Advertisement
ನ್ಯೂಜಿಲ್ಯಾಂಡ್: ಅಜೇಯವಾಗಿ ಮುನ್ನುಗ್ಗುತ್ತಿದ್ದ ಕಿವೀಸ್ ಪಡೆಗೆ ಶಾಕ್ ನೀಡಿದ್ದು ಪಾಕಿಸ್ಥಾನ. ಏಳು ಪಂದ್ಯಗಳಲ್ಲಿ 11 ಅಂಕ ಪಡೆದರೂ ವಿಲಿಯಮ್ಸನ್ ಪಡೆ ಇನ್ನೂ ಸೆಮಿ ಪೈನಲ್ ತಲುಪಿಲ್ಲ. ಕಿವೀಸ್ ತನ್ನ ಅಂತಿಮ ಎರಡು ಪಂದ್ಯಗಳನ್ನು ಬಲಿಷ್ಠ ತಂಡಗಳಾದ ಇಂಗ್ಲೆಂಡ್ ಮತ್ತು ಆಸೀಸ್ ವಿರುದ್ಧ ಆಡಲಿದೆ. ಇದರಲ್ಲಿ ಒಂದು ಪಂದ್ಯ ಗೆದ್ದರೂ ನ್ಯೂಜಿಲ್ಯಾಂಡ್ ಸೆಮೀಸ್ ಗೆ ಎಂಟ್ರಿ ನೀಡಲಿದೆ. ಆದರೆ ಎರಡೂ ಪಂದ್ಯ ಸೋತಲ್ಲಿ ಮಾತ್ರ ಪಾಕಿಸ್ಥಾನ- ಬಾಂಗ್ಲಾದೇಶ ನಡುವಿನ ವಿಜೇತ ತಂಡ, ಶ್ರೀಲಂಕಾ, ಇಂಗ್ಲೆಂಡ್ ಈ ಮೂರು ತಂಡಗಳಲ್ಲಿ ಕನಿಷ್ಟ ಪಕ್ಷ ಎರಡು ತಂಡಗಳು ತಲಾ ಒಂದೊಂದು ಪಂದ್ಯ ಸೋಲಬೇಕು. ಆಗ ನ್ಯೂಜಿಲ್ಯಾಂಡ್ ಸೆಮಿ ಫೈನಲ್ ಪ್ರವೇಶ ಸಾಧ್ಯ. ಇದೂ ಆಗದೇ ಇದ್ದಲ್ಲಿ ಭಾರತ ತನ್ನ ಮುಂದಿನ ನಾಲ್ಕು ಪಂದ್ಯಗಳಲ್ಲಿ ಮೂರು ಪಂದ್ಯ ಸೋಲಬೇಕು ಮತ್ತು ಕಿವೀಸ್ ಗಿಂತ ಕಡಿಮೆ ರನ ರೇಟ್ ನಲ್ಲಿ ಲೀಗ್ ಮುಗಿಸಬೇಕು.
Related Articles
Advertisement
ಒಂದು ವೇಳೆ ಇಂಗ್ಲೆಂಡ್ ಎರಡೂ ಪಂದ್ಯ ಸೋತರೆ ಕೂಡಾ ಸೆಮಿ ಪ್ರವೇಶ ಸಾಧ್ಯ. ಅದು ಸಾಧ್ಯವಾಗಬೇಕಾದರೆ ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್ ತನ್ನ ಮುಂದಿನ ಮೂರು ಪಂದ್ಯಗಳಲ್ಲಿ ಕನಿಷ್ಠ ಎರಡು ಪಂದ್ಯ ಸೋಲಬೇಕು. ಬಾಂಗ್ಲಾ ಮತ್ತು ಪಾಕಿಸ್ಥಾನ ನಡುವಿನ ಪಂದ್ಯ ಮಳೆಯಿಂದ ರದ್ದಾಗಬೇಕು. ಮತ್ತು ಆ ಎರಡೂ ತಂಡಗಳು ತನ್ನ ಮುಂದಿನ ಪಂದ್ಯ ಸೋಲಬೇಕು. ಆಗ ಪಾಕ್ ಮತ್ತು ಬಾಂಗ್ಲಾ ತನ್ನ ಉಳಿದ ಮತ್ತೊಂದು ಪಂದ್ಯ ಸೋಲಬೇಕು. ಆಗ ಮೂರು ತಂಡಗಳು ಎಂಟು ಅಂಕ ಪಡೆಯುತ್ತದೆ ಮತ್ತು ಹೆಚ್ಚು ಪಂದ್ಯ ಗೆದ್ದ ಆಧಾರದಲ್ಲಿ ಇಂಗ್ಲೆಂಡ್ ಗೆ ವಿಶ್ವಕಪ್ ನ ಮುಂದಿನ ಹಾದಿಯ ಪಾಸ್ ಸಿಗುತ್ತದೆ.
