Advertisement

ಮಾದಕ ವಸ್ತು ಮಾರಾಟ: ನಿಗಾ ಇರಿಸಲು ಅಧಿಕಾರಿ ನೇಮಕ

11:01 PM Jul 05, 2019 | mahesh |

ಪುತ್ತೂರು: ಶಾಲಾ ಕಾಲೇಜು, ಹಾಸ್ಟೆಲ್ಗಳ ಪರಿಸರದಲ್ಲಿ ಮಾದಕ ವಸ್ತುಗಳ ಮಾರಾಟ ನಡೆಯುತ್ತಿರುವುದು, ಮಕ್ಕಳು ಬಲಿಯಾಗುತ್ತಿರುವುದು ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ ಪರಿಶೀಲನೆಗೆ ಒಬ್ಬ ಅಧಿಕಾರಿಯನ್ನು ನೇಮಕ ಮಾಡಲಾಗುತ್ತದೆ ಎಂದು ಪುತ್ತೂರು ಸಹಾಯಕ ಕಮಿಷನರ್‌ ಎಚ್.ಕೆ. ಕೃಷ್ಣಮೂರ್ತಿ ತಿಳಿಸಿದ್ದಾರೆ.

Advertisement

ಪುತ್ತೂರು ಉಪವಿಭಾಗದ ವಿದ್ಯಾ ಸಂಸ್ಥೆಗಳ ಸಂಚಾಲಕರು ಹಾಗೂ ಮುಖ್ಯ ಗುರುಗಳಿಗಾಗಿ ಶುಕ್ರವಾರ ನಡೆದ ಮಕ್ಕಳಲ್ಲಿ ಶಿಸ್ತು, ಕಾನೂನು ಪಾಲನೆಯ ಅರಿವು ನೀಡುವ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಅಧಿಕಾರಿ ವಿದ್ಯಾಸಂಸ್ಥೆಗಳಿಗೆ ಔಪಚಾರಿಕ ಭೇಟಿ ನೀಡುತ್ತಾರೆ. ಈ ಸಂದರ್ಭ ಸಮಸ್ಯೆಗಳಿದ್ದರೆ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ಸೂಚಿಸಿದ ಸಹಾಯಕ ಕಮಿಷನರ್‌, ಮಕ್ಕಳ ದೌರ್ಬಲ್ಯ ಮತ್ತು ಶಕ್ತಿಯನ್ನು ತಿಳಿದಿರುವ ಶಿಕ್ಷಕರು ಮಕ್ಕಳಿಗೆ ಅರಿವಿನ ಜತೆಗೆ ಎಚ್ಚರಿಕೆ ಕೊಡುವ ಕೆಲಸವನ್ನೂ ಮಾಡಬೇಕು ಎಂದರು.

ಮಾಹಿತಿ ನೀಡಿ
ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸುವ, ಆ ಮೂಲಕ ಜನತೆಯ ಶಾಂತಿಭಂಗ ಉಂಟು ಮಾಡುವ ಕೃತ್ಯಗಳ ವಿರುದ್ಧವೂ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ ಅವರು ಅಂತಹ ಘಟನೆಗಳು ಕಂಡುಬಂದರೆ ತತ್‌ಕ್ಷಣ ಮಾಹಿತಿ ನೀಡಿ. ಈ ಮಾಹಿತಿ ನೀಡಿದವರ ಹೆಸರನ್ನು ಗುಪ್ತವಾಗಿ ಇಡಲಾಗುತ್ತದೆ. ಈ ಕುರಿತು ಯಾವುದೇ ಅನುಮಾನ ಹಿಂಜರಿಕೆ ಬೇಡ ಎಂದವರು ತಿಳಿಸಿದರು.

ಸುಳ್ಯ ತಾಲೂಕಿನ ಎಲಿಮಲೆ ಶಾಲಾ ಮುಖ್ಯಗುರು ಚಂದ್ರಶೇಖರ್‌ ಪೇರಾಲು, ಫಿಲೋಮಿನಾ ಪ.ಪೂ. ಕಾಲೇಜಿನ ಹರ್ಷ ಮೊದಲಾದವರು ಸಮಸ್ಯೆಗಳ ಕುರಿತು ಸಭೆಯ ಗಮನಸೆಳೆದರು.

