Advertisement

ಮತದಾನೋತ್ತರ ಸಮೀಕ್ಷೆಗೆ ಮಾರುತ್ತರ

09:05 AM May 22, 2019 | Team Udayavani |

ವಿವಿಧ ವಾಹಿನಿಗಳು ನಡೆಸಿರುವ ಲೋಕಸಭಾ ಚುನಾವಣೆ ಮತದಾನೋತ್ತರ ಸಮೀಕ್ಷೆಗಳು ‘ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಬಹುಮತ ಸಿಗಲಿದ್ದು, ರಾಜ್ಯದಲ್ಲೂ ಬಿಜೆಪಿಗೆ ಉತ್ತಮ ಫ‌ಲಿತಾಂಶ ವ್ಯಕ್ತವಾಗಲಿದೆ’ ಎಂದು ಹೇಳಿವೆ. ಇದರ ಬೆನ್ನಲ್ಲೇ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಸೇರಿ ಹಲವು ಪಕ್ಷಗಳ ಮುಖಂಡರು ಸಮೀಕ್ಷೆಗಳ ಕುರಿತು ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮೇ 23ರ ಫ‌ಲಿತಾಂಶದ ಕುತೂಹಲದ ನಡುವೆಯೇ ಸಮೀಕ್ಷೆಗಳ ಕುರಿತಂತೆ ವ್ಯಕ್ತವಾದ ರಾಜಕೀಯ ಪ್ರಮುಖರ ಅನಿಸಿಕೆಗಳು ಇಲ್ಲಿವೆ…

Advertisement

23ರ ಬಳಿಕ ರಾಜಕಾರಣ ಚಿತ್ರಣ ಬದಲು
ಬೆಂಗಳೂರು: ‘ದೇಶದ ಬಹುತೇಕ ಮತದಾನೋತ್ತರ ಸಮೀಕ್ಷೆಗಳು ಬಿಜೆಪಿ ನೇತೃತ್ವದ ಎನ್‌ಡಿಎಗೆ ಬಹುಮತ ಬರಲಿದೆ ಎಂದೇ ಹೇಳಿವೆ. ರಾಜ್ಯದಲ್ಲೂ ಬಿಜೆಪಿ 22- 23 ಸ್ಥಾನ ಗೆಲ್ಲುವ ನಿರೀಕ್ಷೆ ಇಟ್ಟುಕೊಂಡಿದ್ದೇವೆ. ಮೇ 23ರ ನಂತರ ರಾಷ್ಟ್ರ ಹಾಗೂ ರಾಜ್ಯ ರಾಜಕೀಯ ಚಿತ್ರಣ ಬದಲಾಗಲಿದೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಸಮೀಕ್ಷೆಗಳನ್ನು ಕಂಡು ಕಾಂಗ್ರೆಸ್‌ ಹಿರಿಯ ನಾಯಕರು ಹತಾಶರಾಗಿದ್ದಾರೆ. ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರಿಗೆ ಹತಾಶ ಭಾವನೆ ಮೂಡಿದೆ. ಮತಗಟ್ಟೆ ಸಮೀಕ್ಷೆಗಳನ್ನು ರಾಜಕೀಯ ನಾಯಕರು ನಡೆಸಲು ಸಾಧ್ಯವಿದೆಯೇ’ ಎಂದು ಪ್ರಶ್ನಿಸಿದರು.

ಮೇ 23ರ ನಂತರ ಕೇಂದ್ರದಲ್ಲಿ ಮತ್ತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲಿದೆ. ಅದಕ್ಕಿಂತ ದೊಡ್ಡ ರಾಜಕೀಯ ಬದಲಾವಣೆ ಇನ್ನೇನು ಬೇಕು ಎಂದು ಯಡಿಯೂರಪ್ಪ ಹೇಳಿದರು.

ಕೇಂದ್ರದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ: ಶ್ರೀರಾಮುಲು
ಬಳ್ಳಾರಿ: ‘ಚುನಾವಣೋತ್ತರ ಸಮೀಕ್ಷೆಗಳೆಲ್ಲವೂ ಎನ್‌ಡಿಎ ಪರ ಇದ್ದು, ದೇಶದಲ್ಲಿ ಬಿಜೆಪಿ ಮತ್ತೂಮ್ಮೆ ಅಧಿಕಾರಕ್ಕೆ ಬರುವುದು ಖಚಿತ’ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ, ಮೊಳಕಾಲ್ಮೂರು ಶಾಸಕ ಬಿ.ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದರು.

