರೈಕೆಗೆಂದು 2 ಪ್ರತ್ಯೇಕ ವಾರ್ಡ್‌ಗಳು ಇಧªವು. ಒಂದು ವಾರ್ಡ್‌ನಲ್ಲಿ ಬಾಣಂತಿಯರ ಶುಶ್ರೂಷೆಯನ್ನು ಸ್ವತಃ ವೈದ್ಯರೇ ಕೈಗೊಳ್ಳುತ್ತಿದ್ದರೆ ಇನ್ನೊಂದು ವಾರ್ಡ್‌ನಲ್ಲಿ ಅದೇ ಶುಶ್ರೂಷೆಯನ್ನು ದಾದಿಯರು ನಡೆಸುತ್ತಿದ್ದರು. ಆಗಿನ ಕಾಲದಲ್ಲಿ ಬಾಣಂತಿಯರಿಗೆ ಸೋಂಕು ಜ್ವರ ಬಂದು ಸಾವಿಗೀಡಾಗುವುದು ಸಾಮಾನ್ಯ ಸಂಗತಿಯಾಗಿತ್ತು. ಆದರೆ ಸೆಮ್ಮಲ್ವೀಸ್ ನ ಗಮನ ಸೆಳೆದದ್ದು ದಾದಿಯರ ಶುಶ್ರೂಷೆಯಡಿ ಇದ್ದ ವಾರ್ಡಿಗಿಂತ ವೈದ್ಯರ ಶುಶ್ರೂಷೆಯಡಿ ಇದ್ದ ವಾರ್ಡ್‌ನಲ್ಲಿ ಬಾಣಂತಿಯರ ಮರಣದ ಪ್ರಮಾಣ ಹೆಚ್ಚಾಗಿರುವುದು. ಇದು ಹೇಗೆ ಸಾಧ್ಯ ಎಂದು ಸೆಮ್ಮಲ್ವೀಸ್‌ ಚಿಂತಿಸಲಾರಂಭಿಸಿದ. ಆಸ್ಪತ್ರೆಯ ಆಡಳಿತವಂತೂ “ಅದು ಹಾಗೆಯೇ’ ಎಂದು ಒಪ್ಪಿಕೊಂಡುಬಿಟ್ಟಿತ್ತು. ಇತರ ಹಿರಿಯ ವೈದ್ಯರೂ ಜ್ವರ ವ್ಯಕ್ತಿಯ ಕರುಳಿನ ಉರಿಯೂತದಿಂದ ಬರುತ್ತದೆ ಎಂದು ದೃಢವಾಗಿ ನಂಬಿದ್ದರಿಂದ ಹೊರಗಿನಿಂದ ಬರುವ ಕಾರಣ ಇರಬಹುದೆಂದು ಸಂಶಯಿಸಲೂ ಆಸ್ಪದವಿರಲಿಲ್ಲ .

