Advertisement

ಮೋದಿಯಿಂದ ದೇಶಕ್ಕೆ ವಿಶ್ವಮಾನ್ಯತೆ

12:31 PM Jun 02, 2020 | mahesh |

ಚಿಕ್ಕಮಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಭಾರತ ವಿಶ್ವಮಟ್ಟದಲ್ಲಿ ಗುರುತಿಸುವಂತಹ ಕೆಲಸ ಮಾಡಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು. ಸೋಮವಾರ ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಕಾಂಗ್ರೆಸ್‌ ಅಧಿಕಾರದ ಅವಧಿಯಲ್ಲಿ ಇಡೀ ವಿಶ್ವವೇ ಭಾರತವನ್ನು ಕೀಳುಮಟ್ಟದಲ್ಲಿ ನೋಡುವ ಪ್ರವೃತ್ತಿ ಎದುರಾಗಿತ್ತು. ಮೊದಲ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರ ವಹಿಸಿಕೊಂಡ ನಂತರ ಅಂತಾರಾಷ್ಟ್ರೀಯ ಸಂಬಂಧವನ್ನು ಉತ್ತಮಪಡಿಸುವ ಮೂಲಕ ವಿಶ್ವಮಟ್ಟದಲ್ಲಿ ಭಾರತಕ್ಕೆ ಗೌರವ ತಂದುಕೊಡುವ ಕೆಲಸ ಮಾಡಿದರು ಎಂದರು.

Advertisement

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿತ್ತು. ಭ್ರಷ್ಟಾಚಾರ, ಮಧ್ಯವರ್ತಿಗಳ ಹಾವಳಿ ಎಗ್ಗಿಲ್ಲದೇ ನಡೆಯುತ್ತಿತ್ತು. ಯಾವುದೇ ಅಭಿವೃದ್ಧಿ ಕೆಲಸಗಳಾಗಿರಲಿಲ್ಲ, ಕೇಂದ್ರದಲ್ಲಿ ಒಂದು ಸರ್ಕಾರವಿದೆ ಎಂಬುದೇ ತಿಳಿದಿರಲಿಲ್ಲ ಎಂದರು. ಪ್ರಧಾನಿ ಮೋದಿ ಅವರು ಅಧಿಕಾರಕ್ಕೆ ಬಂದ ನಂತರ ಭ್ರಷ್ಟಾಚಾರ, ಮಧ್ಯವರ್ತಿಗಳನ್ನು ದೂರವಿಟ್ಟು ಮೊದಲ ಅವಧಿಯಲ್ಲಿ ಉತ್ತಮ ಆಡಳಿತ ನೀಡಿದರು.  ಜನ್‌ಧನ್‌, ಉಜ್ವಲ, ಪ್ರಧಾನ ಮಂತ್ರಿ ಗ್ರಾಮಸಡಕ್‌ ಯೋಜನೆಯಲ್ಲಿ ರಸ್ತೆಗಳ ಅಭಿವೃದ್ಧಿ, ಆಯುಷ್ಮಾನ್‌ ಯೋಜನೆ ಹೀಗೆ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದು ದೇಶವನ್ನು
ಪ್ರಗತಿಪಥದತ್ತ ಮುನ್ನಡೆಸುವ ಕೆಲಸ ಮಾಡಿದರು ಎಂದು ತಿಳಿಸಿದರು.

ಭಾರತದ ಗಡಿಭಾಗದ ರಸ್ತೆಗಳು ಕಚ್ಚಾರಸ್ತೆಯಿಂದ ಕೂಡಿದ್ದು, ನಮ್ಮ ಸೈನಿಕ ಸಂಚಾರಕ್ಕೆ ಕಠಿಣ ಪರಿಸ್ಥಿತಿ ಇತ್ತು. ಹಿಂದಿನ ಕಾಂಗ್ರೆಸ್‌ ಸರ್ಕಾರ ಗಡಿಭಾಗದ
ರಸ್ತೆಗಳನ್ನು ಎನ್‌.ಎಚ್‌. ರಸ್ತೆ ಮಾಡುವುದಾಗಿ ಘೋಷಿಸಿದ್ದರು. ಅದು ಕಾರ್ಯಗತವಾಗಿರಲಿಲ್ಲ.  ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ನಂತರ ಗಡಿಭಾಗದ ರಸ್ತೆಗಳನ್ನು ಎನ್‌.ಎಚ್‌. ರಸ್ತೆಗಳಾಗಿ ಪರಿವರ್ತನೆ ಮಾಡಿದರು ಎಂದು ತಿಳಿಸಿದರು. ಸ್ವಾವಲಂಬಿ ಭಾರತ, ಸ್ವಾವಲಂಬಿ ಸೈನ್ಯವನ್ನು ಪ್ರಧಾನಿ ಮೋದಿ ಅವರ ಮೊದಲ ಆಡಳಿತ ಅವಧಿಯಲ್ಲಿ ಮಾಡಲಾಯಿತು. ಎಲ್ಲಾ ವರ್ಗ ಹಾಗೂ ಪ್ರದೇಶಕ್ಕೆ ಸಮಾನ ನ್ಯಾಯ ನೀಡುವ ಮೂಲಕ ಎಲ್ಲಾ ಜನತೆಗೂ ಸೌಲಭ್ಯಗಳನ್ನು ನೀಡುವ ಕೆಲಸ ಮಾಡಿದರು ಎಂದರು.

