Advertisement

ಮೈತ್ರಿ ಸರ್ಕಾರದಲ್ಲಿ ಸ್ವಾಭಿಮಾನ ಹರಣ: ಸೋಮಣ್ಣ

09:31 PM Nov 29, 2019 | Team Udayavani |

ಚಿಕ್ಕಬಳ್ಳಾಪುರ: ಹಿಂದಿನ ಕಾಂಗ್ರೆಸ್‌, ಜೆಡಿಎಸ್‌ ಮೈತ್ರಿ ಸರ್ಕಾರದಲ್ಲಿ ಜಿಲ್ಲೆಯ ಜನರ ಸ್ವಾಭಿಮಾನ ಹರಣ ಆಗಿದ್ದು, ಇದಕ್ಕಾಗಿ ಸುಧಾಕರ್‌ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕ್ಷೇತ್ರ ಹಾಗೂ ಜಿಲ್ಲೆಯ ಅಭಿವೃದ್ಧಿಗಾಗಿ ಮತ್ತೂಮ್ಮೆ ಜನರ ಅಶೀರ್ವಾದ ಪಡೆಯುತ್ತಿದ್ದು, ಸುಧಾಕರ್‌ ಗೆಲುವು ಶತಸಿದ್ಧ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು.

Advertisement

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ವಿವಿಧ ಕಡೆ ಶುಕ್ರವಾರ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸುಧಾಕರ್‌ ಪರ ಪ್ರಚಾರ ನಡೆಸಿ ಮಾತನಾಡಿದ ಅವರು, ಸುಧಾಕರ್‌ ಗೆದ್ದರೆ ಜನರ ಬದುಕು ಹಸನಾಗುತ್ತದೆ. ಸುಧಾಕರ್‌ ದೂರದೃಷ್ಟಿವುಳ್ಳ ನಾಯಕ ಎಂದು ಸಚಿವರು ಬಣ್ಣಿಸಿದರು.

ಜಿಲ್ಲೆಯ ಅಭಿವೃದ್ಧಿಗೆ ಸಹಕಾರಿ: ಈ ಉಪ ಚುನಾವಣೆ ಕ್ಷೇತ್ರದ ಜನರ ಸ್ವಾಭಿಮಾನದ ಪ್ರಶ್ನೆಯಾಗಿದ್ದು, ಅಭಿವೃದ್ಧಿ ಪರ ನಿಂತಿರುವ ಡಾ.ಕೆ.ಸುಧಾಕರ್‌ರನ್ನು ಮತ್ತೂಮ್ಮೆ ಅಶೀರ್ವಾದಿಸಬೇಕು. ಇದರಿಂದ ಕ್ಷೇತ್ರ ಮಾತ್ರವಲ್ಲದೇ ಜಿಲ್ಲೆಯ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದರು.

ಸ್ವಾಭಿಮಾನಕ್ಕೆ ಧಕ್ಕೆ: ರಾಜೀನಾಮೆಯ ಹಿಂದೆ ಯಾವುದೇ ಸ್ವಾರ್ಥ ಇಲ್ಲ. ಮೈತ್ರಿ ಸರ್ಕಾರದಲ್ಲಿ ಅಭಿವೃದ್ಧಿಗೆ ಹಿನ್ನಡೆ ಆಗಿದ್ದರಿಂದ ಸ್ವಾಭಿಮಾನಕ್ಕೆ ಧಕ್ಕೆಯಾಗಿದ್ದರಿಂದ ರಾಜೀನಾಮೆ ನೀಡಿದ್ದಾರೆ. ಕ್ಷೇತ್ರಕ್ಕೆ ಸಂಬಂಧ ಇಲ್ಲದ ಅಭ್ಯರ್ಥಿಗಳನ್ನು ಕಾಂಗ್ರೆಸ್‌, ಜೆಡಿಎಸ್‌ ನಿಲ್ಲಿಸಿದೆ ಎಂದು ಸೋಮಣ್ಣ ಟೀಕಿಸಿದರು.

ಕ್ಷೇತ್ರಕ್ಕೆ ಒಳ್ಳೆಯದಾಗಿದೆ: ಮುಂದಿನ ಮೂರೂವರೆ ವರ್ಷ ಅಭಿವೃದ್ಧಿ ಆಗಬೇಕಾದರೆ ಸುಧಾಕರ್‌ರಿಂದ ಮಾತ್ರ ಸಾಧ್ಯ. ಇಲ್ಲಿನ ಯುವಕರು ಬೆಳೆಯಬೇಕು, ತನಗಿಂತ ಎತ್ತರಕ್ಕೆ ಪ್ರಗತಿ ಸಾಧಿಸಬೇಕು ಎಂಬ ಕನಸು ಕಟ್ಟಿಕೊಂಡಿದ್ದಾರೆ.ಒಳ್ಳೆಯ ಮನಸ್ಸಿನಿಂದ ರಾಜಕಾರಣಕ್ಕೆ ಬಂದಿರುವ ಅವರಿಂದ ಕ್ಷೇತ್ರಕ್ಕೆ ಒಳ್ಳೆಯದಾಗಿದೆ ಎಂದು ಹೇಳಿದರು.

