ಬೆಂಗಳೂರು: ರಾಜ್ಯದಲ್ಲಿ ಸ್ಥಿರ ಸರಕಾರ ಹಾಗೂ ಸದೃಢ ನಾಯಕತ್ವ ಕೊಡುವ ಶಕ್ತಿ ಬಿಜೆಪಿಗೆ ಮಾತ್ರ ಇದೆ. ಸ್ವಾರ್ಥ ರಾಜಕಾರಣ ಮಾಡುವ ಜಗಳಗಂಟ ಸಮ್ಮಿಶ್ರ ಸರಕಾರಗಳಿಂದ ರಾಜ್ಯಕ್ಕೆ ಒಳ್ಳೆಯದಾಗಿಲ್ಲ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ಬೆಂಗಳೂರಿನಲ್ಲಿ ಮಂಗಳವಾರ ರಾಜರಾಜೇಶ್ವರಿ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ವಕೀಲರೊಂದಿಗೆ ಸಂವಾದ ನಡೆಸಿದ ಅವರು, ಬೆಂಗಳೂರು ಮತ್ತು ರಾಜ್ಯದ ಸಮಗ್ರ ಅಭಿವೃದ್ಧಿಗೆ ಕಳೆದ ಒಂದು ವರ್ಷದಲ್ಲಿ ಬಹಳಷ್ಟು ವೇಗ ಸಿಕ್ಕಿದೆ ಎಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಸರಕಾರ ಎಲ್ಲ ಕ್ಷೇತ್ರಗಳಲ್ಲೂ ಉತ್ತಮವಾಗಿ ಕೆಲಸ ಮಾಡಿದೆ ಎಂದರು.
ಸಮ್ಮಿಶ್ರ ಸರಕಾರ ಇದ್ದಾಗ ರಾಜ್ಯದಲ್ಲಿ ರಾಜಕೀಯ ಮತ್ತು ನಾಯಕತ್ವದ ಶೂನ್ಯತೆ ಉಂಟಾಗಿತ್ತು. ಆದರೆ, ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಸುಧಾರಣೆಗಳ ಪರ್ವವೇ ಆರಂಭವಾಯಿತು. ಭೂ ಸುಧಾರಣೆ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ, ಕೈಗಾರಿಕಾ ಸ್ಥಾಪನೆಗೆ ಅಡ್ಡಿಗಳನ್ನು ನಿವಾರಿಸಿದ್ದು, ಕೌಶಲ್ಯಾಧಾರಿತ ಉದ್ಯೋಗ ಸೃಷ್ಟಿಗೆ ಒತ್ತು, ಶಿಕ್ಷಣ ಕ್ಷೇತ್ರದಲ್ಲಿ ಆಮೂಲಾಗ್ರ ಸುಧಾರಣೆ, ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಕ್ರಮ.. ಹೀಗೆ ಅನೇಕ ಸುಧಾರಣಾ ಹೆಜ್ಜೆಗಳನ್ನು ಇಡಲಾಗಿದೆ. ಈಗ ರಾಜ್ಯವೂ ಸರಿಯಾದ ದಿಕ್ಕಿನಲ್ಲಿ ಮುನ್ನೆಡೆಯುತ್ತಿದ್ದು, ಕೋವಿಡ್ ಸಂಕಷ್ಟದ ನಡುವೆಯೂ ಅಭಿವೃದ್ಧಿಪಥದಲ್ಲಿ ಸಾಗುತ್ತಿದೆ ಎಂದು ಡಿಸಿಎಂ ಹೇಳಿದರು.
ಬೆಂಗಳೂರು ಅಭಿವೃದ್ಧಿ ವಿಚಾರದಲ್ಲಿಯೂ ಬಿಜೆಪಿ ಸರಕಾರ ಸ್ಷಷ್ಟ ದಿಕ್ಕಿನಲ್ಲಿ ಕೆಲಸ ಮಾಡುತ್ತಿದೆ. ಬಿಬಿಎಂಪಿ ಆಡಳಿತ ವ್ಯಾಪ್ತಿಯಲ್ಲಿ ಅನೇಕ ಅಭೀವೃದ್ಧಿ ಕೆಲಸಗಳನ್ನು ಹಮ್ಮಿಕೊಳ್ಳಲಾಗಿದೆ. ರಾಜಕೀಯಕ್ಕೆ ಅತೀತವಾಗಿ ಎಲ್ಲ ಪ್ರದೇಶಗಳನ್ನು ಸಮಾನವಾಗಿ ಅಭಿವೃದ್ಧಿ ಮಾಡಲಾಗುತ್ತಿದೆ. ಹಿಂದಿನ ಸರಕಾರಗಳು ನೂರಾರು ಕೋಟಿ ರೂ.ಗಳನ್ನು ಖರ್ಚು ಮಾಡಿವೆ. ಆದರೆ ಸಮಸ್ಯೆಗಳು ಹಾಗೆಯೇ ಉಳಿದಿವೆ. ಸುಸ್ಥಿರ ಮಾನದಂಡದೊಂದಿಗೆ ಸಮಸ್ಯೆಗಳನ್ನು ಬಗೆಹರಿಸಬೇಕು. ಬಿಜೆಪಿ ಸರಕಾರ ಕೆಲಸ ಮಾಡುತ್ತಿರುವುದು ಹೀಗೆ ಎಂದು ಅವರು ಹೇಳಿದರು.
