ಚಿಕ್ಕಬಳ್ಳಾಪುರ: ಹಸಿರು ಪಟಾಕಿಗಳನ್ನು ಹೊರತುಪಡಿಸಿ ಉಳಿದ ನಿಷೇಧಿತ ಯಾವುದೇ ರೀತಿಯ ಪಟಾಕಿಗಳು ಕಂಡು ಬಂದರೆ ಅವುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದರ ಜತೆಗೆ ಸಂಬಂದಪಟ್ಟ ಮಾಲೀಕರ ಮೇಲೆ ಕ್ರಿಮಿನಲ್ ಕೇಸ್ ದಾಖೀಸುವಂತೆ ರಾಜ್ಯ ಪೌರಾಡಳಿತ ನಿರ್ದೇಶನಾಲಯ ನಗರ ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಿದೆ.
ದೀಪಾವಳಿ ಹಬ್ಬಕ್ಕೆ ದಿನಗಣನೆ ಆರಂಭವಾಗುತ್ತಿದ್ದಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ರೂಪಿಸಿರುವ ಹಲವು ಮಾರ್ಗಸೂಚಿಗಳನ್ನು ಉಲ್ಲೇಖೀಸಿ ರಾಜ್ಯ ಪೌರಾಡಳಿತ ನಿರ್ದೇಶನಾಲಯ ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಿಗೆ ಸುತ್ತೋಲೆ ಹೊರಡಿಸಿದ್ದು ಸುಪ್ರೀಂಕೋರ್ಟ್ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಆದೇಶಿಸಿದೆ.
ಸುತ್ತೋಲೆಯಲ್ಲಿ ಏನಿದೆ?: ಯಾವುದೇ ಹಸಿರು ಪಟಾಕಿ ಪ್ಯಾಕೇಟುಗಳನ್ನು ರ್‍ಯಾಂಡಮ್ ಆಗಿ ಸಂಗ್ರಹಿಸಿ ನಿಗದಿತ ವಿಧಿವಿಧಾನಗಳ ಮೂಲಕ ಅವುಗಳ ಶಬ್ದ ಮಟ್ಟವನ್ನು ಮಾಪನ ಮಾಡಬೇಕು, ಮತ್ತು ನಿಗದಿತ ಗುಣಮಾಪನಗಳಿಗೆ ಸರಿ ಹೊಂದಿದ್ದಲ್ಲಿ ಅವುಗಳನ್ನು ಸಹ ಕೂಡಲೇ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಸೂಚಿಸಲಾಗಿದೆ. ದೀಪಾವಳಿ ಆಚರಣೆ ವೇಳೆ ಹಸಿರು ಪಟಾಕಿಗಳನ್ನು ಮಾತ್ರ ಬಳಸಬೇಕು. ಇವುಗಳನ್ನು ಬಳಸುವಾಗ ಯಾವುದೇ ಪ್ರಾಣಿ, ಪಕ್ಷಿ, ಮಕ್ಕಳು ಹಾಗೂ ವಯೋ ವೃದ್ಧರಿಗೆ ತೊಂದರೆ ಆಗದಂತೆ ಬಳಸಬೇಕು. ಹಸಿರು ಪಟಾಕಿಗಳ ಬಗ್ಗೆ ಸಾರ್ವಜನಿಕರಿಗೆ ಹಾಗೂ ಮಕ್ಕಳಲ್ಲಿ ವ್ಯಾಪಕವಾಗಿ ಅರಿವು ಮೂಡಿಸಬೇಕು, ಸ್ಥಳೀಯ ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳ ಸುತ್ತಮುತ್ತ ಹಾಗೂ ಯಾವುದೇ ನಿಷೇಧಿತ ಪ್ರದೇಶದಲ್ಲಿ ಯಾವುದೇ ರೀತಿಯ ಪಟಾಕಿಗಳನ್ನು ಸ್ಫೋಟಿಸಬಾರದು. ಇದನ್ನು ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳು ಕಡ್ಡಾಯವಾಗಿ ಪಾಲಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ವಿಶೇಷವಾಗಿ ಹಸಿರು ಪಟಾಕಿಗಳ ಬಗ್ಗೆ ವ್ಯಾಪಕವಾಗಿ ಸಾರ್ವಜನಿಕ ವಲಯದಲ್ಲಿ ಅರಿವು ಮೂಡಿಸಿ ಪರಿಸರ ಸ್ನೇಹಿ ದೀಪಾವಳಿ ಆಚರಣೆಗೆ ಬೇಕಾದ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ ಸರ್ಕಾರ ನಿರ್ದೇಶಿಸಿದೆ.
