Advertisement

ಲಾಕ್‌ಡೌನ್‌ಗೆ ಸ್ವಯಂ ಪ್ರೇರಿತ ಬೆಂಬಲ

12:14 PM Mar 30, 2020 | Suhan S |

ಚಿಕ್ಕಮಗಳೂರು: ಕೋವಿಡ್ 19 ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಸಾರ್ವಜನಿಕರು ಮನೆಯಿಂದ ಹೊರಬರದಂತೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವುದರಿಂದ ಕಾಫಿ ನಾಡಿನ ಜನರು ಸ್ವಯಂ ಪ್ರೇರಿತವಾಗಿ ಲಾಕ್‌ಡೌನ್‌ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.

Advertisement

ಭಾನುವಾರದ ದಿನ ಪ್ರವಾಸಿಗರಿಂದ ಗಿಜುಗುಡುತ್ತಿದ್ದ ಎಂ.ಜಿ. ರಸ್ತೆ, ಐ.ಜಿ. ರಸ್ತೆ, ಮಾರ್ಕೆಟ್‌ ರಸ್ತೆ, ಹನುಮಂತಪ್ಪ ವೃತ್ತ, ಆಜಾದ್‌ ಪಾರ್ಕ್‌ ವೃತ್ತ, ಕೆಎಸ್‌ ಆರ್‌ಟಿಸಿ ಬಸ್‌ ನಿಲ್ದಾಣ, ಎಐಟಿ ಕಾಲೇಜು ವೃತ್ತಗಳಲ್ಲಿ ಜನಸಂಚಾರವಿಲ್ಲದೆ ಸ್ಮಶಾನ ಮೌನ ಆವರಿಸಿದೆ.

ಎಂದಿನಂತೆ ಅಗತ್ಯ ವಸ್ತುಗಳ ಅಂಗಡಿಗಳನ್ನು ತೆರೆಯಲಾಗಿದ್ದು, ಎಲ್ಲೋ ಬೆರಳೆಣಿಕೆಯಷ್ಟು ಜನರು ಬೈಕ್‌, ಕಾರುಗಳಲ್ಲಿ ತೆರಳಿ ವಸ್ತುಗಳನ್ನು ಖರೀದಿಸಿದರು. ಮಾಂಸ, ಮೀನು ಮಾರ್ಕೆಟ್‌ನಲ್ಲಿ ಬೆಳಗ್ಗೆ ಒಂದಷ್ಟು ಜನರು ಹೊರತುಪಡಿಸಿದರೆ ಉಳಿದಂತೆ ಗ್ರಾಹಕರಿಲ್ಲದಿರುವುದು ಕಂಡು ಬಂದಿತು. ಹೆಚ್ಚಿನ ಗ್ರಾಹಕರು ಮೀನು ಮಾರ್ಕೆಟ್‌ಗೆ ಧಾವಿಸಿದರು. ಅವರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿತು.

ದಿನಸಿ ಅಂಗಡಿ, ಹಣ್ಣಿನ ಅಂಗಡಿ, ತರಕಾರಿ ಅಂಗಡಿ, ಪೆಟ್ರೋಲ್‌ ಬಂಕ್‌, ಎಟಿಎಂ, ಕೃಷಿ, ಔಷಧ ಅಂಗಡಿಗಳು, ಮೆಡಿಕಲ್‌ ಶಾಪ್‌ಗ್ಳು ಎಂದಿನಂತೆ ತೆರೆದಿದ್ದವು. ಗ್ರಾಹಕರ ಸಂಖ್ಯೆ ವಿರಳವಾಗಿತ್ತು. ಸರಕು ಸಾಗಣೆ ವಾಹನಗಳ ಸಂಚಾರ ಎಂದಿನಂತೆ ಇತ್ತು. ಗ್ರಾಮೀಣ ಪ್ರದೇಶದ ರೈತರು ಬೆಳಗ್ಗೆಯೇ ಕೃಷಿ ಉತ್ಪನ್ನ ಮಾರುಕಟ್ಟೆಗೆ ಆಗಮಿಸಿ ತಾವು ತಂದ ತರಕಾರಿಯನ್ನು ಮಾರಿ ಬೇಗ ಮನೆ ಸೇರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ರಾಜ್ಯದಲ್ಲಿ ಕೋವಿಡ್ 19  ವೈರಸ್‌ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜನಸಂಚಾರಕ್ಕೆ ಕಡಿವಾಣ ಹಾಕಲು ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್‌ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು ಚೆಕ್‌ಪೋಸ್ಟ್‌ಗಳಲ್ಲಿ ಅನಗತ್ಯವಾಗಿ ತಿರುಗಾಡುತ್ತಿದ್ದ ವಾಹನ ಸವಾರರನ್ನು ತಡೆದು ವಿಚಾರಿಸಿ ಬಿಡುತ್ತಿದ್ದ ದೃಶ್ಯಗಳು ಕಂಡು ಬಂದವು. ಅಗತ್ಯ ವಸ್ತುಗಳಿಗೆ ಜನರು ಮನೆಯಿಂದ ಹೊರಬರುವುದನ್ನು ತಪ್ಪಿಸುವ ಉದ್ದೇಶದಿಂದ ಕೆಲ ಸಂಘ-ಸಂಸ್ಥೆ ಕಾರ್ಯಕರ್ತರು ಹಾಗೂ ಪೊಲೀಸ್‌ ಇಲಾಖೆ ಸಿಬ್ಬಂದಿ ನಗರದ ಕೆಲ ಬಡಾವಣೆಗಳಲ್ಲಿ ಅಗತ್ಯ ವಸ್ತುಗಳನ್ನು ಪೂರೈಸುವ ಕೆಲಸವನ್ನು ಭಾನುವಾರ ಕೂಡ ಮುಂದುವರಿಸಿದರು.

