ಬೆಂಗಳೂರು: ಬಾಲಿವುಡ್ ನಟಿ ಸನ್ನಿ ಲಿಯೋನ್ ಅವರ ಹೊಸ ವರ್ಷದ ಕಾರ್ಯಕ್ರಮಕ್ಕೆ ಪೊಲೀಸರೇ ಅನುಮತಿ ನಿರಾಕರಿಸಿದ್ದರೂ, ಕಾರ್ಯಕ್ರಮ ಆಯೋಜಕರು ಇನ್ನೂ ಸನ್ನಿ ನೈಟ್ಸ್ ಶೋಗಾಗಿ ಟಿಕೆಟ್ ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ.
ಇದಷ್ಟೇ ಅಲ್ಲ, ಈ ಕಾರ್ಯಕ್ರಮ ವಿವಾದ ಸದ್ಯ ಹೈಕೋರ್ಟ್ ಅಂಗಳದಲ್ಲಿದ್ದು, ಅದು ಸರ್ಕಾರದ ನಿಲುವಿನ ಬಗ್ಗೆ ಸ್ಪಷ್ಟನೆ ಕೇಳಿದೆ. ಇದಕ್ಕೆ 25ರ ವರೆಗೆ ಸಮಯವನ್ನೂ ನೀಡಿದ್ದು ಈ ನಡುವೆಯೇ ಟಿಕೆಟ್ ಮಾರಾಟ ಮಾಡುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ. ಸದ್ಯ ವೆಬ್‌ಸೈಟ್‌ವೊಂದರ ಮುಖಾಂತರ ಆಯೋಜಕರು 2999 ರಿಂದ 7999ರ ವರೆಗೆ ವಿವಿಧ ಶ್ರೇಣಿಯ ಟಿಕೆಟ್ ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ಪೊಲೀಸರನ್ನು ಸಂಪರ್ಕಿಸಿದಾಗ, ಟಿಕೆಟ್ ಮಾರಾಟದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಜತೆಗೆ ಒಮ್ಮೆ ಬುಕ್ ಮಾಡಿದರೆ ಮತ್ತೆ ರದ್ದು ಪಡಿಸುವುದಾಗಲಿ, ಹಣ ಹಿಂಪಾವತಿಯಾಗಲಿ ಅವಕಾಶವಿಲ್ಲ ಎಂದು ನಿಬಂಧನೆಗಳನ್ನು ಕೂಡ ಹಾಕಿದ್ದಾರೆ. ಹೀಗಾಗಿ ಒಂದು ವೇಳೆ ಸನ್ನಿ ಲಿಯೋನ್ ಕಾರ್ಯಕ್ರಮ ರದ್ದಾದರೆ ಮುಂದೇನು ಎಂಬ ಪ್ರಶ್ನೆಗಳೂ ಎದ್ದಿವೆ. ಈ ನಡುವೆ ನಟಿ ಸನ್ನಿಲಿಯೋನ್ ಅನ್ನು ನಗರಕ್ಕೆ ಕರೆಸಲು ಪಟ್ಟು ಹಿಡಿದಿರುವ ದಿ ಟೈಮ್ಸ್ ಕ್ರಿಯೇಷನ್ಸ್ ಸಂಸ್ಥೆ ಹೈಕೋರ್ಟ್ ಮೊರೆ ಹೋಗಿದ್ದು, ಡಿ.25ರೊಳಗೆ ಪೊಲೀಸರು ಆಕ್ಷೇಪಿಸಿರುವ ವಿಷಯಗಳಿಗೆ ಕಾರ್ಯಕ್ರಮ ಆಯೋಜಕರು ಸ್ಪಷ್ಟನೆ ನೀಡಬೇಕು ಎಂದು ಸೂಚಿಸಿದೆ.
ಮತ್ತೂಂದೆಡೆ ನಟಿ ಸನ್ನಿಲಿಯೋನ್ ಕೂಡ ಖುದ್ದು ಸಾಮಾಜಿಕ ಜಾಲತಾಣ ಟ್ವಿಟರ್ ಮೂಲಕ ಪೊಲೀಸರು ಭದ್ರತೆ ನೀಡ ಹೊರತು ಕಾರ್ಯಕ್ರಮಕ್ಕೆ ಆಗಮಿಸುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಇತ್ತೀಚೆಗಷ್ಟೇ ಗೃಹ ಸಚಿವ ರಾಮಲಿಂಗಾರೆಡ್ಡಿ ಅವರು, ಸನ್ನಿ ಲಿಯೋನ್ ಕಾರ್ಯಕ್ರಮಕ್ಕೆ ಅನುಮತಿ ನೀಡುವ ಅಗತ್ಯವಿಲ್ಲ ಎಂದಿದ್ದರು. ಇಂಥ ಕಾರ್ಯಕ್ರಮಗಳು ನಮ್ಮ ಸಂಸ್ಕೃತಿಗೆ ಹೊಂದಿಕೊಳ್ಳುವುದಿಲ್ಲ ಎಂದೂ ಹೇಳಿದ್ದರು. ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಕೂಡ ಪೊಲೀಸ್ ಇಲಾಖೆಯ ಸೂಚನೆ ಹೊರತಾಗಿಯೂ ಸನ್ನಿ ಲಿಯೋನ್ ಅನ್ನು ಕಾರ್ಯಕ್ರಮ ನಡೆಸಿ ಗಲಾಟೆಯಾದರೆ ಆಯೋಜಕರೇ ಹೊಣೆಯಾಗುತ್ತಾರೆ ಎಚ್ಚರಿಕೆ ನೀಡಿದ್ದರು.
ಕಾರ್ಯಕ್ರಮಕ್ಕೆ ಸದ್ಯದ ಮಟ್ಟಿಗೆ ಒಪ್ಪಿಗೆ ಕೊಟ್ಟಿಲ್ಲ. ಆನ್‌ಲೈನ್‌ನಲ್ಲಿ ಟಿಕೆಟ್ ಮಾರಾಟ ಮಾಡುತ್ತಿರುವ ಬಗ್ಗೆ ನಮ್ಮ ಗಮನಕ್ಕೆ ಬಂದಿಲ್ಲ. ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕಾರ್ಯಕ್ರಮಕ್ಕೆ ಅನುಮತಿ ಕೊಡುವ ಬಗ್ಗೆ ಡಿ.25ರ ಒಳಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ.
● ಗಿರೀಶ್, ಈಶಾನ್ಯ ವಲಯ