Advertisement

Yuva Nidhi Scheme: “ಲಕ್ಷ’ದಲ್ಲಿ “ಸಾವಿರ’ ಮಂದಿಗೆ ಮಾತ್ರ “ಯುವನಿಧಿ’ ಭಾಗ್ಯ

01:03 AM Jul 23, 2024 | Team Udayavani |

ಮಂಗಳೂರು: ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ “ಯುವನಿಧಿ’ ಆರಂಭದಲ್ಲೇ ಹಿನ್ನಡೆ ಕಾಣುತ್ತಿದ್ದು, ನೋಂದಾಯಿತ “ಲಕ್ಷ’ ಫಲಾನುಭವಿಗಳ ಪೈಕಿ ಹಣ ದೊರೆಯುತ್ತಿರುವುದು ಕೆಲವು “ಸಾವಿರ’ ಮಂದಿಗೆ ಮಾತ್ರ!

Advertisement

ಯೋಜನೆಯ ಫಲಾನುಭವಿಗಳು “ತಾನು ನಿರುದ್ಯೋಗಿ, ವ್ಯಾಸಂಗ ಮುಂದುವರಿಸುತ್ತಿಲ್ಲ ಹಾಗೂ ಸ್ವಉದ್ಯೋಗಿಯಾಗಿಲ್ಲ’ ಎಂದು ಪ್ರತಿ ತಿಂಗಳ 25ನೇ ತಾರೀಕಿನೊಳಗೆ ಕಡ್ಡಾಯವಾಗಿ ಸ್ವಯಂ ಘೋಷಣೆ ಪ್ರಮಾಣಪತ್ರವನ್ನು ಜಿಲ್ಲಾ ಉದ್ಯೋಗಾಧಿಕಾರಿಗೆ ನೀಡಬೇಕು ಎಂದು ಇತ್ತೀಚೆಗೆ ರಾಜ್ಯ ಸರಕಾರ ಹೊಸ ಆದೇಶ ನೀಡಿತ್ತು. ಆದರೆ ಸಾಕಷ್ಟು ಮಂದಿ ಫಲಾನುಭವಿಗಳು ಮರೆತು ಹೋಗಿ ಸ್ವಯಂ ಘೋಷಣೆ ಮಾಡುವುದಿಲ್ಲ ಅಥವಾ ಕೆಲವರು ವಿಳಂಬವಾಗಿ ಮಾಡುವುದರಿಂದ ಖಾತೆಗೆ ಹಣ ಜಮೆ ಆಗುತ್ತಿಲ್ಲ ಎನ್ನುವುದು ಅಧಿಕಾರಿಗಳ ಅಭಿಪ್ರಾಯ.

ಜೂನ್‌ನಲ್ಲಿ 57,208
ಫಲಾನುಭವಿಗಳಿಗೆ ಸಿಕ್ಕಿಲ್ಲ
ಜೂನ್‌ನಲ್ಲಿ ವಿಶ್ವವಿದ್ಯಾನಿಲಯಗಳಲ್ಲಿ ಪರಿಶೀಲನೆ ವೇಳೆ ರಾಜ್ಯದಲ್ಲಿ 13,784 ಮಂದಿಯ ಅರ್ಜಿ ತಿರಸ್ಕೃತಗೊಂಡಿದ್ದರೆ, ಐಟಿ – ಜಿಎಸ್‌ಟಿ ಪಾವತಿ ಮಾಡುವವರಾದ ಕಾರಣ 117 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. 186 ಮಂದಿಯ ಅರ್ಜಿ ಇತರ ಕಾರಣಕ್ಕಾಗಿ ತಿರಸ್ಕೃತಗೊಂಡಿದೆ. ಮುಖ್ಯವಾಗಿ 43,121 ಮಂದಿ ತಿಂಗಳ ಸ್ವಯಂ ಘೋಷಣೆ ಪ್ರಮಾಣ ಪತ್ರ ನೀಡಿಲ್ಲ. ಹೀಗಾಗಿ ಒಟ್ಟು 57,208 ಮಂದಿಯನ್ನು ಜೂನ್‌ನಲ್ಲಿ ಯೋಜನೆಯಡಿ ಪರಿಗಣಿಸಿಲ್ಲ.