ಬಾಂಗ್ಲಾದೇಶ: ಈ ವಿಶ್ವಕಪ್ ನಲ್ಲಿ ನಿರೀಕ್ಷೆಗೂ ಮೀರಿ ಪ್ರದರ್ಶನ ನೀಡುತ್ತಿರುವುದು ಮುಶ್ರಫೆ ಮುರ್ತಾಜಾ ಬಳಗ. ಏಳು ಪಂದ್ಯಗಳಿಂದ ಏಳು ಅಂಕ ಪಡೆದಿರುವ ಬಾಂಗ್ಲಾ ಮುಂದಿನೆರಡು ಪಂದ್ಯಗಳಲ್ಲಿ ಭಾರತ ಮತ್ತು ಪಾಕಿಸ್ಥಾನ ವಿರುದ್ಧ ಆಡಲಿದೆ. ಈ ಎರಡೂ ಪಂದ್ಯ ಗೆದ್ದರೆ ಬಾಂಗ್ಲಾ 11 ಅಂಕ ಪಡೆಯಲಿದೆ ಮತ್ತು ಈ ಕೆಳಗಿನವುಗಳಲ್ಲಿ ಯಾವುದಾದರು ಒಂದು ನಡೆದರೆ ಬಾಂಗ್ಲಾ ವಿಶ್ವಕಪ್ ಉಪಾಂತ್ಯ ಪ್ರವೇಶಿಸಲಿದೆ.
* ಇಂಗ್ಲೆಂಡ್ ಮತ್ತು ಶ್ರೀಲಂಕಾ ಕನಿಷ್ಠ ಒಂದು ಪಂದ್ಯ ಸೋಲಬೇಕು. ಆಗ ಅವೆರಡೂ ತಂಡಗಳು ಗರಿಷ್ಠ ಹತ್ತು ಅಂಕಗಳಿಂದ ಕೂಟ ಮುಗಿಸುತ್ತದೆ.* ನ್ಯೂಜಿಲ್ಯಾಂಡ್ ತನ್ನ ಎರಡೂ ಪಂದ್ಯಗಳನ್ನು ಸೋಲಬೇಕು ಮತ್ತು ಬಾಂಗ್ಲಾಕ್ಕಿಂತ ಕಡಿಮೆ ರನ ರೇಟ್ ಹೊಂದಬೇಕು.
