Advertisement

ಧರ್ಮಾಚರಣೆಯಿಂದ ಆತ್ಮಬಲ ಪ್ರಾಪ್ತಿ

01:04 PM Apr 13, 2018 | Team Udayavani |

ಚಿಕ್ಕಮಗಳೂರು: ಸತ್ಯಾನ್ವೇಷಣೆಯ ಹಾದಿಯಲ್ಲಿ ಬರುವ ಕಷ್ಟಗಳು ಅನಂತ. ಅವುಗಳಿಗೆ ಅಂಜದೇ ಅಳುಕದೇ ನಿಜ ದಾರಿಯಲ್ಲಿ ನಡೆಯುವುದೇ ಜೀವನದ ಪರಮ ಗುರಿ. ಧರ್ಮದ ದಿಕ್ಸೂಚಿ ಮತ್ತು ಆಚರಣೆಯಿಂದ ಮನುಷ್ಯನಲ್ಲಿ ಆತ್ಮಬಲ ಸಂವರ್ಧನೆಗೊಂಡು ಶಾಂತಿ ಪ್ರಾಪ್ತವಾಗುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ|ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು.

Advertisement

ಅವರು ತಾಲೂಕಿನ ಕುನ್ನಾಳು ಗ್ರಾಮದಲ್ಲಿ ಶ್ರೀ ಗಿರಿರುದ್ರೇಶ್ವರ ಸ್ವಾಮಿ ನೂತನ ದೇವಾಲಯ ಉದ್ಘಾಟನೆ-ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಅಂಗವಾಗಿ ನಡೆದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಬಾಲ್ಯದಲ್ಲಿ ಜ್ಞಾನ, ಯೌವನದಲ್ಲಿ ಸಂಪತ್ತು ಮತ್ತು ವೃದ್ಧಾಪ್ಯದಲ್ಲಿ ಪುಣ್ಯ ಸಂಪಾದಿಸಿ ಬಾಳಬೇಕು. ಮನುಷ್ಯನ ಸುಖ ಸಾಧನೆಗೆ ಬೇಕಾದಷ್ಟು ಅನುಕೂಲಗಳಿದ್ದರೂ ನೆಮ್ಮದಿಯಿಲ್ಲ. ಬುದ್ಧಿ ವಿಕಾಸಗೊಂಡರೂ ಮನಸ್ಸಿನಲ್ಲಿ ಶಾಂತಿ ನೆಮ್ಮದಿಗಳಿಲ್ಲ. ಸತ್ಯ, ಧರ್ಮ, ನ್ಯಾಯ, ಮಾರ್ಗದಲ್ಲಿ ಮುನ್ನಡೆವ ಪ್ರವೃತ್ತಿ ಕಡಿಮೆಯಾಗುತ್ತಿದೆ. ಬುನಾದಿ ಕಲ್ಲು ಕಣ್ಣಿಗೆ ಕಾಣದಿದ್ದರೂ ಆ ಭವ್ಯ ಕಟ್ಟಡ ನಿಂತಿರುವುದು ಆ ಬುನಾದಿಯಿಂದ ಎಂಬುದನ್ನು ಮರೆತವರೇ ಹೆಚ್ಚು ಎಂದರು.
 
ಸಕಲ ಜೀವಾತ್ಮರಿಗೂ ಲೇಸನ್ನೇ ಬಯಸಿದ ಶ್ರೀ ಜಗದ್ಗುರು ರೇಣುಕಾಚಾರ್ಯರು ವೀರಶೈವ ಧರ್ಮ ದರ್ಶನದಲ್ಲಿ ಏನೆಲ್ಲ ಅಧ್ಯಾತ್ಮ ಜ್ಞಾನವನ್ನು ಬೋಧಿಸಿದ್ದಾರೆ. ಬೆಳೆಯುತ್ತಿರುವ ಯುವ ಸಮೂಹದಲ್ಲಿ ಸಂಸ್ಕಾರ ಸಂಸ್ಕೃತಿ ಬೆಳೆಸುವ ಕೆಲಸವಾಗಬೇಕಾಗಿದೆ. ದೇಹವನ್ನು ದುಡಿಮೆಗೆ ಮನಸ್ಸನ್ನು ಭಗವಂತನಿಗೆ ಅರ್ಪಿಸಿ ಬಾಳಿದಾಗ ಬಾಳು ಉಜ್ವಲಗೊಳ್ಳುವುದು ಎಂದು ತಿಳಿಸಿದರು.

 ಶ್ರೀ ವೀರಭದ್ರಸ್ವಾಮಿ ಕುನ್ನಾಳು ಗ್ರಾಮದಲ್ಲಿ ಶ್ರೀ ಗಿರಿರುದ್ರೇಶ್ವರ ಸ್ವಾಮಿಯಾಗಿ ನೆಲೆಗೊಂಡಿರುವುದು ಸಂತೋಷ ತಂದಿದೆ. ದುಷ್ಟರ ಸಂಹಾರ ಶಿಷ್ಟರ ಸಂರಕ್ಷಣೆಗಾಗಿ ಅವತರಿಸಿದ ಶ್ರೀ ಗಿರಿರುದ್ರೇಶ್ವರ ಸ್ವಾಮಿ ಸರ್ವರನ್ನು ಕಾಪಾಡಲೆಂದು ಶುಭ ಹಾರೈಸಿದರು.

ಸಮಾರಂಭದ ನೇತೃತ್ವ ವಹಿಸಿದ್ದ ಹುಲಿಕೆರೆ ದೊಡ್ಡಮಠದ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ದೇವರು ಕೊಟ್ಟಿದ್ದು ಕೊನೆತನಕ ಮನುಷ್ಯ ಕೊಟ್ಟಿದ್ದು ಮನೆತನಕ ಎಂಬ ಗಾದೆ ಮಾತಿದೆ. ಭೌತಿಕ ಬದುಕು ಬಲಗೊಳ್ಳಲು ದೈವ ಸಾನ್ನಿಧ್ಯದ ಅವಶ್ಯಕತೆಯಿದೆ. ಧರ್ಮ ಮತ್ತು ಜ್ಞಾನ ಮಾರ್ಗದಲ್ಲಿ ನಡೆದು ಜೀವನ ಸಾರ್ಥಕಪಡಿಸಿಕೊಳ್ಳಬೇಕಾಗಿದೆ ಎಂದರು.

Advertisement

ಅ.ಭಾ.ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಎಚ್‌.ಎಂ.ಲೋಕೇಶ್‌ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಅರ್ಚಕ ಕೆ.ಯು. ಚಿದಾನಂದ ಶರ್ಮಾ ಸ್ವಾಗತಿಸಿ ನಿರೂಪಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next