ಕುಂಬಳೆ:ತುಳುನಾಡಿನ ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರ ಸ್ವಾವಲಂಬಿ ಬದುಕಿಗೆ ಸ್ವಸಹಾಯ ಸಂಘಗಳು ಸಹಕಾರಿಯಾಗಲಿವೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಅನಂತಪುರದಲ್ಲಿ ಶನಿವಾರ ಜರಗಿದ ಕಾಸರಗೋಡು ಜಿಲ್ಲೆಯ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ2,701ನೇ ಸ್ವಸಹಾಯ ಸಂಘದ ಉದ್ಘಾಟನೆ ಮತ್ತು ನವಜೀವನ ಸಮಿತಿ ಸದಸ್ಯರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಧರ್ಮಸ್ಥಳ ಕ್ಷೇತ್ರದ ವತಿಯಿಂದ ಪುರುಷರಿಗೆ ಮತ್ತು ಮಹಿಳೆಯರಿ ಗಾಗಿ ಸ್ವಸಹಾಯ ಸಂಘಗಳನ್ನು ರಚಿಸಲಾಗಿದೆ. ಇದರಿಂದ ಗ್ರಾಮೀಣ ಪ್ರದೇಶದ ದುರ್ಬಲರು ಸಶಕ್ತರಾಗಿ ದ್ದಾರೆ. ಕೇರಳದಲ್ಲಿ ಸಕ್ರಿಯವಾಗಿರುವ ಕುಟುಂಬಶ್ರೀಯಂತೆ ಶ್ರೀ ಧರ್ಮಸ್ಥಳ ಸ್ವಸಹಾಯ ಸಂಘವು ರಾಜ್ಯಾದ್ಯಂತ ಜನಪ್ರಿಯವಾಗಿದೆ. ಹಲವಾರು ಜನ ಪರ ಯೋಜನೆಗಳನ್ನು ಸಂಘದ ಮೂಲಕ ಹಮ್ಮಿಕೊಳ್ಳಲಾಗಿದೆ ಎಂದರು.
ಮಂಜೇಶ್ವರ ಶಾಸಕ ಎಂ.ಸಿ. ಖಮರುದ್ದೀನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಶಾಸಕ ಎನ್.ಎ. ನೆಲ್ಲಿಕುನ್ನು, ಮಾಜಿ ಶಾಸಕ ಸಿ.ಎಚ್. ಕುಂಞಂಬು, ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ, ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ, ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿ, ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ, ಪ್ರಮುಖರಾದ ಡಾ| ಬಿ.ಎಸ್. ರಾವ್, ವಸಂತ ಸಾಲ್ಯಾನ್ ಉಡುಪಿ, ರಿಜಿ ಆರ್.ಆರ್., ಅರುಣಾ ಜೆ., ಅಶ್ವತ್ಥ ಪೂಜಾರಿ ಲಾಲ್‌ಬಾಗ್, ಮಹಾಲಿಂಗೇಶ್ವರ ಭಟ್,
ಉದಯ ಗಟ್ಟಿ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಮಾಸಾಶನ, ಸ್ವಸಹಾಯ ಸಂಘದ ಸದಸ್ಯರಿಗೆ ದಾಖಲಾತಿ ವಿತರಣೆ, ನವಜೀವನ ಸಮಿತಿ ಸದಸ್ಯರಿಗೆ ಪ್ರಶಸ್ತಿ ಪತ್ರ ವಿತರಣೆ, ಸುಜ್ಞಾನ ನಿಧಿ, ಕೃಷಿ ಆನುದಾನ, ಮೈಕ್ರೋ ಬಾಂಡ್ ವಿತರಣೆ, ಜಾಗೃತಿ ಅಣ್ಣ – ಜಾಗೃತಿ ಪ್ರಶಸ್ತಿ ಪ್ರದಾನ ನಡೆಯಿತು.
ಸತೀಶ್ ಶೆಟ್ಟಿ ಪ್ರಸ್ತಾವನೆಗೈದು ಸ್ವಾಗತಿಸಿದರು. ಚೇತನ ಎಂ. ಮತ್ತು ದೇವಿ ಪ್ರಸಾದ್ ಶೆಟ್ಟಿ ಬೆಜ್ಜ ಕಾರ್ಯಕ್ರಮ ನಿರೂಪಿಸಿದರು. ಕೆ.ಎನ್. ವೆಂಕಟ್ರಮಣ ಹೊಳ್ಳ ವಂದಿಸಿದರು.