Advertisement

ಸೆಲ್ವಂಗೆ “ಮಾಡು ಇಲ್ಲವೇ ಮಡಿ’

03:45 AM Feb 17, 2017 | |

ಚೆನ್ನೈ: ತಮಿಳುನಾಡಿನಲ್ಲಿ 10 ದಿನಗಳ ಕಾಲ ನಡೆದ ರಾಜಕೀಯ ನಾಟಕವು ಒಂದು ಹಂತಕ್ಕೆ ಅಂತ್ಯ ಕಂಡಿದೆ. ಆದರೆ, ಇದು ಜಯಲಲಿತಾರ ಆಪ್ತ ಹಾಗೂ ವಿಧೇಯ ಬಂಟನೆಂದೇ ಕರೆಸಿಕೊಂಡಿದ್ದ ಒ ಪನ್ನೀರ್‌ಸೆಲ್ವಂ ಅವರ ರಾಜಕೀಯ ಭವಿಷ್ಯವನ್ನೂ ಸಮಾಪ್ತಿಗೊಳಿಸಿತೇ ಎಂಬ ಪ್ರಶ್ನೆ ಇದೀಗ ಮೂಡಿದೆ. 

Advertisement

ದಿಢೀರ್‌ ಬೆಳವಣಿಗೆಯೆಂಬಂತೆ, ಸೆಲ್ವಂ ಅವರು ಶಶಿಕಲಾ ವಿರುದ್ಧ ಬಂಡೆದ್ದರೂ ಸಾಕಷ್ಟು ಶಾಸಕರ ಬೆಂಬಲ ಸಿಗದ ಕಾರಣ ಸಿಎಂ ಆಗಬೇಕೆಂಬ ಅವರ ಕನಸು ಈಡೇರಲಿಲ್ಲ. 10-12 ಮಂದಿ ಶಾಸಕರಷ್ಟೇ ಅವರ ಬೆನ್ನಿಗೆ ನಿಂತಿದ್ದರಿಂದ, ಪನ್ನೀರ್‌ ಕೊನೆಗೂ ಸೋಲೊಪ್ಪಿಕೊಳ್ಳಬೇಕಾಯಿತು. ಒಟ್ಟಿನಲ್ಲಿ ಈ ಬೆಳವಣಿಗೆಯು ಪನ್ನೀರ್‌ಸೆಲ್ವಂರನ್ನು ರಾಜಕೀಯ ನೇಪಥ್ಯಕ್ಕೆ ಸರಿಯುವಂತೆ ಮಾಡಿದವೇ ಎಂಬ ಮಾತುಗಳು ಕೇಳಿಬರತೊಡಗಿವೆ.

ಆರಂಭದಲ್ಲಿ ಪನ್ನೀರ್‌ಸೆಲ್ವಂ ಅವರಿಗೆ ಬಿಜೆಪಿ ಬೆಂಬಲ ನೀಡುತ್ತಿದೆ ಎಂದು ಹೇಳಲಾಗುತ್ತಿತ್ತು. ಕೇಂದ್ರದ ಬೆಂಬಲದಿಂದಲೇ ಅವರು ಶಶಿಕಲಾ ವಿರುದ್ಧ ಬಂಡೇಳಲು ಸಾಧ್ಯವಾಯಿತು ಎಂದೂ ಸುದ್ದಿಯಾದವು. ಬಿಜೆಪಿಗೆ ರಾಷ್ಟ್ರಪತಿ, ರಾಜ್ಯಸಭೆ ಚುನಾವಣೆ ವೇಳೆ ಎಐಎಡಿಎಂಕೆಯ ಬೆಂಬಲ ಅಗತ್ಯವಿದ್ದ ಕಾರಣ, ಸೆಲ್ವಂರನ್ನು ಶಶಿಕಲಾ ವಿರುದ್ಧ ಎತ್ತಿಕಟ್ಟುವುದು ಹಾಗೂ ರಾಜ್ಯ ರಾಜಕೀಯಕ್ಕೆ ಪ್ರವೇಶಿಸುವುದು ಬಿಜೆಪಿ ಉದ್ದೇಶವಾಗಿತ್ತು. ಆದರೆ, ಒಂದೇ ಕಲ್ಲಿಗೆ ಎರಡು ಹಕ್ಕಿಗಳನ್ನು ಬೀಳಿಸುವ ಬಿಜೆಪಿಯ ಯತ್ನ ಫ‌ಲಿಸಲಿಲ್ಲ. ಹೀಗಾಗಿ, ಇದೀಗ ಸೆಲ್ವಂರನ್ನು ಬಿಜೆಪಿ ಕೂಡ ದೂರ ಇಡುವ ಸಾಧ್ಯತೆಯೇ ಹೆಚ್ಚು ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು. ಇದು ಹೌದೆಂದಾದರೆ, ಸೆಲ್ವಂ ರಾಜಕೀಯ ಭವಿಷ್ಯ ಖತಂ ಆದಂತೆಯೇ ಸರಿ. 