ನಾಗರಿಕರನ್ನೊಳಗೊಂಡ ಕಾರ್ಯಪಡೆಗಳ ರಚನೆಗೆ ಸೂಚನೆ: ಜಿಲ್ಲಾ ವ್ಯಾಪ್ತಿಯಲ್ಲಿ ದೀಪಾವಳಿ ವೇಳೆ ಪರಿಸರ ಮಾಲಿನ್ಯ ಹಾಗೂ ಶಬ್ದ ಹಾಗೂ ವಾಯು ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಜಿಲ್ಲಾ ಆಗ್ನಿಶಾಮಕ ಪಡೆ ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರುಗಳು, ಆರೋಗ್ಯಾಧಿಕಾರಿಗಳು, ತಹಶೀಲ್ದಾರ್‌ರರು, ಜಿಲ್ಲಾ ಪರಿಸರ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು, ಆಸಕ್ತ ನಾಗರಿಕರನ್ನು ಒಳಗೊಂಡಂತೆ ಹಾಗೂ ಸ್ಥಳಿಯ ಸರ್ಕಾರೇತರ ಸಂಘ ಸಂಸ್ಥೆಗಳ ಪ್ರತಿನಿಧಿಗಳನ್ನೊಳಗೊಂಡ ಕಾರ್ಯಪಡೆಗಳನ್ನು ರಚಿಸಿ ತಮ್ಮ ವ್ಯಾಪ್ತಿಯಲ್ಲಿನ ಎಲ್ಲಾ ಪಟಾಕಿ ಮಾರಾಟಗಾರರ ಗೋದಾಮುಗಳನ್ನು ಪರಿಶಿಲಿಸಬೇಕು. ಹಾಗೂ ಅಲ್ಲಿ ಹಸಿರು ಪಟಾಕಿಯಲ್ಲದೇ ಇನ್ನಾವುದಾದರೂ ನಿಷೇಧಿತ ಪಟಾಕಿಗಳನ್ನು ದಾಸ್ತಾನು ಮಾಡಿದ್ದಲ್ಲಿ ಇಡೀ ಗೋದಾಮನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು, ಹಾಗೂ ಸಂಬಂದಿಸಿದ ವ್ಯಕ್ತಿಗಳ ಮೇಲೆ ಕ್ರಿಮಿನಲ್ ಮೊಕªಮೆಯನ್ನು ಹೂಡುವಂತೆ ರಾಜ್ಯ ಪೌರಾಡಳಿತ ನಿರ್ದೇಶನಾಲಯ ಸುತ್ತೋಲೆಯಲ್ಲಿ ನಗರ ಸ್ಥಳಿಯ ಸಂಸ್ಥೆಗಳಿಗೆ ಆದೇಶಿಸಿದೆ.
ಕ್ಯೂಆರ್ ಕೋಡ್ ಇದ್ದರೆ ಮಾತ್ರ ಅದು ಹಸಿರು ಪಟಾಕಿ: ಎಲ್ಲಾ ಹಸಿರು ಪಟಾಕಿಗಳ ಮೇಲೆ ಹಾಗೂ ಅವುಗಳ ಪ್ಯಾಕೆಟ್ ಮೇಲೆ ಹಸಿರು ಪಟಾಕಿಯ ಚಿನ್ನೆಯಿರುತ್ತದೆ. ಹಾಗೂ ಕ್ಯೂಆರ್ ಕೋಡ್ ಇರುತ್ತದೆ. ಸದರಿ ಚಿಹ್ನೆಯ ಬಗ್ಗೆ ಸಂಬಂದಪಟ್ಟ ಜಿಲ್ಲೆಯ ಪರಿಸರ ಅಧಿಕಾರಿಗಳಿಂದ ಖಚಿತ ಪಡಿಸಿಕೊಳ್ಳುವುದು, ಸದರಿ ಚಿಹ್ನೆಯ ಇಲ್ಲದ ಯಾವುದೇ ಪಟಾಕಿ ಹಸಿರು ಪಟಾಕಿಯೆನಿಸುವುದಿಲ್ಲ ಮತ್ತು ಅವುಗಳನ್ನು ಕೂಡಲೇ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಸ್ಪಷ್ಟವಾಗಿ ಸೂಚಿಸಲಾಗಿದೆ.
– ಕಾಗತಿ ನಾಗರಾಜಪ್ಪ