Advertisement
ಮುಖ್ಯರಸ್ತೆಗಳಲ್ಲಿ ಪೊಲೀಸರು ಬ್ಯಾರಿಕೇಡ್‌ಗಳಿಂದ ಲಾಕ್‌ಡೌನ್ ಮಾಡಿ, ಅದನ್ನು ಉಲ್ಲಂಘಿಸದಂತೆ ಕಾವಲು ಕಾಯುತ್ತಿದ್ದಾರೆ. ಆದರೆ, ಸ್ಥಳೀಯ ನಿವಾಸಿಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಆ ರಸ್ತೆಗಳನ್ನು ಕೂಡುವ ಉಪರಸ್ತೆಗಳನ್ನೂ ಬೇಲಿ ಹಾಕಿ ಬಂದ್ ಮಾಡಿದ್ದಾರೆ. ಕೆಲವರು ಪರ್ಯಾಯ ಮಾರ್ಗ ಹುಡುಕಲು ಪ್ರಯತ್ನಿಸುತ್ತಾರೆ. ಇನ್ನು ಹಲವರು ಬೇಲಿ ಜಿಗಿಯುವ ಸಾಹಸ ಮಾಡುತ್ತಿದ್ದಾರೆ. ಅಂತಹವರನ್ನು ತಡೆದು ನಿವಾಸಿಗಳು ವಿಚಾರಣೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದ ಕೆಲವು ಉಪರಸ್ತೆಗಳೂ ಸೀಲ್‌ಡೌನ್ ಆಗಿ ಪರಿವರ್ತನೆಯಾಗುತ್ತಿವೆ. ಬಡಾವಣೆಯ ಪ್ರವೇಶ ದ್ವಾರದ ರಸ್ತೆ ಹಾಗೂ ಕಡೆಯ ರಸ್ತೆಗೆ ದೊಡ್ಡದಾದ ಮರದ ದಿಮ್ಮಿಗಳನ್ನು ಅಡ್ಡ ಇಟ್ಟಿದ್ದಾರೆ. ಕೆಲವೆಡೆ ಪೊಲೀಸ್ ಬ್ಯಾರೀಕೇಡ್‌ಗಳನ್ನೂ ಬಳಕೆ ಮಾಡಿದ್ದಾರೆ. ಇನ್ನೂ ಹಲವೆಡೆ ಟಾಟಾಏಸ್ ವಾಹನಗಳು, ಆಟೋ, ಕಾರುಗಳನ್ನು, ಗಿಡದ ಪಾಟ್‌ಗಳು, ಬೈಕ್‌ಗಳನ್ನು ಅಡ್ಡವಿಟ್ಟು “ಸೀಲ್‌ಡೌನ್’ ಮಾಡಿದ್ದಾರೆ.
Related Articles
Advertisement
ಲಾಕ್‌ಡೌನ್‌ಗೆ ಸಾಥ್ : ಬಾಪೂಜಿನಗರ, ಪಾದರಾಯನಪುರ ವಾರ್ಡ್‌ಗಳಿಗೆ ಬಿಬಿಎಂಪಿ ಅಧಿಕೃತವಾಗಿ ಸೀಲ್‌ಡೌನ್ ಮಾಡಿದ ಬೆನ್ನಲ್ಲೇ ನಗರದ ಬಹುತೇಕ ವಾರ್ಡ್‌ಗಳು, ಬಡಾವಣೆಗಳಲ್ಲಿ ನಾಗರಿಕರು ಸೀಲ್ ಮಾಡಿಕೊಳ್ಳುವ ಕ್ರಮಗಳಿಗೆ ಮುಂದಾಗಿದ್ದಾರೆ. “ಹೊರಗಿನವರು ಬಡಾವಣೆಗಳಿಗೆ ಬರದಂತೆ ತಡೆಯು ವುದು ಹಾಗೂ ಸರ್ಕಾರದ ಆದೇಶದಂತೆ ಬಡವಾಣೆ ನಿವಾಸಿಗಳು ಸಹ ಹೊರಗೆ ಹೋಗದಂತೆ ಮಾಡುವುದು ಇದರ ಉದ್ದೇಶ. ಇದರಿಂದ ಯಾರಿಗೂ ತೊಂದರೆ ಆಗಿಲ್ಲ. ಸೋಂಕು ತಡೆಯಲು ಸರ್ಕಾರದ ಲಾಕ್‌ಡೌನ್‌ಗೆ ಸಾಥ್ ನೀಡುವಲ್ಲಿ ನಮ್ಮದೂ ಒಂದು ಪ್ರಯತ್ನ’ ಎಂದು ಎಲ್‌ಬಿಎಸ್ ನಗರದ ಪ್ರಮೋದ್ ಅಭಿಪ್ರಾಯ ವ್ಯಕ್ತಪಡಿಸಿದರು.
ತುರ್ತು ಸಂಚಾರ ಅವಶ್ಯ : ಮೇಲ್ಸೇತುವೆ, ಆಯ್ದ ಗ್ರೇಡ್ ಸಪರೇಟರ್ ಸೇರಿ ಕೆಲವೊಂದು ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಉಳಿದಂತೆ ಆಯಾ ಭಾಗಗಳಲ್ಲಿ ಜನರೇ ಸ್ವಯಂಪ್ರೇರಿತವಾಗಿ ಓಡಾಟಕ್ಕೆ ನಿರ್ಬಂಧ ವಿಧಿಸಿದ್ದಾರೆ. ಆದರೆ, ಆ್ಯಂಬುಲೆನ್ಸ್ ಸೇರಿದಂತೆ ತುರ್ತು ವಾಹನಗಳ ಸಂಚಾರಕ್ಕೆ ಅದರಿಂದ ತೊಂದರೆ ಆಗದಂತೆ ನಾಗರಿಕರು ಎಚ್ಚರಿಕೆ ವಹಿಸಬೇಕು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ತೊಂದರೆಯಲ್ಲಿ ಡೆಲಿವರಿ ಬಾಯ್ಸ್ : ಫುಡ್ ಡೆಲಿವರಿ ಮಾಡಬೇಕಾದ ಸ್ಥಳ ಹತ್ತಿರವೇ ಇದ್ದರೂ ಆ ರಸ್ತೆ ಮುಚ್ಚಿದ್ದರೆ ಸುತ್ತುಹಾಕಿ ಬೇರೆ ಮಾರ್ಗದ ಮೂಲಕ ಬರಬೇಕಾಗುತ್ತದೆ. ಇದರಿಂದ ಪೆಟ್ರೋಲ್ ವ್ಯಯ ಆಗುತ್ತದೆ. ಜತೆಗೆ ಸಮಯವೂ ವ್ಯರ್ಥವಾಗುತ್ತಿದೆ. ಕಳೆದ ಒಂದು ವಾರದಿಂದ ಈ ಸ್ಥಿತಿಯನ್ನು ಎದುರಿಸುತ್ತಿದ್ದೇವೆ. ಆದರೆ, ಸ್ಪಂದನೆ ದೊರೆಯುತ್ತಿಲ್ಲ. ಪೊಲೀಸ್ ಇಲಾಖೆ ಹಾಗೂ ಸ್ಥಳೀಯರ ಸೂಚನೆ ಪಾಲಿಸಬೇಕಷ್ಟೇ’ ಎನ್ನುತ್ತಾರೆ ಸ್ವಿಗ್ಗಿ ಫುಡ್ ಡೆಲಿವರಿ ಬಾಯ್ ಹುಲಿತೆಪ್ಪ.
-ಮಂಜುನಾಥ ಲಘುಮೇನಹಳ್ಳಿ