ಹೀಗಿರುತ್ತಾ ಒಂದು ಸಲ ಒಂದು ಘಟನಾವಳಿ ಮತ್ತೆ ಸೆಮ್ಮಲ್ವೀಸ್‌ ನನ್ನು ಯೋಚಿಸುವಂತೆ ಮಾಡಿತು. ಅದೆಂದರೆ, ರೋಗಿ ಮರಣಿಸಿದ ಅನಂತರ ನಿಯಮಾವಳಿಯಂತೆ ನಡೆಯುವ ಶವ ಪರೀಕ್ಷೆಯಲ್ಲಿ ಭಾಗವಹಿಸಿದ ವೈದ್ಯರು ಅಲ್ಲಿಂದ ಸೀದಾ ಬಾಣಂತಿಯರ ವಾರ್ಡ್‌ಗೆ ಹೋಗಿ ಚಿಕಿತ್ಸೆಯಲ್ಲಿ ನಿರತವಾಗುತ್ತಿದ್ದುದು. ಶವ ಪರೀಕ್ಷೆಯನ್ನು ಸ್ವತಃ ತಮ್ಮ ಕೈಗಳಿಂದಲೇ ನಡೆಸಿದ ವೈದ್ಯರೂ ಕೈ ತೊಳೆಯುವ ಗೋಜಿಗೆ ಹೋಗುತ್ತಿರಲಿಲ್ಲ ಎಂಬ ಅಂಶ ಸೆಮ್ಮಲ್ವೀಸ್ ನ ಗಮನ ಸೆಳೆಯಿತು. ಶವದ ಮೇಲಣ ಯಾವುದೋ ಸೋಂಕುಕಾರಕ ವಸ್ತು ವೈದ್ಯರ ಕೈಗಂಟಿಕೊಂಡು ಬಾಣಂತಿಯರಿಗೆ ವರ್ಗಾವಣೆಯಾಗುತ್ತಿದೆ ಎಂದು ತರ್ಕಿಸಿದ ಸೆಮ್ಮಲ್ವೀಸ್. ಶವ ಪರೀಕ್ಷೆಯಲ್ಲಿ ಭಾಗಿಯಾಗಲು ಅವಕಾಶವಿರದ ದಾದಿಯರು ಶುಶ್ರೂಷೆ ನಡೆಸುತ್ತಿದ್ದ ವಾರ್ಡ್‌ನಲ್ಲಿ ಜ್ವರ ಹಾಗೂ ಮರಣದ ಪ್ರಮಾಣ ಕಡಿಮೆ ಇದ್ದದ್ದು ಸೆಮ್ಮಲ್ವೀಸ್ ನ ತರ್ಕಕ್ಕೆ ಪುಷ್ಟಿ ಕೊಟ್ಟಿತ್ತು.

Advertisement

ಕೈತೊಳೆಯುವಿಕೆ ಜಾರಿ
ವೈದ್ಯರ ವಾರ್ಡ್‌ನಲ್ಲಿ ಹೆಚ್ಚಿನ ಮರಣ ಪ್ರಮಾಣಕ್ಕೆ ವೈದ್ಯರು ಶವ ಪರೀಕ್ಷೆಯ ಅನಂತರ ಕೈ ತೊಳೆಯದಿರುವುದೇ ಕಾರಣ ಎಂಬ ದೃಢ ನಿಶ್ಚಯಕ್ಕೆ ಬಂದ ಸೆಮ್ಮಲ್ವೀಸ್‌ ತಾನು ಕೆಲಸ ಮಾಡುತ್ತಿದ್ದ ವಾರ್ಡ್‌ನಲ್ಲಿ ವೈದ್ಯರಾದಿಯಾಗಿ ಎಲ್ಲರೂ ಕ್ಲೋರಿನ್‌ಯುಕ್ತ ದ್ರಾವಣದಲ್ಲಿ ಕೈ ತೊಳೆಯದೆ ಬಾಣಂತಿಯರ ಶುಶ್ರೂಷೆ ಮಾಡುವಂತಿಲ್ಲ ಎಂಬ ನಿಯಮಾವಳಿ ಜಾರಿಗೆ ತಂದ. ಕ್ಲೋರಿನ್‌ಯುಕ್ತ ದ್ರಾವಣದಿಂದ ಶವಪರೀಕ್ಷೆಯಿಂದ ಕೈಗಂಟಿದ ವಾಸನೆ ಹೋಗುತ್ತಿದ್ದುದರಿಂದ ಸೋಂಕು ಉಂಟುಮಾಡುತ್ತಿದ್ದ ವಸ್ತು (ಆಗಿನ್ನೂ ಬ್ಯಾಕ್ಟೀರಿಯಾಗಳ ಬಗ್ಗೆ ಯಾರಿಗೂ ತಿಳಿದಿರಲಿಲ್ಲ ಎಂಬುದನ್ನು ಗಮನದಲ್ಲಿಡಬೇಕು) ಕೂಡ ಹೋಗಬಹುದೆಂದು ಆತನ ತರ್ಕವಾಗಿತ್ತು. ಸೆಮ್ಮಲ್ವೀಸ್ ನು ವಿಧಿಸಿದಂತೆ ಶುಶ್ರೂಷಕರು ಕೈ ತೊಳೆಯಲು ಆರಂಭಿಸಿದ್ದೇ ತಡ, ಪವಾಡವೆಂಬಂತೆ ಬಾಣಂತಿಯರ ಮರಣ ಪ್ರಮಾಣ ಇಳಿಯತೊಡಗಿ ಕೆಲವೇ ತಿಂಗಳುಗಳಲ್ಲಿ ಶೂನ್ಯಕ್ಕೆ ಇಳಿಯಿತು!

