Advertisement

ಕೇಶದಾನದ ಮೂಲಕ ಆತ್ಮವಿಶ್ವಾಸ

04:25 PM Aug 14, 2018 | Team Udayavani |

ಬೆಂಗಳೂರು: ಕ್ಯಾನ್ಸರ್‌ ಪತ್ತೆಯಾಗಿದೆ. ಆಗಲೇ ಎರಡನೇ ಸ್ಟೇಜ್‌ ದಾಟಿದೆ ಎಂಬಂತ ಮಾಹಿತಿ ಗೊತ್ತಾದರೆ, ಮರುಕ್ಷಣದಿಂದಲೇ ಸಾವಿನ ಭಯ ಜೊತೆಯಾಗುತ್ತದೆ. ಅದರ ಹಿಂದೆಯೇ ಚಿಕಿತ್ಸೆಯ ರೂಪದಲ್ಲಿ ಬರುವ ಕೀಮೋ ಥೆರಪಿಯ ನೋವು ಒಂದೆಡೆಯಾದರೆ, ಕೀಮೋದ ಎಫೆಕ್ಟ್ನಿಂದಾಗಿ ತಲೆಗೂದಲು ಉದುರುವ ನೋವು ಇನ್ನೊಂದು ಕಡೆ.

Advertisement

ಚಿಕಿತ್ಸೆಯ ನಂತರ ಹಿಡಿಹಿಡಿಯಾಗಿ ಉದುರುವ ಕೂದಲನ್ನು ನೋಡಿಯೇ ರೋಗಿಯ ಆತ್ಮವಿಶ್ವಾಸ ಪಾತಾಳಕ್ಕಿಳಿಯುತ್ತದೆ. ಕೂದಲು, ಸೌಂದರ್ಯಕ್ಕೆ ಭೂಷಣ ಎಂದು ನಂಬಿರುವ ಮಹಿಳೆಯರಂತೂ ಆ ಭಯದಿಂದಲೇ ಚಿಕಿ ತ್ಸೆಯೇ ಬೇಡ ಎನ್ನುತ್ತಾರೆ. ಕೂದಲು ಕಳೆದು ಕೊಂಡು ಖನ್ನತೆಗೆ ಜಾರುತ್ತಾರೆ. ದುಡ್ಡಿದ್ದವರು ವಿಗ್‌ ಖರೀದಿಸಬಹುದು.

ಆದರೆ ಎಲ್ಲರಿಗೂ ಅದು ಸಾಧ್ಯವಾಗುವುದಿಲ್ಲವಲ್ಲ? ಅಂತಹ ರೋಗಿಗಳಲ್ಲಿ ಆತ್ವವಿಶ್ವಾಸ ತುಂಬಲು ದೇಶಾದ್ಯಂತ “ಗಿಫ್ಟ್ ಹೇರ್‌ ಗಿಫ್ಟ್ ಕಾನ್ಫಿಡೆನ್ಸ್‌’ ಎಂಬ ಅಭಿಯಾನ ನಡೆಯುತ್ತಿದೆ. ಮಾನವ ಕೇಶೋದ್ಯಮದಲ್ಲಿ ಹೆಸರು ಮಾಡಿರುವ ಬಿ ಆಂಡ್‌ ಎಚ್‌ ಎಕ್ಸ್‌ಪೋರ್ಟ್ಸ್ನ ಅಂಗಸಂಸ್ಥೆಯಾದ ಚೆರಿಯನ್‌ ಫೌಂಡೇಶನ್‌ ವತಿಯಿಂದ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ.