Advertisement

ಸುಧಾಕರ್‌ ಒಳ್ಳೆಯ ಅಭ್ಯರ್ಥಿ. ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಮೆಡಿಕಲ್‌ ಕಾಲೇಜಿಗೆ ಶಂಕುಸ್ಥಾಪನೆ ಮಾಡಿಸಿದ್ದಾರೆ. ಈಗಾಗಲೇ ಕಾಮಗಾರಿ ಸಹ ಆರಂಭ ಆಗಿದೆ. ಮಂಚೇನಹಳ್ಳಿ ತಾಲೂಕು ಘೋಷಣೆ ಮಾಡಿಸಿ ಜನರ ಆಸೆ ಈಡೇರಿಸಿದ್ದು ಇನ್ನೊಂದು ಹೆಗ್ಗಳಿಕೆ. ಇದು ಸುಧಾಕರ್‌ ಜೀವನದ ದೊಡ್ಡ ಸಾಧನೆ ಎಂದು ಹಾಡಿ ಹೊಗಳಿದರು.

ಸುಭದ್ರ ಆಡಳಿತ: ಈ ಚುನಾವಣೆ ಏಕೆ ಬಂದಿದೆ? ಸಮ್ಮಿಶ್ರ ಸರ್ಕಾರವನ್ನು ಧಿಕ್ಕಾರ ಮಾಡಿದ್ದು ಯಾಕೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಯಾವ ಶಾಸಕರಿಗೆ ಸ್ವಾಭಿಮಾನದ ಗೌರವ ಸಿಗುವುದಿಲ್ಲವೋ ಅಲ್ಲಿ ರಾಜಕಾರಣ ಮಾಡಬಾರದು. ಮುಂದಿನ ಮೂರುವರೆ ವರ್ಷ ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಸುಭದ್ರವಾದ ಆಡಳಿತ ನಡೆಸಲಿದೆ ಎಂದರು.

ಕೈಗಾರಿಕೆ ಸ್ಥಾಪಿಸಿ ಉದ್ಯೋಗಾವಕಾಶ ಕಲ್ಪಿಸುವೆ
ಚಿಕ್ಕಬಳ್ಳಾಪುರ: ಒಬ್ಬ ವೈದ್ಯನಾಗಿ ಜಿಲ್ಲೆಯ ಬಡಜನರ ಅನುಕೂಲಕ್ಕಾಗಿ ವೈದ್ಯಕೀಯ ಶಿಕ್ಷಣ ಕಾಲೇಜು ಸ್ಥಾಪಿಸಬೇಕೆಂಬ ನನ್ನ ಕನಸು ನನಸಾಗಿದ್ದು, 670 ಕೋಟಿ ರೂ. ವೆಚ್ಚದಲ್ಲಿ ಮೆಡಿಕಲ್‌ ಕಾಲೇಜು ಸ್ಥಾಪನೆ ಶತಸಿದ್ಧ. ಮುಂದಿನ ದಿನಗಳಲ್ಲಿ ಜಿಲ್ಲೆಯ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಲು ಸೂಕ್ತ ಕೈಗಾರಿಕೆಗಳನ್ನು ತರುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್‌ ಭರವಸೆ ನೀಡಿದರು.

ನಗರದ ವಿವಿಧ ವಾರ್ಡ್‌ಗಳಲ್ಲಿ ಶುಕ್ರವಾರ ಚುನಾವಣಾ ಪ್ರಚಾರ ಸಭೆಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಅಭಿವೃದ್ಧಿಗಾಗಿ ನನ್ನನ್ನು ಗೆಲ್ಲಿಸಿ, ಮೂರುವರೆ ವರ್ಷದಲ್ಲಿ ಸಾಕಷ್ಟು ಕನಸುಗಳನ್ನು ಹೊಂದಿದ್ದೇನೆ. ಅವು ಎಲ್ಲವನ್ನು ಈಡೇರಿಸಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.

ರಾಜಕೀಯ ದಿವಾಳಿ: ಜೆಡಿಎಸ್‌-ಕಾಂಗ್ರೆಸ್‌ ಅನೈತಿಕವಾಗಿ ಸರ್ಕಾರ ರಚಿಸಿ 14 ತಿಂಗಳು ಅಧಿಕಾರ ನಡೆಸಿದವು. ನಮ್ಮ ಭಾಗದ ಜನರಿಗೆ ಅನ್ಯಾಯ ಮಾಡಿದರು. ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಇಟ್ಟರು. ಎರಡು ಪಕ್ಷಗಳ ಅಭ್ಯರ್ಥಿಗಳು ಈ ಕ್ಷೇತ್ರಕ್ಕೆ ಏನೂ ಮಾಡಿಲ್ಲ, ಪಕ್ಷ ನಿಷ್ಠೆ ಇಲ್ಲ, ಅಭಿವೃದ್ಧಿ ಮಾಡಿಲ್ಲ, ಜನಪರ ಕೆಲಸವನ್ನು ಎಲ್ಲೂ ಮಾಡಿಲ್ಲ. ಇಂತ ಇಬ್ಬರನು °ಎರಡು ಪಕ್ಷಗಳು ಅಭ್ಯರ್ಥಿಯನ್ನಾಗಿ ನಿಲ್ಲಿಸಿವೆ. ಈ ಮೂಲಕ ರಾಜಕೀಯ ದಿವಾಳಿಯಾಗಿವೆ ಎಂದು ವಾಗ್ಧಾಳಿ ನಡೆಸಿದರು.