Advertisement

ಕಡಬ ತಹಶೀಲ್ದಾರ್‌ ಜಾನ್‌ ಪ್ರಕಾಶ್‌, ಬೆಳ್ತಂಗಡಿ ತಹಶೀಲ್ದಾರ್‌ ಗಣಪತಿ ಶಾಸ್ತ್ರಿ, ಸುಳ್ಯ ತಹಶೀಲ್ದಾರ್‌ ಕುಂಞ ಅಹಮ್ಮದ್‌, ನಗರ ಠಾಣಾ ಇನ್ಸ್‌ಪೆಕ್ಟರ್‌ ತಿಮ್ಮಪ್ಪ ನಾಯ್ಕ, ಸುಳ್ಯ ವೃತ್ತ ನಿರೀಕ್ಷಕ ಸತೀಶ್‌ ಕುಮಾರ್‌, ಸುಳ್ಯ ಪ್ರೊಬೆಷನರಿ ಎಸ್‌ಐ ಶಿವಾನಂದ ಎಚ್. ಉಪಸ್ಥಿತರಿದ್ದರು. ಪುತ್ತೂರು ತಹಶೀಲ್ದಾರ್‌ ಅನಂತಶಂಕರ್‌ ಸ್ವಾಗತಿಸಿ, ವಂದಿಸಿದರು.

ತಿದ್ದುವ ಕೆಲಸ ಆಗಲಿ
ಡಿವೈಎಸ್ಪಿ ದಿನಕರ್‌ ಶೆಟ್ಟಿ ಮಾತನಾಡಿ, ಅಪರಾಧಿಗೆ ಶಿಕ್ಷೆ ಕೊಡುವುದು ಮುಖ್ಯವಲ್ಲ. ಅಪರಾಧ ತಡೆಗಟ್ಟುವುದು ಅತೀ ಮುಖ್ಯ. ಶಿಕ್ಷಕರು ಮನೋವಿಜ್ಞಾನಿಗಳು. ಅವರಿಗೆ ಮಕ್ಕಳಲ್ಲಿ ಅಪರಾಧ ಮನೋಭಾವ ಕಂಡು ಬಂದ ತತ್‌ಕ್ಷಣ ಅವರನ್ನು ತಿದ್ದುವ ಕೆಲಸ ಮಾಡಬೇಕು ಎಂದರು. ಇಂದು ಮೊಬೈಲ್ ಇದ್ದವರು ತಮ್ಮ ಖಾಸಗಿ ಬದುಕನ್ನೇ ಕಳೆದುಕೊಂಡಿದ್ದಾರೆ. ನಮ್ಮ ಅಧಃಪತನವನ್ನು ನಾವೇ ತಂದು ಕೊಳ್ಳುವಂತೆ ಆಗಬಾರದು ಎಂದರು.

ಮೊಬೈಲ್‌ ಅಂಗಡಿ ಮಾಲಕರ ವಿರುದ್ಧ ಕ್ರಮ
ಮಕ್ಕಳ ಮೊಬೈಲ್ ಇಡಲು ಶಾಲಾ ಕಾಲೇಜುಗಳಲ್ಲಿ ವ್ಯವಸ್ಥೆ ಮಾಡ ಬೇಕು. ಶಾಲೆ- ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳು ವಿದ್ಯಾ ಸಂಸ್ಥೆಗಳ ಸಮೀಪದಲ್ಲಿರುವ ಅಂಗಡಿ ಗಳಲ್ಲಿ ಮೊಬೈಲ್ಗಳನ್ನು ಇಟ್ಟರೆ ಅದನ್ನು ವಶಕ್ಕೆ ಪಡೆದು ಅಂಗಡಿ ಮಾಲಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಎ.ಸಿ. ಎಚ್. ಕೆ. ಕೃಷ್ಣಮೂರ್ತಿ ಅವರು ಪೊಲೀಸರಿಗೆ ಸೂಚಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next