ಲೇಡಿಸ್‌ ಸರ್ಕಲ್‌ ಇಂಡಿಯಾ ಸಹಯೋಗದಲ್ಲಿ ಜೂನ್‌ 5ರಿಂದ ದೇಶಾದ್ಯಂತ ಈ ಅಭಿಯಾನ ನಡೆಯುತ್ತಿದ್ದು, ಸಂಗ್ರಹಿಸಿದ ಕೂದಲಿನಿಂದ 350 ವಿಗ್‌ಗಳನ್ನು ತಯಾರಿಸಿ, ಬಡ ಕ್ಯಾನ್ಸರ್‌ ರೋಗಿಗಳಿಗೆ ದಾನವಾಗಿ ನೀಡುವ ಉದ್ದೇಶವಿದೆ. ಆಗಸ್ಟ್‌ 8ರಂದು ಮೌಂಟ್‌ ಕಾರ್ಮೆಲ್‌ ಕಾಲೇಜಿನ ವಿದ್ಯಾರ್ಥಿನಿಯರು ಕೂಡ ಕೇಶದಾನದ ಮೂಲಕ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ. 50 ವಿದ್ಯಾರ್ಥಿನಿಯರು ತಮ್ಮ ಕೂದಲನ್ನು ಕತ್ತರಿಸಿಕೊಂಡರೆ, ಒಬ್ಬ ವಿದ್ಯಾರ್ಥಿನಿ ಇಡೀ ತಲೆಯನ್ನೇ ಬೋಳಿಸಿ ಕೊಳ್ಳುವ ಮೂಲಕ ದಿಟ್ಟತನ ಮೆರೆದರು. 

ಈ ಸಂದರ್ಭದಲ್ಲಿ, ಚೆರಿಯನ್‌ ಫೌಂಡೇಷನ್‌ ನ ಟ್ರಸ್ಟಿ ಸಾರಾ ಬೆಂಜಮಿನ್‌ ಮಾತನಾಡಿ, “ಕ್ಯಾನ್ಸರ್‌ಗೆ ತುತ್ತಾಗಿರುವ ರೋಗಿಗಳು ಯಾವುದೇ ಭೀತಿಯಿಲ್ಲದೆ ಚಿಕಿತ್ಸೆ ಪಡೆಯುವ ನಿಟ್ಟಿನಲ್ಲಿ ಅವರ ಆತ್ಮವಿಶ್ವಾಸ ಹೆಚ್ಚಿಸುವ ಉದ್ದೇಶವನ್ನು ಟ್ರಸ್ಟ್‌ ಹೊಂದಿದೆ’ ಎಂದರು.

Advertisement

ಬಿ ಆಂಡ್‌ಎಚ್‌ ಎಕ್ಸ್‌ಪೋರ್ಟ್ಸ್ನ ವ್ಯವಸ್ಥಾಪಕ ನಿರ್ದೇಶಕ ಜಾರ್ಜ್‌ ಬಿ.ಚೆರಿಯನ್‌ ಮಾತನಾಡಿ, “ಬಿ ಆಂಡ್‌ ಎಚ್‌ ಎಕ್ಸ್‌ಪೋರ್ಟ್ಸ್, ಮಾನವ ಕೇಶೋದ್ಯಮದಲ್ಲಿ ಕಳೆದ 40 ವರ್ಷಗಳಿಂದ ಕ್ರಾಂತಿಕಾರಿ ಬದಲಾವಣೆ ತರುತ್ತಿದೆ. ಅಭಿಯಾನದಲ್ಲಿ ಸಂಗ್ರಹಿಸಿದ ಕೂದಲಿನಿಂದ ಕಂಪನಿಯ ತಾಂತ್ರಿಕ ಪರಿಣಿತರು ಅಂತಾರಾಷ್ಟ್ರೀಯ ಗುಣಮಟ್ಟದ ವಿಗ್‌ಗಳನ್ನು ತಯಾರಿಸಿ ಪೂರೈಸುತ್ತಿದ್ದಾರೆ’ ಎಂದರು.

ಲೇಡಿಸ್‌ ಸರ್ಕಲ್‌ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷೆ ನಮ್ರತಾ ಶೆಣೈ ಮಾತನಾಡಿ, “ನಮ್ಮ ಸಂಸ್ಥೆ 1968ರಿಂದ ಸೌಲಭ್ಯವಂಚಿತ ಜನರಿಗೆ ಸೇವೆ ಪೂರೈಸುತ್ತಿದೆ. 2 ವರ್ಷಗಳಿಂದ ಚೆರಿಯನ್‌ ಫೌಂಡೇ ಶನ್‌ನ ಈ ಅಭಿಯಾನದಲ್ಲಿ ಕೈ ಜೋಡಿಸುತ್ತಿದ್ದೇವೆ. ಕಾಯಿಲೆಯ ಕಾರಣದಿಂದ ಕಂಗಾಲಾದ ಮಹಿಳೆಯರ ಬಾಳಿನಲ್ಲಿ ಭರವಸೆಯ ನಗು ಮೂಡಿಸುವುದು ನಮ್ಮ ಉದ್ದೇಶ’ ಎಂದರು.

