ದೇವದುರ್ಗ: ತಾಪಂ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎನ್‌ಆರ್‌ಎಲ್‌ಎಂ(ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ)ಹಲವು ಸಸ್ವಹಾಯ ಗುಂಪುಗಳ ಒಕ್ಕೂಟಕ್ಕೆ ಸಾಲ ನೀಡುವ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಿದೆ. 33 ಗ್ರಾಪಂ ವ್ಯಾಪ್ತಿಯ ಒಕ್ಕೂಟದ ಸ್ವಸಹಾಯ ಗುಂಪುಗಳು ಹೈನುಗಾರಿಕೆ, ಕೋಳಿ ಸಾಕಾಣಿಕೆ, ರೊಟ್ಟಿ ಕೇಂದ್ರ, ಲಂಬಾಣಿ ಬಟ್ಟೆ ತಯಾರಿಕೆ, ಕಿರಾಣಿ ಅಂಗಡಿ ಸೇರಿದಂತೆ ಇತರೆ ತಿನಿಸು ಪದಾರ್ಥಗಳ ತಯಾರಿಕೆ ಚಟುವಟಿಕೆ ಮುಂತಾದ ವೃತ್ತಿ ಕೌಶ್ಯಲಕ್ಕೆ ಶಕ್ತಿ ತುಂಬಿದಂತಿವೆ.
ಕರಿಗುಡ್ಡ ಗ್ರಾಪಂ ವ್ಯಾಪ್ತಿಯ ಅಮೃತ ಸಂಜೀವಿನಿ ಒಕ್ಕೂಟ ಒಳಗೊಂಡ ಹಲವು ಸ್ವಸಹಾಯ ಗುಂಪುಗಳು ವಸ್ತುಗಳ ತಯಾರಿಕೆ ಚಟುವಟಿಕೆ ನಡೆಸುವ ಮೂಲಕ ಇನ್ನೊಬ್ಬರಿಗೆ ಮಾದರಿಯಾಗಿವೆ. ಜಾಲಹಳ್ಳಿ, ಚಿಂಚೋಡಿ ಒಕ್ಕೂಟ ಗುಂಪುಗಳು ಹಾಲು ಉತ್ಪಾದನ ಘಟಕ ಆರಂಭಿಸಿವೆ. ಕರಿಗುಡ್ಡ ಅಮೃತ ಸಂಜೀವಿನಿ ಒಕ್ಕೂಟಕ್ಕೆ 5 ಲಕ್ಷ ರೂ. ಸಾಲ ನೀಡಿದ್ದು, ಹಲವು ಗುಂಪುಗಳು ವಿವಿಧ ಚಟುವಟಿಕೆಗಳು ನಡೆಸುತ್ತಿವೆ.
ಉಳಿತಾಯ ಸೇರಿ ಸಾಲ ಮರು ಪಾವತಿ ದೃಷ್ಟಿಯಿಂದ ಚಟುವಟಿಕೆಗಳಿಗೆ ಗುಂಪಿನ ಸದಸ್ಯರು ಹೆಚ್ಚು ಒತ್ತು ನೀಡುತ್ತಿದ್ದಾರೆ. ಚಿಂಚೋಡಿ ಅನುಬಂಧ ಒಕ್ಕೂಟ ವ್ಯಾಪ್ತಿ ಬಹುತೇಕ ಗುಂಪುಗಳು ರಚನೆ ಮಾಡಿಕೊಂಡು ವಿವಿಧ ಬಗೆಯ ವಸ್ತುಗಳನ್ನು ತಯಾರಿಸುವ ಜತೆ ಆರ್ಥಿಕ ಬಲವರ್ಧನೆ ಶ್ರಮಿಸುತ್ತಿದ್ದಾರೆ. ಲಿಂಗದಹಳ್ಳಿ ಗ್ರಾಮದಲ್ಲಿ ಹಾಲು ಉತ್ಪಾದನಾ ಘಟಕ ಸ್ಥಾಪನೆ ಮಾಡಿದ್ದರಿಂದ ಹಾಲು ಮಾರಾಟದಿಂದ ಬದುಕು ಕಟ್ಟಿಕೊಂಡಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ 40 ಸ್ವಸಹಾಯ ಗುಂಪುಗಳಿಗೆ ತಲಾ ಒಂದು ಲಕ್ಷ ರೂ.ದಂತೆ ಪ್ರೋತ್ಸಾಹಧನ ನೀಡಲಾಗಿದೆ. ಮಲ್ಲೇದೇವರಗುಡ್ಡ, ಗಾಣಧಾಳ, ಪಲಕನಮರಡಿ, ನಾಗಡದಿನ್ನಿ, ಮಲದಕಲ್ ಸೇರಿ ಇತರೆ ಒಕ್ಕೂಟ ರಚನೆಗೊಂಡಿದ್ದ ಸ್ವಸಹಾಯ ಗುಂಪುಗಳಿಗೆ ಸಾಲ ನೀಡುವ ಚಿಂತನೆ ನಡೆದಿದೆ.
ಸ್ವಸಹಾಯ ಗುಂಪುಗಳ ಸದಸ್ಯರು ಹಲವು ಚಟುವಟಿಕೆಗಳ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ. ಹೈನುಗಾರಿಕೆ, ಕೋಳಿ ಸಾಕಾಣಿಕೆ ಸೇರಿ ಇತರೆ ವಸ್ತುಗಳನ್ನು ತಯಾರಿಸಲಾಗುತ್ತಿದೆ. ಉತ್ತಮ ಕಾರ್ಯ ಚಟುವಟಿಕೆಯಲ್ಲಿ ತೊಡಗಿದ್ದಾರೆ.
- ಮಾರ್ಕಂಡಯ್ಯ, ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರು.
ಬೇಕು ಪ್ರೋತ್ಸಾಹ ಧನ
ಮಾಸಿಕ ಸಂತೆ ಸೇರಿ ಇತರೆ ಸಭೆ ಸಮಾರಂಭದಲ್ಲಿ ಸ್ವಸಹಾಯ ಗುಂಪುಗಳ ಒಕ್ಕೂಟದ ಸದಸ್ಯರು ವಸ್ತುಗಳ ಪ್ರದರ್ಶನ ಮತ್ತು ಮಾರಾಟ ನಡೆಸಿದ್ದಾರೆ. ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಇಂತಹ ಗುಂಪುಗಳ ಮಹಿಳೆಯರು ಹಲವು ವಸ್ತುಗಳನ್ನು ಮಾರಾಟ ಮಾಡಿದ್ದಾರೆ. ಇಂತಹ ಸ್ವಸಹಾಯ ಗುಂಪುಗಳಿಗೆ ಇನ್ನಷ್ಟು ಪ್ರೋತ್ಸಾಹಧನ ಬೇಕಿದೆ ಎನ್ನುತ್ತಾರೆ ಮಹಿಳಾ ಸದಸ್ಯೆ ಮಲ್ಲಮ್ಮ.