Advertisement

ಇನ್ನು ಫ್ಲಿಪ್‌ಕಾರ್ಟ್‌ನಲ್ಲೂ ಭರ್ಜರಿ ದಿನಸಿ ವಸ್ತು ಮಾರಾಟ

10:06 AM Oct 16, 2019 | Team Udayavani |

ಮುಂಬಯಿ: ಆನ್‌ಲೈನ್‌ ಮಾರಾಟ ತಾಣದ ಪ್ರಮುಖ ಕಂಪೆನಿ, ಅಮೆರಿಕದ ದೈತ್ಯ ವಾಲ್‌ಮಾರ್ಟ್‌ ಒಡೆತನದ ಫ್ಲಿಪ್‌ಕಾಟ್‌ ಈಗ ಭಾರತದಲ್ಲಿ ದಿನಸಿ ಮತ್ತು ಆಹಾರ ವಸ್ತುಗಳ ಮಾರಾಟದ ವಿಸ್ತರಣೆಗೆ ಮುಂದಾಗಿದ್ದು ಪ್ರತ್ಯೇಕ ಘಟಕಗಳನ್ನು ಸ್ಥಾಪಿಸಲು ಉದ್ದೇಶಿಸಿದೆ.

Advertisement

ಇದಕ್ಕಾಗಿ ಅದು 2 ಸಾವಿರ ಕೋಟಿ ರೂ. ಹೂಡಿಕೆಗೆ ಮುಂದಾಗಿದೆ. ವಿದೇಶಿ ನೇರ ಬಂಡವಾಳ ಹೂಡಿಕೆಯನ್ವಯ ಭಾರತದಲ್ಲಿ ಈ ಹೂಡಿಕೆ ಮಾಡಲಾಗುವುದು ಎಂದು ಅದು ಹೇಳಿದೆ.

ಇನ್ನೊಂದು ಅಂತರ್ಜಾಲ ಮಾರಾಟ ತಾಣ ಅಮೆಝಾನ್‌ 2017ರಲ್ಲಿ ಭಾರತದಲ್ಲಿ ದಿನಸಿ ವಸ್ತುಗಳ ಮಾರಾಟಕ್ಕೆ ಮುಂದಾಗಿದ್ದು, 400 ಕೋಟಿ ರೂ.ಗಳಿಗೂ ಹೆಚ್ಚು ಹೂಡಿಕೆಯನ್ನು ಮಾಡಿಕೊಳ್ಳಲು ಕೇಂದ್ರ ಸರಕಾರದಿಂದ ಅನುಮತಿಯನ್ನು ಪಡೆದಿತ್ತು.

ಭಾರತದಲ್ಲಿ ಆಹಾರ ಮತ್ತು ದಿನಸಿ ಮಾರಾಟ ಅತಿದೊಡ್ಡ ವಲಯವಾಗಿದ್ದು ದೈತ್ಯ ಕಂಪೆನಿಗಳು ಇದರತ್ತ ದೃಷ್ಟಿ ನೆಟ್ಟಿವೆ. ಈಗಾಗಲೇ ಮೆಟ್ರೋ, ಬಿಗ್‌ಬಝಾರ್‌, ಮೋರ್‌, ಸ್ಪಾರ್‌ ಇತ್ಯಾದಿಗಳು ವಿವಿಧ ಪುಟ್ಟ ನಗರಗಳಿಗೂ ತಮ್ಮ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡಿವೆ. ಇದರೊಂದಿಗೆ ಅಮೆಝಾನ್‌ ಮತ್ತು ಫ್ಲಿಪ್‌ಕಾರ್ಟ್‌ ಆನ್‌ಲೈನ್‌ ಮಾರಾಟಕ್ಕೆ ಮುಂದಾಗಿದ್ದು, ಬಿಗ್‌ಬಾಸ್ಕೆಟ್‌, ಗ್ರೋಫ‌ರ್ ಇತ್ಯಾದಿಗಳಿಗೆ ಪೈಪೋಟಿ ಒಡ್ಡಲಿವೆ.

2018-19ರಲ್ಲಿ ಭಾರತದ ಆನ್‌ಲೈನ್‌ ದಿನಸಿ ಮಾರುಕಟ್ಟೆ 270 ಕೋಟಿ ರೂ. ತಲುಪುವ ನಿರೀಕ್ಷೆ ಇದೆ. ಅಮೆರಿಕದಲ್ಲಿ ವಾಲ್‌ಮಾರ್ಟ್‌ನ ದಿನಸಿ ಮಾರಾಟದ ಅನುಭವವನ್ನು ಭಾರತದಲ್ಲೂ ಬಳಸಿಕೊಳ್ಳಲು ಫ್ಲಿಪ್‌ಕಾರ್ಟ್‌ ನಿರ್ಧರಿಸಿದೆ. ಅಲ್ಲದೇ ವಾಲ್‌ಮಾರ್ಟ್‌ ಈಗಾಗಲೇ ಭಾರತದಲ್ಲಿ ಕ್ಯಾಶ್‌ ಆ್ಯಂಡ್‌ ಕ್ಯಾರಿ ವ್ಯವಸ್ಥೆ ಮತ್ತು ರೈತರಿಂದಲೇ ನೇರ ಬೆಳೆಗಳ ಖರೀದಿಯನ್ನು ಮಾಡುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next