ದುರದೃಷ್ಟವೆಂದರೆ ಇಷ್ಟೊಂದು ಸತ್ಪರಿಣಾಮ ಉಂಟಾದರೂ ಸೆಮ್ಮಲ್ವೀಸ್  ನ ಒತ್ತಾಯಕ್ಕೆ ಕಟ್ಟುಬಿದ್ದು ಎಲ್ಲರೂ ಕೈತೊಳೆಯುತ್ತಿದ್ದರೇ ವಿನಾ ಮನಃಪೂರ್ವಕವಾಗಿ ಅಲ್ಲ. ಕೊನೆಕೊನೆಗೆ ಆಸ್ಪತ್ರೆಯ ಸಿಬಂದಿ ಸೆಮ್ಮಲ್ವೀಸ್ ನನ್ನು ನೇರವಾಗಿಯೇ ವಿರೋಧಿಸಲಾರಂಭಿಸಿದರು.

ಶವಪರೀಕ್ಷೆಯಿಂದ ವೈದ್ಯರ ಕೈಗಂಟಿಕೊಳ್ಳುತ್ತಿದ್ದ ಹಾನಿಕಾರಕ ವಸ್ತು ಯಾವುದು ಮತ್ತು ಅದು ಹೇಗೆ ಜ್ವರವನ್ನು ಬಾಣಂತಿಯರಲ್ಲಿ ಉಂಟು ಮಾಡುತ್ತದೆ ಎಂಬುದನ್ನು ಸ್ಪಷ್ಟವಾಗಿ ವಿವರಿಸಲು ಸೆಮ್ಮಲ್ವೀಸ್‌ ಅಸಮರ್ಥನಾದ್ದರಿಂದ ಅವನು ವಿಧಿಸಿದ ನಿಯಮ ವೈಜ್ಞಾನಿಕ ಎಂದು ಇತರ ಹಿರಿಯ ವೈದ್ಯರು ಒಪ್ಪಲು ಸುತಾರಾಂ ತಯಾರಿರಲಿಲ್ಲ! ಆದ್ದರಿಂದಲೇ ಅವರೆಲ್ಲರೂ ಸೇರಿ ಸೆಮ್ಮಲ್ವೀಸ್ ನನ್ನು ಅವಹೇಳನ ಮಾಡಿ ಆತ ಆಸ್ಪತ್ರೆ ಬಿಡುವಂತೆ ಮಾಡಿಬಿಟ್ಟರು!