ಕ್ಯಾನ್ಸರ್‌ ಜಾಗೃತಿ ಶಿಬಿರ, ಕ್ಯಾನ್ಸರ್‌ಪೀಡಿತ ಮಕ್ಕಳಿಗೆ ಆಟದ ಮೈದಾನ ನಿರ್ಮಾಣ, ವಿಗ್‌ ತಯಾರಿಸಲು ನಿಧಿ ಸಂಗ್ರಹ, ರೋಗಿಗಳಿಗೆ ಕೂದಲ ಶೈಲಿಗಳ ಬಗ್ಗೆ ತರಬೇತಿ, ಟೋಫ‌ನ್‌ ಬಳಕೆಯ ತರಬೇತಿ, ಹಳೆಯ ವಿಗ್‌ಗಳನ್ನು ಶುಚಿಗೊಳಿಸಿ, ನವೀಕರಿಸಿ ಅರ್ಹ ಕ್ಯಾನ್ಸರ್‌ ಪೀಡಿತ ಮಹಿಳೆ ಯರಿಗೆ ನೀಡುವಂತ ವಿಶಿಷ್ಟ ಕಾರ್ಯಕ್ರಮಗಳೂ ಟ್ರಸ್ಟ್‌ ವತಿಯಿಂದ ನಡೆಯುತ್ತಿವೆ.

ಚೆರಿಯನ್‌ ಫೌಂಡೇಶನ್‌ನ ಟ್ರಸ್ಟಿ ಸಾರಾ ಬಿ. ಚೆರಿಯನ್‌, ಕಿದ್ವಾಯಿ ಕ್ಯಾನ್ಸರ್‌ ಇನ್ಸ್‌ಟಿಟ್ಯೂಟ್‌ನ ನಿರ್ದೇಶಕ ಡಾ. ರಾಮಚಂದ್ರ, ಕಾಲೇಜಿನ ಪ್ರಾಂಶುಪಾಲರಾದ ಡಾ.ಎಸ್‌.ಅಪರ್ಣಾ, ಬಿ ಆಂಡ್‌ ಎಚ್‌ ಎಕ್ಸ್‌ಪೋರ್ಟ್‌ನ ವ್ಯವಸ್ಥಾಪಕ ನಿರ್ದೇಶಕ ಜಾರ್ಜ್‌ ಬಿ. ಚೆರಿಯನ್‌, ಲೇಡಿಸ್‌
ಸರ್ಕಲ್‌ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷೆ ನಮ್ರತಾ ಶೆಣೈ ಭಾಗವಹಿಸಿದ್ದರು. 

ಈವರೆಗೂ “ಚೆರಿಯನ್‌ ಫೌಂಡೇಶನ್‌ ವಿಗ್‌ ದಾನ ಅಭಿಯಾನ’ ಎಂದು ಕರೆಯಲ್ಪಡುತ್ತಿದ್ದ ಈ ಅಭಿಯಾನದ ಮೂಲಕ, ಕಳೆದ ನಾಲ್ಕು ವರ್ಷಗಳಲ್ಲಿ 450 ವಿಗ್‌ಗಳನ್ನು ದಾನವಾಗಿ ನೀಡಲಾಗಿದೆ. ಟ್ರಸ್ಟ್‌ ವತಿಯಿಂದ ಕಿದ್ವಾಯಿ ಮತ್ತು ಅಡ್ಯಾರ್‌ ಕ್ಯಾನ್ಸರ್‌ ಇನ್ಸ್‌ಟಿಟ್ಯೂಟ್‌ನಲ್ಲಿ ಮೆಗಾ ವಿಗ್‌ ಡೊನೇಶನ್‌ ನಡೆಯಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next