ಮೊದಲ ಹಂತರದ ಐದು ವರ್ಷ ಹಾಗೂ ಎರಡನೇ ಹಂತದ ಮೊದಲ ವರ್ಷವನ್ನು ಅತ್ಯಂತ ದಿಟ್ಟತನದಿಂದ ಆಡಳಿತ ನಡೆಸಿದ್ದು, ಎರಡನೇ ಅವಧಿಯ ಮೊದಲ ವರ್ಷದಲ್ಲಿ ಅನೇಕ ದಿಟ್ಟ ಹೆಜ್ಜೆಗಳನ್ನು ಇಡಲಾಗಿದೆ. ಅನೇಕ ವರ್ಷಗಳಿಂದ ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ತೆಗೆಯಬೇಕು ಎಂಬ ಕೂಗು
ಬಲವಾಗಿತ್ತು. ಅದರಂತೆ 370ನೇ ವಿಧಿಯನ್ನು ತೆಗೆದು ಹಾಕುವ ಮೂಲಕ ಪಾಕಿಸ್ತಾನಕ್ಕೆ ಕುಮ್ಮಕ್ಕು ನೀಡುತ್ತಿದ್ದ ಚೀನಾ ಹಾಗೂ ಪಾಕಿಸ್ತಾನಕ್ಕೆ ದಿಟ್ಟ ಉತ್ತರ ನೀಡುವ ಮೂಲಕ ಐತಿಹಾಸಿಕ ಸಾಧನೆಯನ್ನು ಮೋದಿ ನೇತೃತ್ವದ ಸರ್ಕಾರ ಮಾಡಿದೆ ಎಂದರು.

ಸಿಎಎ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಮುಸ್ಲಿಂ ಸಮುದಾಯದಲ್ಲಿದ್ದ ತ್ರಿವಳಿ ತಲಾಕ್‌ಗೆ ಮುಸ್ಲಿಂ ಸಮುದಾಯದ ಹೆಣ್ಣುಮಕ್ಕಳ ವಿರೋಧವಿತ್ತು. ಅದನ್ನು ತೆಗೆದು ಹಾಕಿ ಕಾನೂನು ಮಾಡಿ ಪರಿವರ್ತಿಸಲಾಯಿತು. ಸುಪ್ರೀಂ ಕೋರ್ಟ್‌ ತೀರ್ಮಾನದಂತೆ ರಾಮ ಮಂದಿರ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.

Advertisement

ಭಯೋತ್ಪಾದನೆ, ಮಹಿಳೆಯರ ಮೇಲಿನ ದೌರ್ಜನ್ಯಗಳ ಕಾನೂನು ಪರಿವರ್ತನೆ ಮಾಡಿ ಕಠಿಣ ಶಿಕ್ಷೆಗೆ ಒಳಪಡಿಸುವ ಕಾನೂನು ತರಲಾಗಿದೆ. ಬ್ರಿಟಿಷರ
ಕಾಲದ ಅನೇಕ ಕಾನೂನುಗಳಿಗೆ ಹೊಸ ರೂಪ ನೀಡಲಾಗಿದೆ. ರೈತರ ಖಾತೆಗೆ ಹಣ, ಉಚಿತ ಗ್ಯಾಸ್‌ ವಿತರಣೆ, ಮೂಲ ಸೌಲಭ್ಯಗಳಿಗೆ ಆದ್ಯತೆ ನೀಡಲಾಗಿದೆ
ಎಂದರು. ಕೋವಿಡ್ ಸೋಂಕು ತಡೆಗಟ್ಟಲು ಇಡೀ ದೇಶದ್ಯಾಂತ ಲಾಕ್‌ಡೌನ್‌ ವಿಧಿಸಿದ್ದು ಆರ್ಥಿಕ ಸಂಕಷ್ಟದ ಪರಿಸ್ಥಿತಿಯಲ್ಲೂ ಯುದ್ಧದ ರೀತಿಯಲ್ಲಿ ನಮ್ಮ
ಮುಂದಿದ್ದ ಸವಾಲನ್ನು ಸಮರ್ಥವಾಗಿ ಎದುರಿಸಿದ್ದೇವೆ. ಸರ್ಕಾರದ ದಿಟ್ಟ ನಿರ್ಧಾರದಿಂದ ಕೋವಿಡ್ ಸೋಂಕು ತಡೆಯುವಲ್ಲಿ ಯಶಸ್ವಿಯಾಗಿದ್ದೇವೆ ಎಂದರು.

