ಯಲ್ಲಾಪುರ: ಉಳ್ಳವರಿಂದ ಅತಿಕ್ರಮಣ, ಖುಲ್ಲಾಗೊಳಿಸುವುದಕ್ಕೆ ಇಲಖೆ ಹಿಂದೇಟು, ಹೀಗೆ ಹಲವು ಕಾರಣದಿಂದ ಮುಚ್ಚಿ ಹೋಗುವ ಹಂತ ತಲುಪಿದ್ದ ತಾಲೂಕಿನ ನಂದೊಳ್ಳಿ ಸಮೀಪದ ಕಾರಕುಂಕಿ ಬಳಿಯ ಇಡೀ ಊರಿಗೆ ಉಪಯೋಗವಾಗುವ ಪುರಾತನ ಬ್ರಹ್ಮೇತಿ ಕೆರೆ ಪುನರುಜ್ಜೀವನಕ್ಕೆ ಗ್ರಾಮಸ್ಥರೇ ಪಣ ತೊಟ್ಟಿದ್ದಾರೆ.
ಕಳೆದ 3-4 ವರ್ಷಗಳಿಂದ ಸ್ವಂತ ಖರ್ಚಿನಲ್ಲಿ ಕೆರೆಯ ಹೂಳೆತ್ತುವ ಮೂಲಕ ಕೆರೆ ನುಂಗಣ್ಣಗಳಿಂದ ಪಾರುಮಾಡಿ ಕೆರೆ ಜೀರ್ಣೋದ್ಧಾರ ಮಾಡುತ್ತಿದ್ದಾರೆ. ಈ ವರ್ಷವೂ ಕೆರೆಯ ಉಳಿವಿಗೆ ಅದರ ಉಪಯೋಗ ಪಡೆಯುವುದಕ್ಕೆ ಶ್ರಮಿಸಿದ್ದಾರೆ.
ನಂದೊಳ್ಳಿ ಗ್ರಾಮದ ಫಾರೆಸ್ಟ್ ಸ.ನಂ 108 ರಲ್ಲಿರುವ ಬ್ರಹ್ಮೇತಿ ಕೆರೆ ಶತಮಾನಗಳಷ್ಟು ಹಳೆಯದಾಗಿದ್ದು, 16 ಎಕರೆಗಿಂತ ಹೆಚ್ಚಿನ ವಿಸ್ತೀರ್ಣ ಹೊಂದಿದೆ. 25 ವರ್ಷಗಳ ಹಿಂದೆ ಜಿಲ್ಲಾ ಪರಿಷತ್‌ನಿಂದ ಒಡ್ಡು ನಿರ್ಮಿಸಿದ್ದು ಬಿಟ್ಟರೆ ನಂತರ ಸರ್ಕಾರದಿಂದ ಅಥವಾ ಅರಣ್ಯ ಇಲಾಖೆಯಿಂದ ಯಾವುದೇ ನಿರ್ವಹಣೆ ಕೈಗೊಂಡಿರಲ್ಲ. ಕಾರಣ ಕೆರೆಯಲ್ಲಿ ಹೂಳು ತುಂಬಿ ಮುಚ್ಚಿ ಹೋಗುವ ಸ್ಥಿತಿಯಲ್ಲಿತ್ತು. ಕೆರೆಯ ಒಂದು ಭಾಗ ಅತಿಕ್ರಮಣಕ್ಕೊಳಗಾಗಿದ್ದಲ್ಲದೇ, ಸುತ್ತಮುತ್ತ ಗಿಡ-ಗಂಟಿಗಳೆಲ್ಲ ಬೆಳೆದು ಕೆರೆಯ ಅಸ್ಥಿತ್ವವೇ ಇಲ್ಲದಂತಾಗಿದೆ. ಒಂದು ಅರ್ಥದಲ್ಲಿ ಕಾಗದಪತ್ರ ನೋಡಿಯೇ ಇದು ಕೆರೆ ಎನ್ನಬೇಕಾದ ಸ್ಥಿತಿ ಇತ್ತು.