ನೋಂದಣಿಯಲ್ಲಿ ಬೆಳಗಾವಿ ಪ್ರಥಮ
ಬೆಳಗಾವಿ ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತ್ಯಧಿಕ ಮಂದಿ ಫಲಾನುಭವಿಗಳು ಯುವನಿಧಿ ಯೋಜನೆಯಡಿ ನೋಂದಣಿ ಮಾಡಿಕೊಂಡಿದ್ದಾರೆ. ಬೆಳಗಾವಿಯಲ್ಲಿ 14,783 ಮಂದಿ ನೋಂದಣಿ ಮಾಡಿದ್ದಾರೆ. ಬೆಂಗಳೂರು ನಗರದಲ್ಲಿ 11,670, ಕಲಬುರಗಿಯಲ್ಲಿ 11,667, ರಾಯಚೂರಿನಲ್ಲಿ 10,534 ಮಂದಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಕನಿಷ್ಠ 1,151 ಮಂದಿ ನೋಂದಣಿ ಮಾಡಿದ್ದಾರೆ.

ಉಡುಪಿಯಲ್ಲಿ 3 ತಿಂಗಳ ಮೊತ್ತ ಬಾಕಿ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 3,928 ಮಂದಿ ಮತ್ತು ಉಡುಪಿ ಜಿಲ್ಲೆಯಲ್ಲಿ 2,580 ಮಂದಿ ನೋಂದಣಿ ಮಾಡಿಸಿಕೊಂಡಿದ್ದಾರೆ. ದ.ಕ. 20ನೇ ಮತ್ತು ಉಡುಪಿ 27ನೇ ಸ್ಥಾನದಲ್ಲಿದೆ. ದ.ಕ ಜಿಲ್ಲೆಯಲ್ಲಿ ಮಾರ್ಚ್‌ನಲ್ಲಿ 2027 ಮಂದಿಗೆ 60,39,000 ರೂ., ಎಪ್ರಿಲ್‌ನಲ್ಲಿ 277 ಫಲಾಭವಿಗಳಿಗೆ 8,11,500 ರೂ. ಮತ್ತು ಮೇ ತಿಂಗಳಲ್ಲಿ 602 ಮಂದಿಗೆ 17,65,500 ರೂ. ಪಾವತಿಯಾಗಿದೆ. ಉಡುಪಿ ಜಿಲ್ಲೆಯಲ್ಲಿ ಮಾರ್ಚ್‌ ವರೆಗೆ 1,406 ಮಂದಿಗೆ 86,11,500 ರೂ. ಪಾವತಿಯಾಗಿದೆ. ಉಡುಪಿಯಲ್ಲಿ ಮೂರು ತಿಂಗಳ ಮೊತ್ತ ಇನ್ನಷ್ಟೇ ಪಾವತಿಯಾಗಬೇಕಿದ್ದು, ಹಂತ ಹಂತವಾಗಿ ಬಿಡುಗಡೆಯಾಗಲಿದೆ ಎನ್ನುತ್ತಾರೆ ಅಧಿಕಾರಿಗಳು.

Advertisement

“ಯುವನಿಧಿ’ಗೆ ಯಾರು ಅರ್ಹರು?
ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾಗಳನ್ನು 2023ರಲ್ಲಿ ತೇರ್ಗಡೆಯಾಗಿರುವವರು, ಈಗಾಗಲೇ ಸೇವಾ ಸಿಂಧು ಪೋರ್ಟಲ್‌ನಲ್ಲಿ ನೋಂದಣಿಯಾಗಿದ್ದು ಹಾಗೂ ಫಲಿತಾಂಶದ ಬಳಿಕ ನಿರುದ್ಯೋಗಿಗಳಾಗಿ 180 ದಿವಸಗಳು ಪೂರೈಸಿದ ಅಭ್ಯರ್ಥಿಗಳು ಯುವನಿ ಧಿಗೆ ಅರ್ಹರು. ಜಿಲ್ಲಾವಾರು ಲಾಗಿನ್‌ ಇಲ್ಲದೆ ಅರ್ಜಿ ಸಲ್ಲಿಸಿದ ಫಲಾನುಭವಿಗಳ ಮಾಹಿತಿ ಜಿಲ್ಲೆಯಲ್ಲಿ ಸಿಗುವುದಿಲ್ಲ. ಇದರಿಂದಾಗಿ ಅರ್ಜಿಯ ಸ್ಥಿತಿಯನ್ನು ಜಿಲ್ಲಾ ಮಟ್ಟದ ಅಧಿಕಾರಿಗಳು ತಿಳಿಯಲು ಸಾಧ್ಯವಾಗುವುದಿಲ್ಲ ಎನ್ನುವ ಮಾತು ಅಧಿಕಾರಿಗಳದ್ದು.

