ಹಾಸನ: ಸಾರ್ವಜನಿಕರು ಕೇಳುವ ಮೊದಲೇ ಅಧಿಕಾರಿಗಳು ಸ್ವಯಂ ಪ್ರೇರಿತರಾಗಿ ಮಾಹಿತಿ ಯನ್ನು ಪ್ರಕಟಿಸುವ ಮೂಲಕ ಜವಾಬ್ದಾರಿ ಪ್ರದರ್ಶಿಸಬೇಕು ಎಂದು ರಾಜ್ಯ ಮುಖ್ಯ ಮಾಹಿತಿ ಆಯುಕ್ತರಾದ ಎಸ್. ಶ್ರೀನಿವಾಸ್ ಅಧಿಕಾರಿಗಳಿಗೆ ಸಲಹೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಅವರು ಎಲ್ಲಾ ಇಲಾಖೆಗಳು ತಮ್ಮ ಕಚೇರಿಯ ಮೂಲಭೂತ ಮಾಹಿತಿಯನ್ನು ನಮೂನೆ 4.1(ಎ) ಮತ್ತು 4.1(ಬಿ) ಗಳಲ್ಲಿ ಸರ್ಕಾರಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು ಎಂದು ಸೂಚನೆ ನೀಡಿದರು.
ಮಾಹಿತಿ ಹಕ್ಕು ಅರ್ಜಿ ವಿಲೇವಾರಿ ಮಾಡಿ: ಸಾರ್ವಜನಿಕರಿಂದ ಮಾಹಿತಿ ಕೋರಿ ಬರುವ ಅರ್ಜಿಗಳನ್ನು ಕಾಲಕಾಲಕ್ಕೆ ವಿಲೇವಾರಿ ಮಾಡಬೇಕು ಮತ್ತು ನಿಯಮನುಸಾರ ಅದಕ್ಕೆ ತಗಲುವ ವೆಚ್ಚವನ್ನು ಪಡೆದ ಅದನ್ನು ಸರ್ಕಾರಕ್ಕೆ ಜಮೆ ಮಾಡಬೇಕು. ಪ್ರತಿಯೊಬ್ಬ ಅಧಿಕಾರಿ ಸಿಬ್ಬಂದಿ ಸರ್ಕಾರದ ಪರವಾಗಿ, ಸಾರ್ವಜನಿಕರಿಗಾಗಿ ಸೇವೆ ಮಾಡುತ್ತಿದ್ದಾರೆ. ಹಾಗಾಗಿ ಜನಸಾಮಾನ್ಯರಿಗೆ ಪೂರಕವಾಗಿ, ಪಾರದರ್ಶಕವಾಗಿ ಕೆಲಸ ಮಾಡಬೇಕು. ಮಾಹಿತಿ ಲಭ್ಯವಿದ್ದರೂ ನೀಡದೇ ನಿರಾಕರಿಸಬಾರದು ಎಂದು ಎಚ್ಚರಿಕೆ ನೀಡಿದರು.
ಕಡತಗಳನ್ನು ಪರಿಶೀಲಿಸಿ: ಯಾವುದೇ ಇಲಾಖೆಗೆ ಅಧಿಕಾರಿಗಳು ಭೇಟಿ ನೀಡಿದಾಗ ಸಂಪೂರ್ಣವಾಗಿ ಮಾಹಿತಿ ಕಡತಗಳನ್ನು ಪರಿಶೀಲನೆ ನಡೆಸಬೇಕು.ಮತ್ತು ಎಲ್ಲಾ ಇಲಾಖೆಗಳು ಕಡತಗಳಲ್ಲಿನ ಮಾಹಿತಿ ಗಳನ್ನ ಕಡ್ಡಾಯವಾಗಿ ಗಣಕೀಕೃತ ಗೊಳಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ವೆಬ್‌ಸೈಟ್‌ಗೆ ಲಿಂಕ್ ನೀಡಿ: ಜಿಲ್ಲಾಧಿಕಾರಿ ಆರ್. ಗಿರೀಶ್ ಮಾತನಾಡಿ, ಹಲವು ಇಲಾಖೆಗಳು 4.1(ಎ) ಮತ್ತು 4.1(ಡಿ) ಯನ್ನು ಪ್ರಕಟಿಸಿಲ್ಲ ಮತ್ತು ಕೆಲವು ಇಲಾಖೆ ಅವರ ವೆಬ್‌ಸೈಟಲ್ಲಿ ಪ್ರಕಟಿಸಿದ್ದಾರೆ. ಜಿಲ್ಲಾ ವೆಬ್‌ಸೈಟ್‌ಗೂ ಅವುಗಳ ಲಿಂಕ್ ನೀಡಬೇಕಾಗಿದ್ದು, ಈಗಾಗಲೇ ಆ ಬಗ್ಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಿರುವುದಾಗಿ ಹೇಳಿದರು.
ಜಿಲ್ಲೆಯಲ್ಲಿ ಒಟ್ಟು 6 ಮಾಹಿತಿ ಹಕ್ಕು ಕಾಯ್ದೆಯ ಮೇಲ್ಮನವಿ ಅರ್ಜಿಗಳು ಬಾಕಿಯಿದ್ದು, ಅವುಗಳನ್ನು ಒಂದು ತಿಂಗಳಲ್ಲಿ ವಿಲೇವಾರಿ ಮಾಡಬೇಕೆಂದು ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಿದರು. ರಾಜ್ಯ ಮುಖ್ಯ ಮಾಹಿತಿ ಆಯುಕ್ತರು ಜಿಲ್ಲಾಧಿಕಾರಿ ಕಚೇರಿಯ ದಾಖಲೆ ಕೊಠಡಿಯನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಕಂದಾಯ ಇಲಾಖೆಗಳ ಅಧಿಕಾರಿಗಳಿಂದ ಮಾಹಿತಿ ಪಡೆದು ಇಲಾಖೆ ಕಡತಗಳ ಪರಿಶೀಲನೆ ನಡೆಸಿದರು.