ಹೊಸದಿಲ್ಲಿ: ಇದೇ ತಿಂಗಳ 13ರಿಂದ 15ರವರೆಗೆ ರಾಜಸ್ಥಾನದ ಉದಯಪುರದಲ್ಲಿ ನಡೆಯಲಿರುವ ಕಾಂಗ್ರೆಸ್ ಚಿಂತನ ಶಿಬಿರದಲ್ಲಿ ಪಾಲ್ಗೊಳ್ಳಲಿರುವ ಎಲ್ಲ ಕಾಂಗ್ರೆಸ್ ನಾಯಕರು, ತಮ್ಮೆಲ್ಲಾ ಭಿನ್ನಾಭಿಪ್ರಾಯ ಬದಿಗಿಟ್ಟು ಪಕ್ಷವನ್ನು ಬಲಗೊಳಿಸುವಲ್ಲಿ ಏಕತೆ, ಒಗ್ಗಟ್ಟು, ಬದ್ಧತೆಯನ್ನು ಪ್ರದರ್ಶಿಸಬೇಕೆಂದು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ಎಲ್ಲ ರಾಜ್ಯಗಳಲ್ಲಿರುವ ಕಾಂಗ್ರೆಸ್ ನಾಯಕರನ್ನು ಆಗ್ರಹಿಸಿದ್ದಾರೆ.
ಚಿಂತನ ಶಿಬಿರ ಹಿನ್ನೆಲೆಯಲ್ಲಿ ದಿಲ್ಲಿ ಯಲ್ಲಿರುವ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮತಿ ಸಭೆಯಲ್ಲಿ ಈ ಸೂಚನೆಯನ್ನು ಸೋನಿಯಾ ಅವರು ರವಾನಿಸಿದ್ದಾರೆ.
ಕಾರ್ಯತಂತ್ರಗಳ ಬಗ್ಗೆ ಚರ್ಚೆ?: ಚಿಂತನ ಶಿಬಿರದಲ್ಲಿ ಸದ್ಯದಲ್ಲೇ ನಡೆಯಲಿರುವ ರಾಷ್ಟ್ರಪತಿ ಹಾಗೂ ಉಪರಾಷ್ಟ್ರಪತಿ ಚುನಾವಣೆಗಳಲ್ಲಿ ಎನ್‌ಡಿಎ ಕಣಕ್ಕಿಳಿಸಲಿರುವ ಅಭ್ಯರ್ಥಿಗಳಿಗೆ ವಿರುದ್ಧವಾಗಿ ಯುಪಿಎ ವತಿಯಿಂದ ಇಳಿಸಬೇಕಾದ ಅಭ್ಯರ್ಥಿಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆಗಳಿವೆ.
ಎನ್‌ಡಿಎ ಅಭ್ಯರ್ಥಿಗಳ ಜಯಕ್ಕೆ ಬೇಕಾದ 1.17 ಲಕ್ಷ ಮತಗಳು ಎನ್‌ಡಿಎ ಬಳಿಯಿಲ್ಲ. ಆದರೆ, ಎನ್‌ಡಿಎ ಹೊರತಾದ, ಯುಪಿಎ ಹೊರತಾದ ಪಕ್ಷಗಳ ಮತಗಳು ಎನ್‌ಡಿಎ, ಯುಪಿಎ ಅಭ್ಯರ್ಥಿಗಳ ಜಯದಲ್ಲಿ ಪ್ರಧಾನ ಪಾತ್ರ ವಹಿಸುತ್ತವೆ. ಹಾಗಾಗಿ ಆ ವಿಚಾರ ಇಲ್ಲಿ ಚರ್ಚೆಗೊಳಪಡುವ ಸಾಧ್ಯತೆಗಳಿವೆ.