ಈ ಕ್ಷೇತ್ರಕ್ಕೆ ಹಲವರು ಶಾಸಕರಾಗಿ ಬಂದು ಹೋಗಿದ್ದಾರೆ. ಆದರೆ ನೀರಾವರಿಗೆ ಯಾವುದೇ ಕೆಲಸ ಮಾಡಿಲ್ಲ. ಆದರೆ ನಾನು ಆಯ್ಕೆಯಾದ ಮೇಲೆ ಎಚ್‌.ಎನ್‌ ವ್ಯಾಲಿ ಹಾಗೂ ಎತ್ತಿನಹೊಳೆ ಅನುಷ್ಠಾನಗೊಳಿಸಲಾಗುತ್ತಿದೆ. ನಿಮ್ಮ ಬಗ್ಗೆ ಕಾಳಜಿ ಬದ್ಧತೆ ಜವಾಬ್ದಾರಿ ಇಲ್ಲದವರಿಗೆ ಮತ ಹಾಕಬೇಡಿ ಎಂದರು. ಜಿಲ್ಲಾ ಕೇಂದ್ರದಲ್ಲಿ ಸಾಕಷ್ಟು ರಸ್ತೆಗಳು ಹದಗೆಟ್ಟಿದ್ದವು. ಆದರೆ ನನ್ನ ಪ್ರಯತ್ನದಿಂದ ಹಲವು ರಸ್ತೆಗಳು ಅಭಿವೃದ್ಧಿ ಆಗಿದೆ. ರಸ್ತೆ, ಚರಂಡಿ ನಿರ್ಮಾಣಕ್ಕೆ ಒತ್ತು ಕೊಡಲಾಗಿದೆ. ನಗರಸ ವಿವಿಧ ಕಡೆಗಳಲ್ಲಿ ರಸ್ತೆ ಉದ್ಯಾನವನಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ ಎಂದರು.

ಮುಂದಿನ ಮೂರುವರೆ ವರ್ಷ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡುವ ಕಾರ್ಯ ಮಾಡುತ್ತೇನೆ. ನಗರದ ವಸತಿ ಹಾಗೂ ನಿವೇಶನ ರಹಿತರಿಗೆ 5 ಸಾವಿರ ಜನರಿಗೆ ನಿವೇಶನ ನೀಡುತ್ತಿದ್ದೇವೆ. ಇವರಿಗೆ ಮನೆ ಕಟ್ಟಿಕೊಡಲು ಹಿಂದೆ 1.5 ಲಕ್ಷ ರೂ.ನೀಡಲಾಗುತ್ತಿತ್ತು. ಈಗ 5 ಲಕ್ಷರೂ.ಗೆ ಹೆಚ್ಚಿಸಲಾಗಿದೆ ಎಂದರು.

ಅಧಿಕಾರ ದುರುಪಯೋಗ ಮಾಡಿಕೊಂಡು ಚಿಕ್ಕಬಳ್ಳಾಪುರಕ್ಕೆ ಲಭಿಸಿದ್ದ ಮೆಡಿಕಲ್‌ ಕಾಲೇಜನ್ನು ಕನಕಪುರಕ್ಕೆ ಕೊಂಡೊಯ್ದದ್ದು ಚಿಕ್ಕಬಳ್ಳಾಪುರಕ್ಕೆ ಮಾಡಿದ ಅನ್ಯಾಯ ಅಲ್ಲವಾ? ರಾಮನಗರದಲ್ಲಿ ಮೆಡಿಕಲ್‌ ಕಾಲೇಜು, ಆರೋಗ್ಯ ವಿವಿಯೇ ಇದೆ. 10 ಕಿ.ಮಿ. ದೂರದಲ್ಲಿರುವ ಕನಕಪುರಕ್ಕೆ ಮೆಡಿಕಲ್‌ ಕಾಲೇಜಿನ ಅಗತ್ಯವಿತ್ತಾ?
-ಡಾ.ಕೆ.ಸುಧಾಕರ್‌, ಬಿಜೆಪಿ ಅಭ್ಯರ್ಥಿ

Advertisement

Udayavani is now on Telegram. Click here to join our channel and stay updated with the latest news.

Next