* ಭಾರತ ಮುಂದಿನ ಕನಿಷ್ಠ ಮೂರು ಪಂದ್ಯ ಸೋಲಬೇಕು ಮತ್ತು ಬಾಂಗ್ಲಾಕ್ಕಿಂತ ಕಡಿಮೆ ರನ್ ರೇಟ್ ಹೊಂದಬೇಕು. ಒಂದು ವೇಳೆ ಬಾಂಗ್ಲಾ ಒಂದು ಪಂದ್ಯ ಸೋತು ಒಂದು ಪಂದ್ಯ ಗೆದ್ದರೆ ಒಂಬತ್ತು ಅಂಕ ಪಡೆಯಲಿದೆ. ಆಗ ಬೇರೆ ತಂಡಗಳು 10 ಅಂಕ ಪಡೆದಿರುವ ಸಾಧ್ಯತೆ ಇರುವಾಗ ಬಾಂಗ್ಲಾ ಸೆಮಿ ಕನಸಿಗೆ ಎರಡೂ ಪಂದ್ಯ ಗೆಲ್ಲುವುದು ಅನಿವಾರ್ಯ. ಪಾಕಿಸ್ಥಾನ: ಬಲಿಷ್ಟ ಇಂಗ್ಲೆಂಡ್ ತಂಡವನ್ನು ಕೂಟದ ಆರಂಭದಲ್ಲೇ ಸೋಲಿಸಿ ನಿರೀಕ್ಷೆ ಮೂಡಿಸಿದ್ದ ಪಾಕ್, ನಂತರ ಮೂರು ಪಂದ್ಯಲ್ಲಿ ಸೋಲನುಭವಿಸಿತು. ದ.ಆಫ್ರಿಕಾ ಮತ್ತು ಕಿವೀಸ್ ವಿರುದ್ಧ ಜಯ ಗಳಿಸಿ ಸೆಮಿ ಹಾದಿಯನ್ನು ಜೀವಂತವಾಗಿರಿಸಿರುವ ಸರ್ಫರಾಜ್ ಬಳಗ ಅಂತಿಮವಾಗಿ ಬಾಂಗ್ಲಾ ಮತ್ತು ಅಫ್ಘಾನಿಸ್ಥಾನ ವಿರುದ್ಧ ಆಡಲಿದೆ. ಈ ಎರಡೂ ಪಂದ್ಯ ಗೆದ್ದರೆ ಪಾಕ್ ಗೆ 11 ಅಂಕ ಸಿಗಲಿದೆ. ಆಗ ಈ ಕೆಳಗಿನ ಮೂರರಲ್ಲಿ ಒಂದು ನಡೆದರೂ ಸೆಮಿ ಪ್ರವೇಶ ಸಿಗಲಿದೆ. * ಇಂಗ್ಲೆಂಡ್ ಮತ್ತು ಶ್ರೀಲಂಕಾ ಕನಿಷ್ಠ ಒಂದು ಪಂದ್ಯ ಸೋಲಬೇಕು. ಆಗ ಅವೆರಡೂ ತಂಡಗಳು ಗರಿಷ್ಠ ಹತ್ತು ಅಂಕಗಳಿಂದ ಕೂಟ ಮುಗಿಸುತ್ತದೆ.
* ನ್ಯೂಜಿಲ್ಯಾಂಡ್ ತನ್ನ ಎರಡೂ ಪಂದ್ಯಗಳನ್ನು ಸೋಲಬೇಕು ಮತ್ತು ಪಾಕ್ ಗಿಂತ ಕಡಿಮೆ ರನ್ ರೇಟ್ ಹೊಂದಬೇಕು.
* ಭಾರತ ಮುಂದಿನ ಕನಿಷ್ಠ ಮೂರು ಪಂದ್ಯ ಸೋಲಬೇಕು ಮತ್ತು ಪಾಕ್ ಗಿಂತ ಕಡಿಮೆ ರನ್ ರೇಟ್ ಹೊಂದಬೇಕು.
