Advertisement

ನಗರ ವ್ಯಾಪ್ತಿಯಲ್ಲಿ ಮಾದಕ ವಸ್ತು ಮಾರಾಟ

10:50 AM Nov 23, 2017 | |

ಕೊಕೇನ್‌ ಮಾರುತ್ತಿದ್ದ ನೈಜಿರಿಯಾ ಪ್ರಜೆ ಬಂಧನ
ಬೆಂಗಳೂರು: ಕೆ.ಆರ್‌.ಪುರದ ರಿಲಾಯನ್ಸ್‌ ಫ್ರೆಶ್‌ ಮಾಲ್‌ ಮುಂಭಾಗ ಮಾದಕ ವಸ್ತು ಕೊಕೇನ್‌ ಮಾರಾಟ ಮಾಡಲು ಯತ್ನಿಸುತ್ತಿದ್ದ ನೈಜಿರಿಯಾ ಪ್ರಜೆಯೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕಿನೀತ್‌ ನೌಬನ್‌ವೇನ್‌ (24)
ಬಂಧಿತ. ಈತನಿಂದ 30 ಸಾವಿರ ರೂ. ಮೌಲ್ಯದ 5 ಗ್ರಾಂ ಕೋಕೇನ್‌, ಒಂದು ಮೊಬೈಲ್‌, 1,500 ನಗದು ವಶಪಡಿಸಿಕೊಳ್ಳಲಾಗಿದೆ.

Advertisement

 ಕೆ.ಆರ್‌.ಪುರ. ಪೊಲೀಸ್‌ ಠಾಣೆ ವ್ಯಾಪ್ತಿಯ ರಿಲಾಯನ್ಸ್‌ ಫ್ರೆಶ್‌ ಮಾಲ್‌ ಮುಂಭಾಗ ಆರೋಪಿಯು ಕೊಕೇನ್‌ ಮಾರಾಟ ಮಾಡಲು ಯತ್ನಿಸುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದು ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ನೈಜಿರಿಯಾದಿಂದಲೇ ವಿಮಾನದ ಮೂಲದ ಮಾದಕ ವಸ್ತು ತರಿಸುತ್ತಿದ್ದ ಎಂಬ ಮಾಹಿತಿಯಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ. ಆರೋಪಿಯು ವೀಸಾ ನಿಯಮ ಉಲ್ಲಂಗಿಸಿ ಮಾದಕ ವಸ್ತು ಮಾರಾಟದಲ್ಲಿ ತೊಡಗಿರುವುದು ಬೆಳಕಿಗೆ ಬಂದಿದೆ. ಆರೋಪಿ ವಿರುದ್ಧ ಕೆ.ಆರ್‌.ಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ

ನಕಲಿ ಪತ್ರಕರ್ತ ಸೇರಿ ಆರು ಜನರ ಬಂಧನ
ಬೆಂಗಳೂರು: ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ನಕಲಿ ಪತ್ರಕರ್ತ ಸೇರಿ ಆರು ಮಂದಿಯನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮುದ್ದಿನಪಾಳ್ಯದ ಭವಾನಿನಗರದ ನಿವಾಸಿ ನಕಲಿ ಪತ್ರಕರ್ತ ಜಿ.ಕಿರಣ್‌ (29), ಮಂಗನ ಹಳ್ಳಿಯ ಎನ್‌.ಹೇಮಂತ್‌ (24), ಜ್ಞಾನಭಾರತಿ ಮಹದೇವ (23), ಮಲ್ಲತ್ತಹಳ್ಳಿಯ ರೋಹನ್‌ (21), ಬಿಡಿಎ ಲೇಔಟ್‌ ಶರತ್‌ (22) ಹಾಗೂ ಪದ್ಮನಾಭ್‌ (23) ಬಂಧಿತರು. ಆರೋಪಿಗಳಿಂದ 3 ಕೆ.ಜಿ ಗಾಂಜಾ ನಗದು ಹಣ ಸೇರಿ 75 ಸಾವಿರ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 