ಸರಕಾರಕ್ಕೆ, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿ ಬೇಸತ್ತ ಗ್ರಾಮಸ್ಥರು ಕೊನೆಗೆ ತಾವೇ ಕೆರೆಯ ಹೂಳೆತ್ತುವ ತೀರ್ಮಾನಕ್ಕೆ ಬಂದು ಕಳೆದ 4 ವರ್ಷಗಳಿಂದ ಬೇಸಿಗೆಯಲ್ಲಿ 15-20 ದಿನ ಶ್ರಮದಾನ ಮಾಡುತ್ತ ಬಂದಿದ್ದಾರೆ. ಈವರೆಗೆ ಹೂಳೆತ್ತಲು 12 ಲಕ್ಷಕ್ಕೂ ಹೆಚ್ಚು ಹಣ ಖರ್ಚು ಮಾಡಲಾಗಿದ್ದು, ಎಲ್ಲವನ್ನೂ ಗ್ರಾಮಸ್ಥರೇ ಭರಿಸಿದ್ದಾರೆ. ಆದರೆ ಅಷ್ಟು ದೊಡ್ಡ ಕೆರೆಯ ಹೂಳೆತ್ತುವ ಕಾರ್ಯ ಜನರ ವಂತಿಗೆಯೊಂದರಿಂದಲೆ ಖಂಡಿತಾ ಸಾಧ್ಯವಿಲ್ಲ.
ಈ ಬಾರಿಯೂ 15 ದಿನಗಳಿಂದ ಗ್ರಾಮಸ್ಥರು ಕೆರೆ ಹೂಳೆತ್ತುತ್ತಿದ್ದು, ಲಕ್ಷಾಂತರ ರೂ. ವ್ಯಯಿಸಿದ್ದಾರೆ. ಗ್ರಾಮಸ್ಥರಾದ ಜನಾರ್ದನ ಬೆಳ್ಳಿ, ಗೋಪಾಲಕೃಷ್ಣ ಭಟ್ಟ, ಶಿವರಾಮ ಭಟ್ಟ, ನಾರಾಯಣ ಭಟ್ಟ, ನಾರಾಯಣ ಭಾಗ್ವತ, ಶ್ರೀಪಾದ ಭಟ್ಟ ಕಾರಕುಂಕಿ, ವಿಶ್ವನಾಥ ಹೆಗಡೆ, ಕೇಶವ ಹೆಗಡೆ, ನರಸಿಂಹ ಮಂಗಳಾರ್ತಿ ಇತರರು ಕಾಮಗಾರಿ ನಡೆಸಿದ್ದಾರೆ.
ಇಡೀ ಕೆರೆಯ ಹೂಳೆತ್ತಲು ಮತ್ತಷ್ಟು ಹಣದ ಅಗತ್ಯವಿದ್ದು, ಬಡ, ಮಧ್ಯಮ ವರ್ಗದ ಕೃಷಿಕರಾದ ಗ್ರಾಮಸ್ಥರಿಗೆ ಅದನ್ನು ಭರಿಸುವ ಶಕ್ತಿಯಿಲ್ಲ. ಅದಕ್ಕಾಗಿ ಸರ್ಕಾರದ ನೆರವು ಯಾಚಿಸುತ್ತಿದ್ದಾರೆ. ಶ್ರಮಿಸುತ್ತಿರುವ ಗ್ರಾಮಸ್ಥರ ಜೊತೆ ಸರ್ಕಾರ, ಸಂಘ-ಸಂಸ್ಥೆಗಳು ಕೈಜೋಡಿಸುವ ಅಗತ್ಯವಿದೆ ಎಂಬುದು ಗ್ರಾಮಸ್ಥರ ಕೋರಿಕೆಯಾಗಿದೆ.
ಶಾಸಕ ಶಿವರಾಮ ಹೆಬ್ಟಾರ್ ಅರಣ್ಯ ಇಲಾಖೆಯ ಕೆರೆ ಸಂಜೀವಿನಿ ಯೋಜನೆಯಡಿ 1 ಲಕ್ಷ ರೂ ನೀಡಿದ್ದರು. ನಂತರ ಎಲ್ಎಸ್‌ಎಂಪಿ ಸೊಸೈಟಿಯೂ ನೆರವು ನೀಡಿತ್ತು. ಇದೀಗ ಟಿಎಂಎಸ್ ಸಂಸ್ಥೆ, ತಾಲೂಕು ಪಂಚಾಯತ್ ಸಹ ನೆರವಿನ ಭರವಸೆ ನೀಡಿವೆ.
•ನರಸಿಂಹ ಸಾತೊಡ್ಡಿ