Advertisement

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ಐದು ವರ್ಷಗಳಿಂದ ಕೇಂದ್ರದಲ್ಲಿ ಬಿಜೆಪಿ ಪ್ರಾಮಾಣಿಕವಾಗಿ ಅಧಿಕಾರ ನಡೆಸಿರುವುದರಿಂದ ದೇಶದ ಮತದಾರರು ಮತ್ತೂಮ್ಮೆ ಬಿಜೆಪಿಗೆ ಜೈಕಾರ ಹಾಕಿದ್ದಾರೆ. ಹೀಗಾಗಿ ಚುನಾವಣೋತ್ತರ ಸಮೀಕ್ಷೆಗಳೆಲ್ಲವೂ ಎನ್‌ಡಿಎ ಪರವಾಗಿ ಬಂದಿದ್ದು, ಮೈತ್ರಿಕೂಟ ರಚಿಸಿಕೊಂಡಿರುವ ಮಹಾಘಟಬಂಧನ್‌ಗೆ ಹಿನ್ನಡೆಯಾಗಿದೆ ಎಂದರು.

ರಾಜ್ಯದಲ್ಲೂ ಮೈತ್ರಿ ಸರ್ಕಾರ ಬದಲಾಗ ಬೇಕಿದೆ. ಯಡಿಯೂರಪ್ಪ ಮತ್ತೂಮ್ಮೆ ರಾಜ್ಯದ ಮುಖ್ಯಮಂತ್ರಿಯಾಗಬೇಕಿದೆ. ಭಾನುವಾರವಷ್ಟೇ ಉಪಚುನಾವಣೆ ನಡೆದ ಕುಂದಗೋಳ, ಚಿಂಚೋಳಿ ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಲಿದೆ ಎಂದರು. ಚುನಾವಣೋತ್ತರ ಸಮೀಕ್ಷೆಗಳಲ್ಲಿ ಕಾಂಗ್ರೆಸ್‌ಗೆ ವ್ಯತಿರಿಕ್ತ ಫಲಿತಾಂಶ ಬರಲು ಸೂಕ್ತ ನಾಯಕತ್ವ ಇಲ್ಲದಿರುವುದೇ ಕಾರಣ. ಇದರಿಂದ ಮಹಾಘಟಬಂಧನ್‌ಗೆ ಸರ್ಕಾರ ರಚಿಸಲು ಸಾಧ್ಯವಾಗಲ್ಲ ಎಂದರು.

ನೋಡ್ತಾ ಇರಿ, 24ಕ್ಕೆ ಸರ್ಕಾರ ಬಿದ್ದೇ ಬೀಳುತ್ತೆ
ಕಲಬುರಗಿ: ‘
ಚಿಂಚೋಳಿಯಲ್ಲಿ ಯಾವ ಪಕ್ಷದ ಶಾಸಕರು ಇರುತ್ತಾರೆಯೋ ಅದೇ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಇರುತ್ತದೆ ಎಂಬ ಇತಿಹಾಸ ನೋಡಿದರೆ ಮತ್ತೆ ಯಡಿಯೂರಪ್ಪ ಸಿಎಂ ಆಗಲೆಂದೇ ಚಿಂಚೋಳಿ ಕ್ಷೇತ್ರಕ್ಕೆ ಉಪ ಚುನಾವಣೆ ನಡೆದಿರುವುದು ಸನ್ನಿವೇಶ ಹಾಗೂ ಪರಿಸ್ಥಿತಿ ನಿರೂಪಿಸುತ್ತಿದೆ’ ಎಂದು ಮಾಜಿ ಶಾಸಕ ಡಾ.ಉಮೇಶ ಜಾಧವ್‌ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ‘ಕುಂದಗೋಳ ಹಾಗೂ ಚಿಂಚೋಳಿಯಲ್ಲಿ ಬಿಜೆಪಿ ಗೆಲ್ಲುವುದು ನಿಶ್ಚಿತ. 23ಕ್ಕೆ ಫ‌ಲಿ ತಾಂಶ ಬರುತ್ತೆ. 24ಕ್ಕೆ ರಾಜ್ಯ ಸರ್ಕಾರ ಬೀಳುತ್ತೆ, ನೋಡ್ತಾ ಇರಿ ಯಡಿಯೂರಪ್ಪ ಸಿಎಂ ಆಗ್ತಾರೆ. ಮತಗಟ್ಟೆ ಸಮೀಕ್ಷೆಗಳು ಸಂಪೂರ್ಣ ನಿಜ. ದೇಶದಲ್ಲಿ ಮತ್ತೂಮ್ಮೆ ಮೋದಿ ಪ್ರಧಾನಿ ಆಗುವುದು ನಿಶ್ಚಿತ’ ಎಂದರು.