ಲಾಕ್‌ಡೌನ್‌ ಸಂದರ್ಭದಲ್ಲಿ ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ಉಚಿತ ಗ್ಯಾಸ್‌, ವಲಸೆ ಕಾರ್ಮಿಕರಿಗೆ ನೆರವು, ರೈತರಿಗೆ, ಕೈಗಾರಿಕೋದ್ಯಮಿಗಳಿಗೆ ನೆರವು 20 ಲಕ್ಷ ಕೋಟಿ ರೂ. ವಿಶೇಷ ಪ್ಯಾಕೇಜ್‌ ನೀಡಿದೆ. ರೈತರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗಿದೆ. ಯಾರೂ ಹಸಿವಿನಿಂದ ಸಾಯಬಾರದು ಎಂದು ಅನೇಕ ನೆರವನ್ನು ಕೇಂದ್ರ ಸರ್ಕಾರ ನೀಡಿದೆ ಎಂದರು.

ಮೆಡಿಕಲ್‌ ಕಾಲೇಜ್‌, ಕೊಪ್ಪದಲ್ಲಿ ಎಂಸಿಎಚ್‌ ಆಸ್ಪತ್ರೆ, ಎನ್‌.ಎಚ್‌. ರಸ್ತೆಗಳ ನಿರ್ಮಾಣ, ರೈಲ್ವೆ ಲೈನ್‌ ಸೇರಿದಂತೆ ಚಿಕ್ಕಮಗಳೂರು ಜಿಲ್ಲೆಗೂ ಹೆಚ್ಚಿನ ಅನುದಾನ ನೀಡಲಾಗಿದೆ ಎಂದ ಅವರು, ಮುಂದಿನ ದಿನಗಳಲ್ಲಿ ಬೇಲೂರು- ಚಿಕ್ಕಮಗಳೂರು, ಚಿಕ್ಕಮಗಳೂರು- ಶೃಂಗೇರಿ ಹಾಗೂ ಶೃಂಗೇರಿ- ಶಿವಮೊಗ್ಗಕ್ಕೆ ರೈಲ್ವೆ ಯೋಜನೆ ತರಲಾಗುವುದು. ಬೆಂಗಳೂರಿಗೆ ಚಿಕ್ಕಮಗಳೂರಿನಿಂದ ರಾತ್ರಿ ರೈಲು ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಕಾಫಿ ಬೆಳೆಗಾರರ, ಅಡಕೆ ಬೆಳೆಗಾರರ ಸಮಸ್ಯೆ ಹಾಗೂ ಕಸ್ತೂರಿ ರಂಗನ್‌ ವರದಿ ಸಮಸ್ಯೆಯ ಬಗ್ಗೆ ಪ್ರಧಾನಿಯವರ ಗಮನ ಸೆಳೆದಿದ್ದೇವೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಅನಧಾನ ನೀಡುವಲ್ಲಿ ತಾರತಮ್ಯ ಮಾಡಿಲ್ಲ, ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸಿಕೊಂಡು ರಾಜ್ಯಕ್ಕೆ ಆರ್ಥಿಕವಾಗಿ ಇನಷ್ಟು ಶಕ್ತಿ ತುಂಬುವ ಕೆಲಸ ಕೇಂದ್ರ ಸರ್ಕಾರ ಮುಂದಿನ ದಿನಗಳಲ್ಲಿ ಮಾಡಲಿದೆ.  
ಶೋಭಾ ಕರಂದ್ಲಾಜೆ, ಸಂಸದೆ

Advertisement

Udayavani is now on Telegram. Click here to join our channel and stay updated with the latest news.

Next