ಮುಂಬಯಿ : ಕುಸಿದ ಕೈಗಾರಿಕಾ ಉತ್ಪಾದನೆ, ಹಣದುಬ್ಬರ ಹೆಚ್ಚಳದ ಭೀತಿ, ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಯಲ್ಲಿ ನಿರಂತರ ಏರಿಕೆ – ಇವೇ ಮೊದಲಾದ ಕಾರಣಗಳಿಗೆ ತೀವ್ರ ಮಾರಾಟ ಒತ್ತಡಕ್ಕೆ ಗುರಿಯಾದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಬುಧವಾರದ ವಹಿವಾಟನ್ನು 174.95 ಅಂಕಗಳ ನಷ್ಟದೊಂದಿಗೆ 33,053.04 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 47.20 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 10,193 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇಂದಿನ ವಹಿವಾಟಿನಲ್ಲಿ 944 ಶೇರುಗಳು ಮುನ್ನಡೆ ಸಾಧಿಸಿದವು; 1718 ಶೇರುಗಳು ಹಿನ್ನಡೆಗೆ ಗುರಿಯಾದವು; 150 ಶೇರುಗಳ ಧಾರಣೆಯಲ್ಲಿ ಯಾವುದೇ ಬದಲಾವಣೆ ಕಂಡು ಬರಲಿಲ್ಲ.
ಕೋಟಕ್ ಮಹೀಂದ್ರ ಬ್ಯಾಂಕ್, ಒಎನ್‌ಜಿಸಿ, ಎಚ್‌ಪಿಸಿಎಲ್, ಐಓಸಿ ಶೇರುಗಳು ಟಾಪ್ ಗೇನರ್ ಎನಿಸಿಕೊಂಡವು; ಬಿಎಚ್‌ಇಎಲ್, ಟಾಟಾ ಮೋಟರ್ ಡಿವಿಆರ್, ವೇದಾಂತ, ಸಿಪ್ಲಾ ಶೇರುಗಳು ಟಾಪ್ ಲೂಸರ್ ಎನಿಸಿಕೊಂಡವು.
ನಿನ್ನೆಯ ವಹಿವಾಟಿನಲ್ಲಿ ಸೆನ್ಸೆಕ್ಸ್ 227.80 ಅಂಕಗಳ ನಷ್ಟಕ್ಕೆ ಗುರಿಯಾಗಿತ್ತು. ಡಾಲರ್ ಎದುರು ಇಂದು ರೂಪಾಯಿ 16 ಪೈಸೆಯಷ್ಟು ಕುಸಿದು 64.56 ರೂ. ಮಟ್ಟಕ್ಕೆ ಇಳಿದದ್ದು ಕೂಡ ಮುಂಬಯಿ ಶೇರು ಪೇಟೆಗೆ ಹೊಡೆತವಾಯಿತು. ಏಶ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (ಎಡಿಬಿ) 2018ರ ಭಾರತದ ಜಿಡಿಪಿ ಅಂದಾಜನ್ನು ಶೇ.6.7ಕ್ಕೆ ಇಳಿಸಿರುವುದು ಮುಂಬಯಿ ಶೇರು ಪೇಟೆಗೆ ಆಘಾತಕಾರಿಯಾಯಿತು.