ಕೆರೆಗಳ ನಿರ್ವಹಣೆ ಹಳಿ ತಪ್ಪಿದೆ: ಬೆಂಗಳೂರಿನಲ್ಲಿ ಸಿಕ್ಕಾಪಟ್ಟೆ ಮಳೆಯಾಗಿ ರಸ್ತೆಗಳ ಮೇಲೆ ನದಿಯಂತೆ ನೀರು ಹರಿಯುತ್ತಿದೆ. ಇಷ್ಟು ದಿನ ಆಡಳಿತ ನಡೆಸಿದ್ದ ಪಕ್ಷಗಳು ಈ ನಿಟ್ಟಿನಲ್ಲಿ ಯಾವ ಪರಿಹಾರವನ್ನೂ ಕಂಡುಕೊಂಡಿರಲಿಲ್ಲ. ಮಳೆ ಕೊಯ್ಲು ಪದ್ಧತಿ ಸಮರ್ಪಕವಾಗಿ ಜಾರಿಯಾಗಿಲ್ಲ, ಮಳೆ ನೀರು ಕೆರೆಗಳಿಗೆ ಸೇರದೇ ಮನೆಗಳಿಗೆ ನುಗ್ಗುತ್ತಿತ್ತು. ಈಗ ಇದೆಲ್ಲವನ್ನೂ ಬಿಜೆಪಿ ಸರಕಾರ ವೈಜ್ಞಾನಿಕವಾಗಿ ಸರಿ ಮಾಡುತ್ತಿದೆ. ಜನರ ತೆರಿಗೆ ಹಣವನ್ನು ಅತ್ಯಂತ ಜತನದಿಂದ, ಎಚ್ಚರಿಕೆಯಿಂದ ಖರ್ಚು ಮಾಡುತ್ತಿದೆ ಎಂದು ಡಿಸಿಎಂ ಹೇಳಿದರು.
ಕೆಂಪೇಗೌಡರು ಕಟ್ಟಿದ ಬೆಂಗಳೂರು ನಗರದಲ್ಲಿ ನಾವು ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದೇವೆ. ಐದುನೂರು ವರ್ಷಗಳ ಹಿಂದೆಯೇ ಆಧುನಿಕವಾಗಿ ಬೆಂಗಳೂರನ್ನು ನಾಡಪ್ರಭು ಕೆಂಪೇಗೌಡರು ಕಟ್ಟಿದ್ದರು. ಅವರ ಹೆಜ್ಜೆಗುರುತುಗಳಲ್ಲೇ ನಮ್ಮ ಸರಕಾರ ಹೆಜ್ಜೆ ಇಡುತ್ತಿದೆ. ಈ ನಿಟ್ಟಿನಲ್ಲಿ ಇವತ್ತಿನ ದಿನಗಳಲ್ಲಿ ಅಭಿವೃದ್ಧಿ ಎಂದರೆ ಅದು ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಅವರು ನುಡಿದರು.
ಬಿಜೆಪಿ ಅಭ್ಯರ್ಥಿ ಮುನಿರತ್ನ, ಪಕ್ಷದ ಕಾನೂನು ವಿಭಾಗದ ಸಂಚಾಲಕ ವಿಠ್ಠಲಗೌಡ, ಮುಖಂಡರಾದ ರಾಜಣ್ಣ, ವಿವೇಕ್ ರೆಡ್ಡಿ, ಯೋಗೇಂದ್ರ, ಪ್ರಕಾಶಪ್ಪ, ಮಂಜುಳಾ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಹಾಜರಿದ್ದರು.