ದಾವಣಗೆರೆ: ಸಮಾಜ ಕಲ್ಯಾಣ ಇಲಾಖೆ ಇದೇ ಪ್ರಥಮ ಬಾರಿಗೆ ರಾಜ್ಯದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕ, ಯುವತಿಯರಿಗೆ ಉದ್ಯೋಗ ಖಾತ್ರಿಯೊಂದಿಗೆ ಪ್ಯಾರಾಮೆಡಿಕಲ್ ಕೌಶಲ ತರಬೇತಿ ಮತ್ತು ನಾನ್ ಪ್ಯಾರಾಮೆಡಿಕಲ್ ಅಲ್ಪಾವಧಿ ಸರ್ಟಿಫಿಕೇಟ್ ಕೋರ್ಸ್‌ಗಳಿಗೆ ತರಬೇತಿ ನೀಡಲು ನಿರ್ಧರಿಸಿದೆ.
ಸಮಾಜ ಕಲ್ಯಾಣ ಇಲಾಖೆಯ ಪರೀಕ್ಷಾ ಪೂರ್ವ ತರಬೇತಿ ಕೇಂದ್ರದ ಮೂಲಕ ತರಬೇತಿ ನೀಡಲಾಗುತ್ತಿದೆ. ಪ್ರಸಕ್ತ ವರ್ಷ ರಾಜ್ಯದ 1,500 ನಿರುದ್ಯೋಗಿ ಯುವಕ-ಯುವತಿಯರಿಗೆ ಶೇ.75 ಉದ್ಯೋಗ ಖಾತ್ರಿಯೊಂದಿಗೆ ತರಬೇತಿ ನೀಡಲು ನಿರ್ಧರಿಸಲಾಗಿದ್ದು, 500ಕ್ಕಿಂತ ಹೆಚ್ಚು ಹಾಸಿಗೆ ಹೊಂದಿರುವ ಹಾಗೂ ರಾಷ್ಟ್ರೀಯ ಮಾನ್ಯತೆ ಪಡೆದ ಆಸ್ಪತ್ರೆಗಳ ಮೂಲಕ ವಸತಿ ಸಹಿತವಾಗಿ ತರಬೇತಿ ನೀಡಲು ತೀರ್ಮಾನಿಸಲಾಗಿದೆ.
ನಾನ್ ಪ್ಯಾರಾಮೆಡಿಕಲ್ ಅಲ್ಪಾವಧಿ ಸರ್ಟಿಫಿಕೇಟ್ ಕೋರ್ಸ್‌ಗಳಿಗೆ ಅಭ್ಯರ್ಥಿಗಳನ್ನು ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಉತ್ತೀರ್ಣರಾದ ಹಾಗೂ ಪ್ಯಾರಾಮೆಡಿಕಲ್ ಕೌಶಲ ತರಬೇತಿಗೆ ಅರೆವೈದ್ಯಕೀಯ ಕೋರ್ಸ್‌ಗಳಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಪ್ಯಾರಾಮೆಡಿಕಲ್ ಅಸಿಸ್ಟೆಂಟ್ (ನಾನ್ ಪ್ಯಾರಾಮೆಡಿಕಲ್) ತರಬೇತಿ ಮೂರು ತಿಂಗಳ ಅವಧಿಯದ್ದಾಗಿದ್ದು, ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಉತ್ತೀರ್ಣರಾಗಿರಬೇಕು. ಇದರಲ್ಲಿ ಮೂರು ರೀತಿಯ ತರಬೇತಿಗಳಿವೆ.
ಪ್ಯಾರಾಮೆಡಿಕಲ್ ಟೆಕ್ನೀಶಿಯನ್ (ಪ್ಯಾರಾಮೆಡಿಕಲ್ ಕೌಶಲ ತರಬೇತಿ) ತರಬೇತಿ ಸಹ ಮೂರು ತಿಂಗಳ ಅವಧಿಯದ್ದಾಗಿದ್ದು, ಪ್ಯಾರಾಮೆಡಿಕಲ್ ಡಿಪ್ಲೊಮಾ ಕೋರ್ಸ್ ಪೂರ್ಣಗೊಳಿಸಿರಬೇಕು. ಇದರಲ್ಲಿ ಐದು ರೀತಿಯ ತರಬೇತಿಗಳಿವೆ.