ಭವಾನಿ ನಗರದ ಮನೆ ಹತ್ತಿರ ಶ್ವಾನ ಸಾಕಣೆ ಕೇಂದ್ರ ಹೊಂದಿರುವ ಕಿರಣ್‌, ಖಾಸಗಿ ಸುದ್ದಿ ವಾಹಿನಿ ವರದಿಗಾರ ಎಂದು ನಕಲಿ ಗುರುತಿನ ಚೀಟಿ ಸೃಷ್ಟಿಸಿಕೊಂಡು ಗಾಂಜಾ ದಂಧೆಯಲ್ಲಿ ರಕ್ಷಣೆ ಪಡೆಯಲು ಯತ್ನಿಸಿದ್ದ. ಇನ್ನು ಹೇಮಂತ್‌ ಆಟೋ ಚಾಲಕನಾಗಿದ್ದರೆ, ಖಾಸಗಿ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ರೋಹನ್‌ ವ್ಯಾಸಂಗ ಮಾಡುತ್ತಿದ್ದಾನೆ. ಉಳಿದ ಆರೋಪಿಗಳು ತರಕಾರಿ ವ್ಯಾಪಾರ ಮಾಡುತ್ತಾರೆ. ಈ ಆರೋಪಿಗಳೆಲ್ಲ ಹಳೆ ಸ್ನೇಹಿತರಾಗಿದ್ದು, ಮೋಜಿನ ಜೀವನಕ್ಕಾಗಿ ಗಾಂಜಾ ಮಾರಾಟ ದಂಧೆಗಿಳಿದಿದ್ದರು. ಮಾಗಡಿ ಪಟ್ಟಣದಲ್ಲಿ ವ್ಯಕ್ತಿಯಿಂದ ಗಾಂಜಾ ಖರೀದಿಸುತ್ತಿದ್ದ ಆರೋಪಿಗಳು, ಇವುಗಳನ್ನು ಗ್ರಾಂಗಳ ಲೆಕ್ಕದಲ್ಲಿ ಚಿಕ್ಕ ಚಿಕ್ಕ ಪ್ಯಾಕೆಟ್‌ಗಳನ್ನು ಮಾಡಿ ಜ್ಞಾನಭಾರತಿ ಸುತ್ತಲ ಪ್ರದೇಶದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಜೈಲಿಗೆ ಗಾಂಜಾ ಸರಬರಾಜು 
ಬೆಂಗಳೂರು: ಜೈಲಿನೊಳಗೆ ಅಕ್ರಮವಾಗಿ ಗಾಂಜಾ ಸರಬರಾಜು ಮಾಡುತ್ತಿದ್ದ ಆರೋಪಿಯನ್ನು ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ. ಪುಟ್ಟೇನಹಳ್ಳಿಯ ನಿವಾಸಿ ವಾಸುದೇವ್‌ (22) ಬಂಧಿತ. ಈತನಿಂದ 300
ಗ್ರಾಂ ಗಾಂಜಾ ಜಪ್ತೀ ಮಾಡಲಾಗಿದೆ. ಕೊಲೆಯೊಂದರ ಆರೋಪದ ಮೇಲೆ ಈತನ ನಾಲ್ವರು ಸಹಚರರು
ಜೈಲಿನಲ್ಲಿದ್ದಾರೆ. ಇವರನ್ನು ನೋಡುವ ಸಲುವಾಗಿ ಮಂಗಳವಾರ ಪರಪ್ಪನ ಅಗ್ರಹಾರ ಜೈಲಿನ ಸಂದರ್ಶನ ಕೊಠಡಿಗೆ ಆರೋಪಿ ಬಂದಿದ್ದ. ಜೈಲು ಸಿಬ್ಬಂದಿ ತಪಾಸಣೆ ನಡೆಸಿದ ವೇಳೆ ಈತ ತಂದಿದ್ದ ಊಟದ ಡಬ್ಬಿಯಲ್ಲಿ
ಗಾಂಜಾ ಇರುವುದು ಪತ್ತೆಯಾಗಿದೆ. ವಶಕ್ಕೆ ಪಡೆದ ಜೈಲು ಸಿಬ್ಬಂದಿ ಪರಪ್ಪನ ಅಗ್ರಹಾರ ಠಾಣೆ ಪೊಲೀಸರಿಗೆ
ಒಪ್ಪಿಸಿದ್ದಾರೆ. ಪೊಲೀಸ್‌ ವಿಚಾರಣೆ ವೇಳೆ ಜೈಲಿನಲ್ಲಿರುವ ಸಹಚರರಿಗೆ ನೀಡಲು ತಂದಿದ್ದಾಗಿ ಆರೋಪಿ ಬಾಯ್ಬಿಟ್ಟಿ ದ್ದಾನೆ. ಗಾಂಜಾ ಸರಬರಾಜು ಆರೋಪದಡಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು
ಪೊಲೀಸರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next