Advertisement

ಇದು ನಗರ ಪ್ರದೇಶದ ಚಿತ್ರಣವಾದರೆ ಗ್ರಾಮೀಣ ಪ್ರದೇಶದ ಜನರು ಮನೆಯಿಂದ ಹೊರಬರಲು ಹಿಂಜರಿಯುತ್ತಿದ್ದಾರೆ. ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಪಟ್ಟಣ ಪ್ರದೇಶಗಳಿಗೆ ಬಂದು ತಮ್ಮ ಊರುಗಳಿಗೆ ವಾಪಸಾಗುತ್ತಿದ್ದು, ಮನೆ ಮಂದಿಯೊಂದಿಗೆ ಹಾಗೂ ಗ್ರಾಮದ ಕಟ್ಟೆಗಳ ಮೇಲೆ ಕುಳಿತು ದಿನವೆಲ್ಲ ಕೋವಿಡ್ 19 ಬಗ್ಗೆಯೇ ಚರ್ಚೆಗಳು ನಡೆಯುತ್ತಿವೆ.

ಬಿಸಿಲಿನ ತಾಪಕ್ಕೆ ಹೈರಾಣಾದ ಪೊಲೀಸರು : ಕಳೆದ ಭಾನುವಾರದಿಂದ ಜನತಾ ಕರ್ಫ್ಯೂದಿಂದ ನಿರಂತರವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್‌ ಸಿಬ್ಬಂದಿ ಹೈರಾಣಾಗಿದ್ದಾರೆ. ಭಾನುವಾರ ನಗರದಲ್ಲಿ ಜನಸಂಚಾರ ಬಹಳಷ್ಟು ಕ್ಷೀಣಿಸಿದ್ದು ಚೆಕ್‌ಪೋಸ್ಟ್‌ಗಳಲ್ಲಿ ಪ್ರಮುಖ ವೃತ್ತಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರು ಸುಡುವ ಬಿಸಿಲಿನಿಂದ ತಪ್ಪಿಸಿಕೊಳ್ಳಲು ನೆರಳಿನ ಆಶ್ರಯ ಪಡೆದುಕೊಂಡಿದ್ದ ದೃಶ್ಯಗಳು ಕಂಡು ಬಂದವು.

ಕೋವಿಡ್ 19  ಭೀತಿಯಿಂದ ಕೃಷಿ ಉತ್ಪನ್ನ ಮಾರುಕಟ್ಟೆಗೆ ಬರುವ ರೈತರ ಸಂಖ್ಯೆ ಗಣನೀಯವಾಗಿ ಕ್ಷೀಣಿಸಿದೆ. ಮಾರುಕಟ್ಟೆಗೆ ಬೆಳಗ್ಗೆ ಬಂದು ವ್ಯಾಪಾರ ವಹಿವಾಟು ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದಾರೆ. ವ್ಯಾಪಾರ ನಡೆಸುವಾಗಲು ಅಂತರ ಕಾಪಾಡಿಕೊಂಡು ವ್ಯಾಪಾರ ವಹಿವಾಟು ನಡೆಸಲಾಗುತ್ತಿದೆ. ಸರಕು ಸಾಗಣೆ ಲಾರಿಗಳ ಸಂಚಾರಕ್ಕೆ ಅವಕಾಶ ನೀಡಿರುವುದು ಅನುಕೂಲವಾಗಿದೆ.  –ಜಯಪ್ರಕಾಶ್‌, ವರ್ತಕ.

Advertisement

Udayavani is now on Telegram. Click here to join our channel and stay updated with the latest news.

Next