Related Articles
ಆಯ್ಕೆ ವಿಧಾನ ಹೇಗೆ?
ನಿಗದಿತ ಗುರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ಬಂದಾಗ ನಿಗದಿತ ವಿದ್ಯಾರ್ಹತೆಯಲ್ಲಿ ಗಳಿಸಿರುವ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ತರಬೇತಿಗೆ ನಿಯೋಜಿಸಲಾಗುತ್ತದೆ. ನಿಗದಿತ ಗುರಿಗೆ ಅನುಗುಣವಾಗಿ ಅರ್ಜಿಗಳು ಬಾರದಿದ್ದರೆ ಅರ್ಜಿಗಳನ್ನು ನೇರವಾಗಿ ಸ್ವೀಕರಿಸಿ, ಅರ್ಹತಾ ಮಾನದಂಡ ಪೂರೈಸಿದವರಿಗೆ ತರಬೇತಿಗೆ ನಿಯೋಜಿಸಲು ಇಲಾಖೆ ಯೋಜನೆ ಹಾಕಿಕೊಂಡಿದೆ. ಆಸಕ್ತ 18ರಿಂದ 40ವರ್ಷದೊಳಗಿನವರು ಅರ್ಜಿ ನಮೂನೆಯನ್ನು ವೆಬ್‌ಸೈಟ್: //www.sw.kar. nic.in //www.sw. kar.nic. in ನಿಂದ ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಿದ ಅರ್ಜಿಗಳನ್ನು ಸ್ಕ್ಯಾನ್ ಮಾಡಿ ಈ ಮೇಲ್ petcparamedical@gmail.com ಮೂಲಕ ಸಲ್ಲಿಸಬೇಕು. ತಾಂತ್ರಿಕ ಸಮಸ್ಯೆ ಕಂಡು ಬಂದರೆ swdpetc2011@gmail.comಗೆ ಸಲ್ಲಿಸಬಹುದು. ದೂರವಾಣಿ ಸಂಖ್ಯೆ 080-22207784 ಸಂರ್ಪಕಿಸಲು ಸೂಚಿಸಲಾಗಿದೆ. ಅರ್ಜಿ ಸಲ್ಲಿಸಲು ನ.15ರ ಸಂಜೆ 6 ಗಂಟೆವರೆಗೆ ಅವಕಾಶವಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಪರೀಕ್ಷಾ ಪೂರ್ವ ತರಬೇತಿ ಕೇಂದ್ರ ತಿಳಿಸಿದೆ.
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗಾಗಿ ಅನುಕೂಲ ಕಲ್ಪಿಸುತ್ತ ಬಂದಿರುವ ಇಲಾಖೆ, ಇದೇ ಮೊದಲ ಬಾರಿಗೆ ಪರಿಶಿಷ್ಟ ಯುವಜನರಿಗೆ ಶೇ.75 ಉದ್ಯೋಗ ಖಾತ್ರಿಯೊಂದಿಗೆ ವೈದ್ಯಕೀಯ ಕ್ಷೇತ್ರದಲ್ಲಿ ತರಬೇತಿ ನೀಡಿ, ಉದ್ಯೋಗ ಕಲ್ಪಿಸಲು ಯೋಜನೆ ರೂಪಿಸಿದೆ. ಪ.ಜಾತಿ, ಪಂಗಡದ ಯುವಜನತೆ ಆರೋಗ್ಯ ಕ್ಷೇತ್ರದಲ್ಲಿ ಉದ್ಯೋಗಸ್ಥರಾಗಲು ಇದು ಸುವರ್ಣಾವಕಾಶವಾಗಿದೆ.
-ರೇಷ್ಮಾ ಕೌಸರ್,
ಉಪ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ದಾವಣಗೆರೆ
– ಎಚ್.ಕೆ.ನಟರಾಜ