ಹುಚ್ಚನೆಂದು ಕರೆದರು
ವೈದ್ಯಲೋಕದ ಅಜ್ಞಾನ ಆಗಿನ ಕಾಲದಲ್ಲಿ ಎಷ್ಟಿತ್ತೆಂದರೆ ಅವರು ಸೆಮ್ಮಲ್ವೀಸ್ ನನ್ನು ಆಸ್ಪತ್ರೆಯಿಂದ ಓಡಿಸಿದಷ್ಟರಿಂದಲೇ ತೃಪ್ತರಾಗಲಿಲ್ಲ. ಯುರೋಪ್‌ನಾದ್ಯಂತ ವೈದ್ಯಕೀಯ ಸಮ್ಮೇಳನಗಳಲ್ಲಿ ಆತನನ್ನು ತೆಗಳಲಾಯಿತು. ಇದೆಲ್ಲದರ ಪರಿಣಾಮವಾಗಿ ಖನ್ನತೆಗೆ ಒಳಗಾದ ಸೆಮ್ಮಲ್ವೀಸ್‌ ತಾನೂ ವೈದ್ಯಲೋಕವನ್ನು ತೆಗಳಲು ಆರಂಭಿಸಿದ. ತನ್ನ ಮಾತನ್ನು ಒಪ್ಪದೆ ಬಾಣಂತಿಯರ ಸಾವಿಗೆ ಕಾರಣರಾಗುತಿದ್ದ ಹಿರಿಯ ವೈದ್ಯರನ್ನು “ಕೊಲೆಗಡುಕರು’ ಎಂದೂ ಒಮ್ಮೆ ಸೆಮ್ಮಲ್ವೀಸ್‌ ಕರೆದಿದ್ದ!

ನೂರಾರು ಸಂಖ್ಯೆಯಲ್ಲಿ ಆಗುತ್ತಿದ್ದ ಬಾಣಂತಿಯರ ಸಾವನ್ನು ಗಮನಿಸಿ, ವೈದ್ಯರ ಕೊಳಕು ಕೈಗಳೇ ಅದಕ್ಕೆ ಮೂಲ ಕಾರಣವೆಂದು ತನ್ನ ಕುಶಾಗ್ರಮತಿಯಿಂದ ಚಿಕಿತ್ಸೆಗೆ ತೊಡುವ ಮುನ್ನ “ಕೈ ತೊಳೆಯ’ಬೇಕೆಂಬ ಸರಳ ಪರಿಹಾರ ಸೂಚಿಸಿದ ಧೀಮಂತ ಸೆಮ್ಮಲ್ವೀಸ್‌. ಅಂತಹ ಮೇಧಾವಿಯನ್ನು ಆಗಿನ ಸಮಾಜ ನಡೆಸಿಕೊಂಡ ರೀತಿ ಧಿಕ್ಕಾರಾರ್ಹವಾದದ್ದು. ಆತನನ್ನು ಮೂಲೆಗುಂಪು ಮಾಡಿದ ಸಮಾಜ ಅಷ್ಟಕ್ಕೇ ಬಿಡಲಿಲ್ಲ. ಆತ ಮಾನಸಿಕ ಸ್ತಿಮಿತ ಕಳೆದುಕೊಂಡಿದ್ದಾನೆ ಎಂಬ ನೆಪವೊಡ್ಡಿ ಆತನನ್ನು ಬಲವಂತವಾಗಿ ಹುಚ್ಚಾಸ್ಪತ್ರೆ ಸೇರಿಸಲಾಯಿತು. ಅಲ್ಲಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಸೆಮ್ಮಲ್ವೀಸ್‌ ಆಸ್ಪತ್ರೆಯ ಸೆಕ್ಯುರಿಟಿ ಗಾರ್ಡ್‌ಗಳಿಂದ ಏಟು ತಿಂದ. ಆಗ ಉಂಟಾದ ಗಾಯಕ್ಕೆ ಸೋಂಕು ತಗುಲಿ ಕೆಲವೇ ದಿನಗಳಲ್ಲಿ ದಾರುಣ ಅಂತ್ಯ ಕಂಡ. ಆಗವನಿಗೆ ಬರಿಯ 47 ವರ್ಷ!