ಸೆಲ್ವಂ ಘರ್‌ವಾಪ್ಸಿ?: ಇಂತಹ ಸಂದರ್ಭದಲ್ಲಿ ಸೆಲ್ವಂಗಿರುವ ಏಕೈಕ ದಾರಿಯೆಂದರೆ, ಘರ್‌ ವಾಪ್ಸಿ. ಹೌದು. ಮತ್ತೆ ಎಐಎಡಿಎಂಕೆಯ ವಿಧೇಯ ನಾಯಕನಾಗಿ ಮುಂದುವರಿದರೆ ಸೆಲ್ವಂಗೆ ರಾಜಕೀಯದಲ್ಲಿ ಮುಂದುವರಿಯುವ ಅವಕಾಶ ದೊರೆಯಬಹುದು. ಪನ್ನೀರ್‌ಸೆಲ್ವಂ ಘರ್‌ವಾಪ್ಸಿ ಆಗುವ ಸಾಧ್ಯತೆಯೇ ಹೆಚ್ಚು ಎನ್ನುತ್ತದೆ ಪಕ್ಷದ ಮೂಲಗಳು. ಸೆಲ್ವಂ ಅವರೊಂದಿಗೆ ಹಿಂಬಾಗಿಲ ಮಾತುಕತೆ ನಡೆಯುತ್ತಿದ್ದು, ಒಗ್ಗಟ್ಟು ಕಾಯ್ದುಕೊಳ್ಳಲು ಯತ್ನಿಸಲಾಗುತ್ತಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಸಂಧಾನ ಮಾತುಕತೆಯ ನೇತೃತ್ವವನ್ನು ಶಶಿಕಲಾ ಸಂಬಂಧಿ ದಿನಕರನ್‌ ವಹಿಸಿದ್ದಾರೆ ಎನ್ನಲಾಗಿದೆ.

ಪ್ರಜಾಪ್ರಭುತ್ವದ ಗಾಳಿ?: ಒಂದು ಕಾಲದಲ್ಲಿ “ಅಮ್ಮ’ನ ರಾಜ್ಯಭಾರವಿದ್ದಾಗ ತಮಿಳುನಾಡಲ್ಲಿ ಏನು ನಡೆದರೂ, ಎಂಥ ವಿದ್ಯಮಾನಗಳಾದರೂ ಯಾರೂ ತುಟಿಪಿಟಿಕ್ಕೆನ್ನುತ್ತಿರಲಿಲ್ಲ.ಆದರೆ, ಇದೀಗ ನೆರೆರಾಜ್ಯದಲ್ಲಿ ಸ್ವಲ್ಪಮಟ್ಟಿಗೆ ಪ್ರಜಾಪ್ರಭುತ್ವದ ಗಾಳಿ ಬೀಸುತ್ತಿರುವುದು ಗೋಚರಿಸುತ್ತಿದೆ. ಜಯಾ ನಿರ್ಗಮನದ ಬಳಿಕ ಒಬ್ಬೊಬ್ಬರಾಗಿಯೇ ತಮ್ಮ ನಿಲುವುಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಇತ್ತೀಚೆಗಿನ ಬೆಳವಣಿಗೆಗಳಿಗೆ ಕಮಲ್‌ ಹಾಸನ್‌, ಪ್ರಕಾಶ್‌ ರೈ, ಆರ್ಯ, ಎಸ್‌ ವೈ ಶೇಖರ್‌, ಮನ್ಸೂರ್‌ ಅಲಿ ಖಾನ್‌ ಪ್ರತಿಕ್ರಿಯೆಯೇ ನಿದರ್ಶನ.

Advertisement

ಸ್ಮಾರಕಕ್ಕೆ ಹೈ ಅಡ್ಡಿ: ಜಯಾ ಅವರ ಪೋಯೆಸ್‌ ಗಾರ್ಡನ್‌ ನಿವಾಸವನ್ನು ಸ್ಮಾರಕವನ್ನಾಗಿ ಬದಲಾಯಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕೆಂದು ಕೋರಿದ್ದ ಅರ್ಜಿಯನ್ನು ಮದ್ರಾಸ್‌ ಹೈಕೋರ್ಟ್‌ ವಜಾ ಮಾಡಿದೆ. ಜತೆಗೆ, ಶಶಿಕಲಾ ಅವರು ಶಾಸಕರನ್ನು ಅಪಹರಿಸಿದ್ದಾರೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಎರಡು ಅರ್ಜಿಗಳನ್ನೂ ತಳ್ಳಿಹಾಕಿದೆ.