ಸಮೀಕ್ಷೆಗಿಂತ ಮುಂಚೆಯೇ ಕೇಂದ್ರದಲ್ಲಿ ಮತ್ತೆ ಎನ್‌ಡಿಎ ಅಧಿಕಾರಕ್ಕೆ ಬರುತ್ತದೆ ಎಂದು ಹೇಳ ಲಾಗಿತ್ತು. ಈಗ ಅದು ನಿಜವಾಗುತ್ತಿದೆ. ಕಲಬುರಗಿಯಲ್ಲಿ ಮಲ್ಲಿ ಕಾರ್ಜುನ ಖರ್ಗೆ ಸುಳ್ಳಿನ ಕೋಟೆ ಛಿದ್ರವಾಗಲಿದೆ. ಖರ್ಗೆ ಸೋತು ಮನೆಗೆ ಹೋಗಲಿದ್ದಾರೆ. ಇದುವರೆಗೂ ಹೊಂದಾಣಿಕೆ ರಾಜಕಾರಣ ದಿಂದ ಚುನಾವಣೆಯಲ್ಲಿ ಗೆಲ್ಲುತ್ತಿದ್ದರು. ಆದರೆ ಇದೇ ಸಲ ತಮ್ಮ ವಿರುದ್ಧ ನಿಜವಾದ ಚುನಾವಣೆ ಎದುರಿಸಿದ್ದಾರೆ ಎಂದರು.

ಸಮೀಕ್ಷೆಗಳು ಸತ್ಯವಾಗಿಲ್ಲ: ಎಂಬಿಪಿ
ವಿಜಯಪುರ: ‘ಮತದಾನೋತ್ತರ ಸಮೀಕ್ಷೆ ಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿ ಎನ್‌ಡಿಎ ಅಧಿಕಾರಕ್ಕೆ ಬರುತ್ತದೆ ಎಂಬುದು ಸತ್ಯಕ್ಕೆ ದೂರವಾದ ಕಲ್ಪನೆ ಅಷ್ಟೇ. ಬದಲಾಗಿ ಕಾಂಗ್ರೆಸ್‌ ಪಕ್ಷ 250ಕ್ಕೂ ಹೆಚ್ಚು ಸ್ಥಾನ ಗಳಿಸಿ ಕೇಂದ್ರದಲ್ಲಿ ಯುಪಿಎ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂಬುದೇ ಸತ್ಯ. ಮೇ 23ರಂದು ಸತ್ಯ ಬಯಲಿಗೆ ಬರಲಿದೆ’ ಎಂದು ಗೃಹ ಸಚಿವ ಡಾ| ಎಂ.ಬಿ. ಪಾಟೀಲ ಹೇಳಿದ್ದಾರೆ.

ಸೋಮವಾರ ಸುದ್ದಿಗಾರರ ಜತೆ ಮಾತನಾಡಿ, ‘ಈ ಹಿಂದೆ ಇಂಥ ಸಮೀಕ್ಷೆಗಳೆಲ್ಲ ತಲೆ ಕೆಳಗಾಗಿವೆ. ಸಮೀಕ್ಷೆಗಳಲ್ಲಿ ಸಂಗ್ರಹಿಸಿದ್ದು ಕೆಲವೇ ಕೆಲವು ಮತದಾರರ ಭಾವ ನೆಯೇ ಹೊರತು ಇಡೀ ಕ್ಷೇತ್ರದ ಜನತೆಯ ಅಶಯವಾಗಿರುವುದಿಲ್ಲ.

ಇದನ್ನೇ ನಂಬಿ ಬಿಜೆಪಿ ಈಗಲೇ ಸಂಭ್ರಮಾಚರಣೆಯಲ್ಲಿ ತೊಡಗಿದರೆ 23ರಂದು ನಿರಾಸೆ ಅನುಭವಿಸುವ ಜೊತೆಗೆ ಮುಜುಗರಕ್ಕೆ ಈಡಾಗಬೇಕಾದೀತು. ಇದರ ಹೊರತಾಗಿಯೂ ಸಮೀಕ್ಷೆಗಳಂತೆ ಎನ್‌ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದಲ್ಲಿ ಜನಾದೇಶಕ್ಕೆ ನಾವೆಲ್ಲ ತಲೆ ಬಾಗಲೇಬೇಕು’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next