ಮುಂದಕ್ಕೆ ಲೂಯಿ ಪ್ಯಾಶ್ಚರ್‌ ಸೋಂಕು ರೋಗಗಳಿಗೆ “ಸೂಕ್ಷ್ಮ ಜೀವಾಣು’ ಕಾರಣ ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟ. ಇದನ್ನು “”ಜೀವಾಣು ವಾದ” ಎನ್ನಲಾಗುತ್ತದೆ. ಅದಾಗಲೇ ಸೂಕ್ಷ್ಮದರ್ಶಕ ಯಂತ್ರಗಳ ಆವಿಷ್ಕಾರವಾದದ್ದರಿಂದ ಸೂಕ್ಷ್ಮಜೀವಿಗಳಾದ ಬ್ಯಾಕ್ಟೀರಿಯಾಗಳನ್ನು ಕಣ್ಣಾರೆ ಕಂಡ ಜನರು ಜೀವಾಣು ವಾದವನ್ನು ನಂಬಲೇಬೇಕಾಯಿತು. ಇದನ್ನು ಆಧರಿಸಿ ಲಾರ್ಡ್‌ ಲಿಸ್ಟರ್‌ ಎಂಬಾತ ಶಸ್ತ್ರಚಿಕಿತ್ಸೆಯ ಮೊದಲು ಕಾಬೋಲಿಕ್‌ ದ್ರಾವಣದಲ್ಲಿ ಕೈ ತೊಳೆಯುವ ನಿಯಮವನ್ನು ಜಾರಿಗೆ ತಂದು ಪ್ರಸಿದ್ಧಿ ಪಡೆದುಕೊಂಡದ್ದು ವಿಪರ್ಯಾಸ. ಸೂಕ್ಷ್ಮಜೀವಿಗಳ ಇರುವಿಕೆಯ ಬಗ್ಗೆ ತಿಳಿದಿರದಿದ್ದರೂ ಲಿಸ್ಟರ್‌ ಸೂಚಿಸಿದ ಪರಿಹಾರವನ್ನೇ ಸೂಚಿಸಿದ್ದ ಸೆಮ್ಮಲ್ವೀಸ್ ‌ಗೆ ದಕ್ಕಿದ್ದು ಅವಹೇಳನ ಮತ್ತು ಹುಚ್ಚಾಸ್ಪತ್ರೆ ಮಾತ್ರ.

ಜಗತ್ತು ತನ್ನಿಂದಾದ ಘೋರ ಅಪರಾಧಕ್ಕೆ ಮುಂದಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳುವ ಪ್ರಯತ್ನ ಮಾಡಿತು ಎಂಬುದು ಸಮಾಧಾನಕರ ವಿಷಯ. ಆಸ್ಟ್ರಿಯಾ ಸರಕಾರ ಸೆಮ್ಮಲ್ವೀಸ್ ನ ಭಾವಚಿತ್ರವಿರುವ ಅಂಚೆಚೀಟಿಯನ್ನು ಬಿಡುಗಡೆ ಮಾಡಿತು. ಕೋವಿಡ್-19 ಮಹಾಮಾರಿಯಿಂದ ತತ್ತರಿಸಿರುವ ಜಗತ್ತು ಇಂದು ಸುಮಾರು 2 ಶತಮಾನಗಳಷ್ಟು ಹಿಂದೆ ಸೆಮ್ಮಲ್ವೀಸ್‌ ಸೂಚಿಸಿದ “ಕೈ ತೊಳೆಯುವ’ ಮಹಾಮಂತ್ರಕ್ಕೆ ಮೊರೆ ಹೋಗಬೇಕಾಗಿದೆ. ಸಮಾಜಕ್ಕೆ ಒಳಿತು ಮಾಡಲು ಹೋಗಿ ತನ್ನ ಪ್ರಾಣವನ್ನೇ ಬಲಿಕೊಟ್ಟ ಆ ಮಹಾನ್‌ ಚೇತನಕ್ಕೆ ಇಂದಿನ ಸಮಾಜ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು.

-ಡಾ| ಶಿವಾನಂದ ಪ್ರಭು
ಪ್ರಾಧ್ಯಾಪಕರು, ಸರ್ಜರಿ ವಿಭಾಗ,
ಕೆ.ಎಂ.ಸಿ. ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next