ಎಐಎಡಿಎಂಕೆ ಹೋಳಾಗುತ್ತಾ?
ಹೊಸ ಬಣಕ್ಕೆ ಕನಿಷ್ಠ ಮೂರನೇ ಎರಡರಷ್ಟು ಶಾಸಕರ ಬೆಂಬಲವಿದ್ದರಷ್ಟೇ ಪಕ್ಷದಿಂದ ಹೊರಗೆ ಬರಬಹುದು ಎಂದು ಚುನಾಯಿತ ಶಾಸಕರ ಕಾನೂನು ಹೇಳುತ್ತದೆ. ಪನ್ನೀರ್‌ಸೆಲ್ವಂ ವಿಚಾರಕ್ಕೆ ಬಂದರೆ, ಅವರು ಎಐಎಡಿಎಂಕೆಯನ್ನು ಒಡೆದು ಹೊರಬರಬೇಕೆಂದರೆ, ಕನಿಷ್ಠ 100 ಶಾಸಕರ ಬೆಂಬಲವಾದರೂ ಬೇಕು. ಆದರೆ, ಅವರ ಬಳಿ ಇರುವುದು 12ರಷ್ಟು ಶಾಸಕರಷ್ಟೆ. ಹೀಗಾಗಿ, ಎಐಎಡಿಎಂಕೆ ಹೋಳಾಗುವ ಸಾಧ್ಯತೆ ಇಲ್ಲ. ಇನ್ನು ಪನ್ನೀರ್‌ಸೆಲ್ವಂರನ್ನು ಪಕ್ಷದಿಂದ ವಜಾ ಮಾಡಿದ್ದರೂ, ಅವರು ಪಕ್ಷದ ನಿಯಂತ್ರಣದಲ್ಲೇ ಇರುತ್ತಾರೆ. ಒಂದು ವೇಳೆ, ಅವರು ಬೇರೆ ಪಕ್ಷಕ್ಕೆ ಸೇರಿದರೆ ಅಥವಾ ಪಕ್ಷದ ವಿಪ್‌ ಉಲ್ಲಂ ಸಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ ಸ್ಪೀಕರ್‌ಗಿರುತ್ತದೆ. ವಿಧಾನಸಭೆ ಬಹುಮತ ಸಾಬೀತಿನ ವೇಳೆ ಪಳನಿಸ್ವಾಮಿಗೆ ಬೆಂಬಲ ಸೂಚಿಸಬೇಕು ಎಂಬ ಎಐಎಡಿಎಂಕೆಯ ವಿಪ್‌ ಅನ್ನು ಸೆಲ್ವಂ ಮತ್ತು ಅವರ ಬಣ ಉಲ್ಲಂ ಸಿದ್ದೇ ಆದಲ್ಲಿ, ಅವರನ್ನು ಅಸೆಂಬ್ಲಿಯಿಂದಲೇ ಉಚ್ಚಾಟನೆ ಮಾಡಬಹುದಾಗಿದೆ. ಹೀಗಾಗಿ, ಅವರು ಹೊಸ ಹೈಕಮಾಂಡ್‌ನ‌ ಸೂಚನೆ ಪಾಲಿಸಲೇಬೇಕಾಗುತ್ತದೆ.

ರಜನಿ ಮೂಲಕ ಎಂಟ್ರಿ ಕೊಡುತ್ತಾ ಬಿಜೆಪಿ?
ಪನ್ನೀರ್‌ಸೆಲ್ವಂ ಅವರು ಶಶಿಕಲಾ ಬಣದಿಂದ ಬೇರ್ಪಟ್ಟು, ಬಂಡಾಯದ ರಣಕಹಳೆ ಮೊಳಗಿಸಿದ್ದರ ಹಿಂದೆ ಬಿಜೆಪಿಯ ಬೆಂಬಲವಿತ್ತು ಎಂಬ ಮಾತುಗಳು ಕೇಳಿಬಂದಿರುವ ಬೆನ್ನಲ್ಲೇ ಬಿಜೆಪಿಯು ಇದೀಗ ನಟ ರಜನಿಕಾಂತ್‌ ಮೂಲಕ ರಾಜ್ಯದಲ್ಲಿ ನೆಲೆಯೂರಲು ಯತ್ನಿಸುತ್ತಿದೆೆ. ಹೊಸ ಪಕ್ಷ ಸ್ಥಾಪಿಸುವಂತೆ ಬಿಜೆಪಿಯು ರಜನಿಕಾಂತ್‌ರ ಮನವೊಲಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಈ ಕುರಿತು ಪ್ರಶ್ನಿಸಿದಾಗ, ಅದನ್ನು ನಿರಾಕರಿಸದ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ, “ಏನೇನಾಗುತ್ತೆ ಎಂಬುದನ್ನು ಕಾದು ನೋಡಿ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next