ಒಂದು ವೇಳೆ ಪಾಕ್ ತನ್ನ ಮುಂದಿನ ಒಂದು ಪಂದ್ಯ ಗೆದ್ದರೆ ಸೆಮಿ ಫೈನಲ್ ಹಾದಿ ಕಷ್ಟವಾಗಲಿದೆ. ಶ್ರೀಲಂಕಾ : ಇಂಗ್ಲೆಂಡ್ ಗೆ ಅಚ್ಚರಿಯ ಸೋಲುಣಿಸಿದ ಶ್ರೀಲಂಕಾ ತಂಡ ಆರು ಅಂಕ ಹೊಂದಿದೆ. ಇದರಲ್ಲಿ ಎರಡು ಅಂಕ ಮಳೆಯಿಂದ ರದ್ದಾಗಿ ಸಿಕ್ಕ ಅಂಕಗಳು. ವಿಶ್ವಕಪ್ ಉಪಾಂತ್ಯ ಹಂತದ ಆಸೆಯಲ್ಲಿರುವ ಕರುಣರತ್ನೆ ಬಳಗ ಮುಂದೆ ಮೂರು ಪಂದ್ಯ ಆಡಲಿದೆ. ಈ ಮೂರು ಪಂದ್ಯ ಗೆದ್ದರೆ ಸುಲಭದಲ್ಲಿ ಸೆಮಿ ತಲುಪಬಹುದು. ಆದರೆ ಇಂಗ್ಲೆಂಡ್ ಮುಂದಿನ ಒಂದು ಪಂದ್ಯ ಸೋಲಬೇಕು. ಇಲ್ಲದೇ ಇದ್ದರೆ ಇಂಗ್ಲೆಂಡ್ ಹೆಚ್ಚು ಪಂದ್ಯ ಗೆದ್ದ ಆಧಾರದಲ್ಲಿ ಸೆಮಿ ತಲುಪುತ್ತದೆ. ಒಂದು ವೇಳೆ ಲಂಕಾ ಎರಡು ಪಂದ್ಯ ಗೆದ್ದು ಒಂದು ಸೋತರೆ ಹತ್ತು ಅಂಕ ಪಡೆಯುತ್ತದೆ. ಆಗ ಇಂಗ್ಲೆಂಡ್ ತನ್ನೆರಡೂ ಪಂದ್ಯ ಸೋಲಬೇಕು. ಮತ್ತು ಪಾಕಿಸ್ಥಾನ ಮತ್ತು ಬಾಂಗ್ಲಾ ಒಂದು ಮ್ಯಾಚ್ ನಲ್ಲಿ ಸೋಲಬೇಕು. ತನ್ನ ಮೂರು ಪಂದ್ಯಗಳಲ್ಲಿ ಎರಡು ಪಂದ್ಯ ಸೋತರೆ ಕರುಣರತ್ನೆ ಬಳಗ ಕೂಟದಿಂದ ನಿರ್ಗಮಿಸುವುದು ನಿಶ್ಚಿತ. ವೆಸ್ಟ್ ಇಂಡೀಸ್: ಕೇವಲ ಒಂದು ಪಂದ್ಯ ಗೆದ್ದಿರುವ ವಿಂಡೀಸ್ ಬಳಿ ಇರುವುದು ಕೇವಲ ಮೂರು ಅಂಕ. ಇನ್ನು ಒಂದು ಪಂದ್ಯ ಸೋತರೂ ಹೊಲ್ಡರ್ ಪಡೆ ಕೂಟದಿಂದ ಗಂಟುಮೂಟೆ ಕಟ್ಟಲಿದೆ. ಉಳಿದ ಮೂರು ಪಂದ್ಯಗಳಲ್ಲಿ ಭಾರತ, ಶ್ರೀಲಂಕಾ ಮತ್ತು ಅಫ್ಘಾನಿಸ್ಥಾನ ವಿರುದ್ಧ ಆಡಲಿರುವ ವಿಂಡೀಸ್ ಮೂರು ಪಂದ್ಯ ಗೆದ್ದರೆ ಒಂಬತ್ತು ಅಂಕ ಹೊಂದಲಿದೆ. ಆಗ ಅದೃಷ್ಟ ಮಾತ್ರ ಅವರ ಕೈಹಿಡಿಯಬೇಕಿದೆ. ಹಾಗಾಗಿ ವಿಂಡೀಸ್ ಗೆ ಇನ್ನು ಸೆಮಿ ಹಾದಿ ಅತ್ಯಂತ ಕಠಿಣ.