68.52 ಕೋ.ರೂ. ಜಮೆ
ರಾಜ್ಯದಲ್ಲಿ ಜು.18ರ ವರೆಗೆ 1,63,816 ಮಂದಿ “ಯುವನಿಧಿ’ಗೆ ನೋಂದಣಿ ಮಾಡಿಸಿಕೊಂಡಿದ್ದಾರೆ. ಇವರಲ್ಲಿ ಯೋಜನೆಯ ಲಾಭ ಪಡೆಯುತ್ತಿರುವವರ ಸಂಖ್ಯೆ ಸಾವಿರದಲ್ಲಿದೆ. ಮಾರ್ಚ್‌ನಲ್ಲಿ 16,051 ಮಂದಿ ಫಲಾನುಭವಿಗಳಿಗೆ 4,77,88,500 ರೂ. ಜಮೆ ಮಾಡಲಾಗಿದೆ. ಎಪ್ರಿಲ್‌ನಲ್ಲಿ 37,573 ಮಂದಿ 11,24,17,500 ರೂ., ಮೇ ತಿಂಗಳಲ್ಲಿ 32,664 ಮಂದಿ 9,76,71,000 ರೂ., ಜೂನ್‌ನಲ್ಲಿ 89,981 ಮಂದಿಗೆ 26,83,68,000 ರೂ. ಡಿಬಿಟಿ ಮೂಲಕ ಜಮೆ ಮಾಡಲಾಗಿದೆ. ರಾಜ್ಯದಲ್ಲಿ ಜನವರಿಯಿಂದ ಜೂನ್‌ ವರೆಗೆ ಒಟ್ಟು 2,29,676 ಫಲಾನುಭವಿಗಳಿಗೆ 68,52,49,500 ರೂ.ಡಿಬಿಟಿ ಮೂಲಕ ಖಾತೆಗೆ ಜಮೆ ಮಾಡಲಾಗಿದೆ.

ಯುವನಿಧಿ ಫಲಾನುಭವಿಗಳಿಗೆ ಸೂಕ್ತವೆನಿಸುವ ಕೌಶಲ ತರಬೇತಿ ನೀಡಿ, ಅವರನ್ನು ಉದ್ಯೋಗ ದೊರೆಯುವ ನಿಟ್ಟಿನಲ್ಲಿ ಪೂರಕವಾಗಿ ಸಿದ್ಧಪಡಿಸಲು ಸರಕಾರ ಉದ್ದೇಶಿಸಿದೆ. ಆ ಮೂಲಕ ನಿರುದ್ಯೋಗ ಪ್ರಮಾಣವನ್ನು ತಗ್ಗಿಸುವ ಉದ್ದೇಶವನ್ನೂ ಹೊಂದಲಾಗಿದೆ.
– ಪ್ರದೀಪ್‌ ಡಿ’ಸೋಜಾ ದ.ಕ. ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ

ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಕರಾವಳಿ ಜಿಲ್ಲೆಗಳಲ್ಲಿ “ಯುವನಿಧಿ’ ಯೋಜನೆಗೆ ಫಲಾನುಭವಿಯಾಗುವವರ ಸಂಖ್ಯೆ ಕಡಿಮೆ ಇದೆ. ಪದವಿ, ಡಿಪ್ಲೊಮಾ ಮಾಡಿದವರಿಗೆ ಏನಾದರೂ ಉದ್ಯೋಗ ದೊರೆಯುತ್ತದೆ. ಹೆಚ್ಚಿನ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಮಾಡುತ್ತಾರೆ. ಕೆಲವರು ಉದ್ಯೋಗ ಸಿಗದಿದ್ದರೂ, ಯೋಜನೆಯ ಫಲಾನುಭವಿಗಳಾಗಲು
ಇಚ್ಛಿಸುವುದಿಲ್ಲ.
– ವೈ.ಎಂ. ಬಡಿಗೇರ ದ.ಕ. ಜಿಲ್ಲಾ ಉದ್ಯೋಗಾಧಿಕಾರಿ

-ಭರತ್‌ ಶೆಟ್ಟಿಗಾರ್‌

 

Advertisement

Udayavani is now on Telegram. Click here to join our channel and stay updated with the latest news.

Next