Advertisement
ಎ. 20ರ ತನಕ ನಡೆಯುವ ಜಾತ್ರೆ ಅಂಗವಾಗಿ ಅಂಗಡಿ ಮಳಿಗೆಗಳು ತೆರೆದು ಕೊಳ್ಳುತ್ತಿವೆ. ಎ. 10ರಿಂದ 20ರ ತನಕ ವ್ಯಾಪಾರ ನಡೆಸಲು ಈ ತಾತ್ಕಾಲಿಕ ಅಂಗಡಿ ಮಾಲಕರಿಗೆ ದೇವಾಲಯದ ಭಂಡಾರದ ಹಕ್ಕಿನ ಸ್ಥಳವನ್ನು ಏಲಂ ಮೂಲಕ ನೀಡಲಾಗಿದೆ. ಜಾತ್ರಾ ಗದ್ದೆಯಲ್ಲಿ 200 ಕ್ಕೂ ಹೆಚ್ಚು ಅಂಗಡಿ ಮಳಿಗೆಗಳು, ಮನರಂಜನ ವ್ಯವಸ್ಥೆಗಳು ತೆರೆದುಕೊಳ್ಳಲಿವೆ.
ಅಂಗಡಿಯ ಸ್ಥಳವನ್ನು ಏಲಂನಲ್ಲಿ ಪಡೆದುಕೊಂಡಿರುವ ವ್ಯಾಪಾರಿಗಳು ಜಾತ್ರಾ ವ್ಯಾಪಾರಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಎ. 16, 17, 18 ಮತ್ತು 19ರಂದು ಭರ್ಜರಿ ವ್ಯಾಪಾರ ನಡೆಯುವುದಾದರೂ ಅಂಗಡಿ ನಡೆಸುವ ಸ್ಥಳದ ಹಕ್ಕನ್ನು ಎ. 10ರಿಂದಲೇ ಏಲಂನಲ್ಲಿ ಪಡೆದು ಕೊಂಡವರಿಗೆ ನೀಡಲಾಗುತ್ತಿದೆ. ಪ್ಲಾಸ್ಟಿಕ್ ಸಾಮಾಗ್ರಿ, ಚಪ್ಪಲಿ ವ್ಯಾಪಾರ, ಮಣಿ ಸರಕಿನ ವ್ಯಾಪಾರ ಮಳಿಗೆಗಳು ಒಂದೊಂದೇ ಆರಂಭವಾಗುತ್ತಿವೆ. ಚರುಂಬುರಿ, ಬೇಲ್‌ಪುರಿ, ಕಬ್ಬಿನ ಹಾಲು ಮಾರಾಟ ಮಳಿಗೆಗಳು ಎ. 10 ರಿಂದಲೇ ತಮ್ಮ ವ್ಯಾಪಾರ ಆರಂಭಿಸಿವೆ. ಮಕ್ಕಳ ಮನರಂಜನೆಯ ಜಾಯಿಂಟ್ ವೀಲ್, ಪುಟಾಣಿ ರೈಲು, ಟೊರೆಂಟೊರೋ ಮೊದಲಾದ ವ್ಯವಸ್ಥೆಗಳು ಸಿದ್ಧಗೊಳ್ಳುತ್ತಿವೆ. ಹಿಂದೆ ಜಾತ್ರೆ ಗದ್ದೆಯಲ್ಲಿ ಬಾಯಾರಿದರೆ ಗೋಳಿ ಸೋಡಾ, ಗೋಳಿ ಸೋಡಾ ಶರಬತ್ತು, ಕಲ್ಲಂಗಡಿ ಹಣ್ಣಿನ ಶರಬತ್ತು, ಬೆಲ್ಲ ಮತ್ತು ಸಜ್ಜಿಗೆ ಹಾಕಿ ತಯಾರಿಸಿದ ಸಿಹಿ ಪಾನೀಯ – ಸೋಜಿ ಸಿಗುತ್ತಿತ್ತು. ಇಂದಿನ ಜಾತ್ರೆಯಲ್ಲಿ ಅವೆಲ್ಲಾ ಮರೆಯಾಗಿ ರುಮಾಲಿ ರೋಟಿ, ವಿವಿಧ ಕಂಪೆನಿಗಳ ಐಸ್‌ಕ್ರೀಮ್‌ಗಳು, ತಂಪು ಪಾನೀಯಗಳು, ಹಣ್ಣಿನ ಜ್ಯೂಸ್‌ಗಳು, ಗೋಬಿಮಂಚೂರಿ, ಚಾಟ್ಸ್, ಚರಂಬುರಿ ಹೀಗೆ ಸಂತೆಯ ಆಹಾರ ಮಾರಾಟ ವ್ಯವಸ್ಥೆಯಲ್ಲಿ ಕೂಡ ಬದಲಾಗಿದೆ.
Related Articles
ರಥದ ಮೇಲೆ ವಿದ್ಯುದ್ದೀಪದ ಬೆಳಕು, ರಥವನ್ನು ವಿದ್ಯುದ್ದೀಪಗಳಿಂದ ಶೃಂಗಾರ, ಜಾತ್ರೆಗದ್ದೆಯುದ್ದಕ್ಕೂ ಅಲ್ಲಲ್ಲಿ
ವಿದ್ಯುತ್ ದೀಪಗಳ ವ್ಯವಸ್ಥೆ, ಜಾತ್ರೆ ಗದ್ದೆಯ ಸಂತೆಯಲ್ಲಿ ಅಂಗಡಿಗಳಲ್ಲೂ ವಿದ್ಯುದ್ದೀಪದ ವ್ಯವಸ್ಥೆ, ಯಕ್ಷಗಾನ ಮೇಳಗಳ ಪ್ರದರ್ಶನ ದಶಕದ ಹಿಂದಿನ ವ್ಯವಸ್ಥೆಯಾದರೆ ಇಂದು ಜೈಂಟ್ ವೀಲುಗಳು, ಮಕ್ಕಳ ಪುಟಾಣಿ ರೈಲುಗಳು ಹೀಗೆ ವಾಣಿಜ್ಯ ಪ್ರದರ್ಶನ ರೀತಿಯಲ್ಲಿ ಜಾತ್ರೆ ಗದ್ದೆಯಲ್ಲಿ ವಾಣಿಜ್ಯ ಮಳಿಗೆಗಳು ತೆರೆದುಕೊಳ್ಳುತ್ತಿವೆ.
Advertisement